ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

e-attendance: ಸರ್ಕಾರಿ ಶಾಲೆಗಳಲ್ಲಿ ಫೇಸ್ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆ ಅನುಷ್ಠಾನಕ್ಕೆ ಸರ್ಕಾರ ಆದೇಶ

Face recognition attendance system: ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 2025-26ನೇ ಶೈಕ್ಷಣಿಕ ಸಾಲಿನಿಂದಲೇ 'ನಿರಂತರ' ಕಾರ್ಯಕ್ರಮದಡಿ ಮುಖ ಗುರುತಿಸುವಿಕೆ ತಂತ್ರಾಂಶ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಸರ್ಕಾರಿ ಶಾಲೆಗಳಲ್ಲಿ ಇ-ಹಾಜರಾತಿ ವ್ಯವಸ್ಥೆ ಅನುಷ್ಠಾನಕ್ಕೆ ಸರ್ಕಾರ ಆದೇಶ

Profile Prabhakara R Jun 21, 2025 9:09 PM

ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ಇ-ಹಾಜರಾತಿಯನ್ನು (e-attendance) ಖಚಿತಪಡಿಸುವ ಮುಖ ಗುರುತಿಸುವಿಕೆ (Facial Recognition) ತಂತ್ರಾಂಶ ಆಧಾರಿತ ʼನಿರಂತರʼ (Nirantara) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕಾರ್ಯಕ್ರಮಕ್ಕಾಗಿ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢಶಾಲೆಗಳಿಗೆ 5 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

2025-26ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ ಆಯವ್ಯಯದಲ್ಲಿ 'ನಿರಂತರ' ಕಾರ್ಯಕ್ರಮದಡಿ ಮೊಬೈಲ್ ಆಧಾರಿತ ಎಐ-ಚಾಲಿತ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ (Mobile-Based Al-Driven Facial Recognition Attendance System) ತಂತ್ರಜ್ಞಾನದ ಮೂಲಕ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸುವ ವ್ಯವಸ್ಥೆಯನ್ನು 2025-26ನೇ ಶೈಕ್ಷಣಿಕ ಸಾಲಿನಿಂದಲೇ ಷರತ್ತು ಮತ್ತು ನಿಬಂಧನೆಗಳ ಪಾಲನೆಗೆ ಒಳಪಟ್ಟು ಸರ್ಕಾರ ಅನುಮತಿ ನೀಡಿದೆ.

ಶಾಲಾ ಶಿಕ್ಷಣ ಇಲಾಖೆ ಆಯುಕ್ತರು, ಸರ್ಕಾರಿ ಶಾಲೆಗಳಲ್ಲಿ ಫೇಸ್ ರೆಕಗ್ನಿಷನ್ ಹಾಜರಾತಿ ವ್ಯವಸ್ಥೆ ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು.

ಇ-ಹಾಜರಾತಿ ವ್ಯವಸ್ಥೆಯಿಂದ ಪ್ರಸ್ತುತ ಹಾಜರಾತಿ ದಾಖಲೆಯಲ್ಲಿನ ವ್ಯವಸ್ಥೆಯಲ್ಲಿನ ನ್ಯೂನ್ಯತೆ ಸರಿಪಡಿಸಿ, ಕಡಿಮೆ ಸಮಯದಲ್ಲಿ ನಿಖರ ಹಾಜರಾತಿಯನ್ನು ದಿನಂಪ್ರತಿ ಆಧಾರದ ಮೇಲೆ ಪಡೆಯಬಹುದು. ವಿವಿಧ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನಕ್ಕೆ ನಿಖರ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಅನಗತ್ಯ ಅಥವಾ ಹೆಚ್ಚುವರಿ ಅನುದಾನ ಹಂಚಿಕೆಯನ್ನು ತಡೆಗಟ್ಟಬಹುದು. ಅಲ್ಲದೇ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಿಸಬಹುದಾದ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸಹಕಾರಿಯಾಗಿದೆ.

ಸದರಿ ಕಾರ್ಯಕ್ರಮಕ್ಕೆ ಒಟ್ಟಾರೆ 52,686 ಶಾಲೆಗಳು ಒಳಪಡುತ್ತವೆ (46,460 ಸರ್ಕಾರಿ ಶಾಲೆಗಳು ಮತ್ತು 6,226 ಅನುದಾನಿತ ಶಾಲೆಗಳು) ಹಾಗೂ ಒಟ್ಟಾರೆ 52,55,738 ವಿದ್ಯಾರ್ಥಿಗಳ ಹಾಜರಾತಿಯನ್ನು Mobile-Based Al-Driven Facial Recognition ಮೂಲಕ ಸೆರೆಹಿಡಿಯಬಹುದಾಗಿದೆ. (ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ - 40,74,525 ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ - 11,81,213) ಎಂದು ಅಂದಾಜಿಸಲಾಗಿದೆ.

ಈ ವ್ಯವಸ್ಥೆಯು ನೈಜ ಸಮಯದಲ್ಲಿ ವಿದ್ಯಾರ್ಥಿಗಳ ಮುಖದ ಡೇಟಾವನ್ನು ಗುರುತಿಸುತ್ತದೆ ಮತ್ತು ಸುಧಾರಿತ ವೆಕ್ಟರ್-ಆಧಾರಿತ ಮುಖ ಗುರುತಿಸುವಿಕೆ ಎಂಜಿನ್ ಅನ್ನು ಬಳಸುತ್ತದೆ (Advanced Vector-Based Facial Recognition Engine) ಮೊಬೈಲ್ ಅಪ್ಲಿಕೇಶನ್ ಮೂಲಕ ಸೆರೆಹಿಡಿದು ವಿಶಿಷ್ಟ ID ಗೆ ಎನ್‌ಕ್ರಿಪ್ಟ್ ಮಾಡಲಾಗುವುದಾಗಿ ಹಾಗೂ ಸೆರೆಹಿಡಿಯಲಾದ ವಿದ್ಯಾರ್ಥಿಯ ಚಿತ್ರವನ್ನು ಪುನರ್ನಿರ್ಮಿಸಲು ರಿವರ್ಸ್-ಎಂಜಿನಿಯರಿಂಗ್ ಮಾಡಲಾಗುವುದಿಲ್ಲ ಎಂದು ತಿಳಿಸಿ, ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆಯನ್ನು ಕಾಪಾಡುತ್ತದೆ.

ಈ ಸುದ್ದಿಯನ್ನೂ ಓದಿ | Microsoft: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಶಾಕ್‌; AI ಪ್ರಭಾವದಿಂದ ಸಾವಿರಾರು ಹುದ್ದೆಗಳು ಕಡಿತ ಸಾಧ್ಯತೆ

ಸದರಿ ಯೋಜನೆಯ ಸಾಫ್ಟ್‌ವೇರ್ ಅಪ್ಲಿಕೇಷನ್ ಹಾಗೂ ದತ್ತಾಂಶವನ್ನು KSDC, ವಿಕಾಸಸೌಧದಲ್ಲಿ ಹೋಸ್ಟ್ ಮಾಡುವುದಾಗಿ ತಿಳಿಸಿ, ಯೋಜನೆಯು ಫಲಾನುಭವಿ ಆಧಾರಿತ ಯೋಜನೆಯಲ್ಲಿ ಬರುವುದಾಗಿ ಹಾಗೂ ರಾಜ್ಯ ವಲಯದಿಂದ ನಿರ್ವಹಿಸಲ್ಪಡುವುದಾಗಿ ಎಂದು ಆಯುಕ್ತರು ಪ್ರಸ್ತಾವನೆಯಲ್ಲಿ ತಿಳಿಸಿದ್ದರು. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಇ-ಹಾಜರಾತಿಗಾಗಿ ʼನಿರಂತರʼ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.