ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾಡಾನೆ ದಾಳಿಗೆ ಸಾಕಾನೆ ಸಾವು; ದೊಡ್ಡಹರವೆ ಕಾವೇರಿ ಶಿಬಿರದಲ್ಲಿ ದುರಂತ

Elephant attack in Mysuru: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹುಣಸೂರು ಅರಣ್ಯ ವಲಯಕ್ಕೆ ಸೇರಿದ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಗಂಡು ಸಾಕಾನೆಯೊಂದನ್ನು ಕಾಡಾನೆ ಸಾಯಿಸಿರುವ ಘಟನೆ ನಡೆದಿದೆ. ಶಿಬಿರದಲ್ಲಿದ್ದ ರಾಮಯ್ಯ ಎಂಬ ಹೆಸರಿನ ಸಾಕಾನೆಯು ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ.

ಕಾಡಾನೆ ದಾಳಿಗೆ ದೊಡ್ಡಹರವೆ ಕಾವೇರಿ ಶಿಬಿರದಲ್ಲಿ ಸಾಕಾನೆ ಸಾವು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 19, 2026 4:10 PM

ಮೈಸೂರು, ನ. 19: ಕೆಲವು ದಿನಗಳಿಂದ ರಾಜ್ಯದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ವಿವಿಧ ಕಡೆಗಳಲ್ಲಿ ಊರಿಗೆ ನುಗ್ಗುವ ಆನೆಗಳು ಸ್ವತ್ತುಗಳ ಹಾನಿ ಜತೆಗೆ ಮಾನವರನ್ನೂ ಬಲಿ ಪಡೆಯುತ್ತಿವೆ. ಇತ್ತೀಚೆಗೆ ಚಿಕ್ಕಮಗಳೂರು, ಹಾಸನದಲ್ಲಿ ಆನೆ ದಾಳಿಗೆ ರೈತರಿಬ್ಬರು ಬಲಿಯಾಗಿರುವ ಘಟನೆ ಹಸಿಯಾಗುವ ಮಧ್ಯೆ ಮೈಸೂರಿನಲ್ಲಿ ಸಾಕಾನೆಯೊಂದು ಸಾವನ್ನಪ್ಪಿದೆ (Elephant attack in Mysuru). ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹುಣಸೂರು ಅರಣ್ಯ ವಲಯಕ್ಕೆ ಸೇರಿದ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಗಂಡು ಸಾಕಾನೆಯೊಂದನ್ನು ಕಾಡಾನೆ ಸಾಯಿಸಿರುವ ಘಟನೆ ಬುಧವಾರ (ನವೆಂಬರ್ 18) ರಾತ್ರಿ ನಡೆದಿದೆ.

ಶಿಬಿರದಲ್ಲಿದ್ದ ರಾಮಯ್ಯ ಎಂಬ ಹೆಸರಿನ ಸಾಕಾನೆಯು ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೆ ಬಿಗಿ ಭದ್ರತೆ ಇರುವ ಶಿಬಿರದೊಳಕ್ಕೆ ಕಾಡಾನೆ ನುಗ್ಗಿದ್ದು ಹೇಗೆ ಎಂಬ ಬಗ್ಗೆ ಅನುಮಾನ ಮೂಡಿದೆ. ಇದರೊಂದಿಗೆ ಈ ಪ್ರಕರಣ ಸಾಕಷ್ಟು ಸದ್ದು ಮಾಡುತ್ತಿದೆ.

ಘಟನೆ ವಿವರ

ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಬೀಡುಬಿಟ್ಟಿದ್ದ ಸಾಕಾನೆ ರಾಮಯ್ಯನ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿ ನಡೆಸುತ್ತಿದ್ದಂತೆ ಶಿಬಿರದಲ್ಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಕಾಡಾನೆಯನ್ನು ಹಿಮ್ಮೆಟ್ಟಿಸಲು ಯತ್ನಿಸಿದರೂ ರಾಮಯ್ಯನನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹಿರಿಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಪಶುವೈದ್ಯಾಧಿಕಾರಿಗಳು ರಾಮಯ್ಯನ ಮರಣೋತ್ತರ ಪರೀಕ್ಷೆನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಇಷ್ಟು ದಿನ ಕಾಡಾನೆ ದಾಳಿಗೆ ಮಾನವರು ಬಲಿಯಾಗುತ್ತಿದ್ದರು. ಇದೀಗ ಸಾಕಾನೆಯೇ ಬಲಿಯಾಗಿದೆ.

ಮಡಿಕೇರಿಯಲ್ಲಿ ಆನೆ ದಾಳಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾವು

ರೈತ ಬಲಿ

ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌. ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಓರ್ವ ರೈತ ಸಾವನ್ನಪ್ಪಿದ ಘಟನೆ ನವೆಂಬರ್‌ 18ರಂದು ನಡೆದಿತ್ತು. ತೋಟದಿಂದ ಮನೆಗೆ ಬರುತ್ತಿದ್ದ ಕೃಷ್ಣಮೂರ್ತಿ (45) ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿತ್ತು. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದರು. ಇನ್ನು ಕಾಡಾನೆ ದಾಳಿಯಿಂದ ರೈತ ಮೃತಪಟ್ಟ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಆಸ್ಪತ್ರೆಗೆ ಆಂಬ್ಯುಲೆನ್ಸ್ ಹೋಗಲು ಬಿಡದೆ ಗ್ರಾಮಸ್ಥರು ತಡೆದಿದ್ದರು. 2 ವರ್ಷಗಳಲ್ಲಿ 12 ಮಂದಿ ಕಾಡಾನೆ ದಾಳಿಗೆ ಬಲಿ ಆಗಿದ್ದಾರೆ. ಹೀಗಾಗಿ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದರು.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.