ನ.1ರಿಂದ ಜಿಬಿಎಯಲ್ಲಿ ವಾರ್ಡ್ ಒನ್ ಅಭಿಯಾನ: ರಸ್ತೆ ಗುಂಡಿ, ಸ್ವಚ್ಛತೆ, ಬೀದಿ ದೀಪಗಳ ದುರಸ್ತಿಗೆ ಆದ್ಯತೆ: ಕೃಷ್ಣ ಬೈರೇಗೌಡ
ಪ್ರತಿ ನಗರ ಪಾಲಿಕೆಯ ಪ್ರತಿ ವಿಭಾಗದಿಂದ ಒಂದೊಂದು ವಾರ್ಡ್ನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಪ್ರಮುಖ ಸಮಸ್ಯೆ ಗುರುತಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು. ರಸ್ತೆ ಮತ್ತು ಜಂಕ್ಷನ್ಗಳ ದುರಸ್ತಿ, ತೀವ್ರ ಸ್ವಚ್ಛತಾ ಕಾರ್ಯ, ಪಾದಚಾರಿ ಮಾರ್ಗಗಳ ಕರ್ಬ್ಸ್ಟೋನ್ ಹಾಗೂ ಸ್ಲ್ಯಾಬ್ಗಳ ದುರಸ್ತಿ, ಒಳಚರಂಡಿ ಚೇಂಬರ್'ಗಳ ಮುಚ್ಚಳಗಳ ಸರಿಪಡಿಸುವಿಕೆ ಮತ್ತು ಬೀದಿ ದೀಪಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು.
-
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ನವೆಂಬರ್ 1ರಿಂದ ವಾರ್ಡ್ ಒನ್ ಅಭಿಯಾನ ಆರಂಭಿಸಲಾಗುವುದು. ನಗರದ ವಾರ್ಡ್ಗಳಲ್ಲಿನ ರಸ್ತೆ ಗುಂಡಿ, ಹದಗೆಟ್ಟ ರಸ್ತೆ, ಸ್ವಚ್ಛತೆ, ಪಾದಚಾರಿ ಮಾರ್ಗಗಳ ದುರಸ್ತಿ ಹಾಗೂ ಸೌಂದರ್ಯೀ ಕರಣಕ್ಕೆ ಆದ್ಯತೆ ನೀಡಿ, ನವೆಂಬರ್ ತಿಂಗಳ ಅಂತ್ಯದೊಳಗೆ ಸಾಧ್ಯವಾದಷ್ಟು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ(Krishna Byregowda) ತಿಳಿಸಿದ್ದಾರೆ.
ನಗರದ ಸ್ವಚ್ಛತಾ ಕಾರ್ಯಗಳ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಳೆಯಿಂದಾಗಿ ನಗರದ ಹಲವು ಪ್ರದೇಶಗಳ ರಸ್ತೆಗಳು ಹದಗೆಟ್ಟಿವೆ. ಹೀಗಾಗಿ ಜಿಬಿಎ, ಐದು ನಗರ ಪಾಲಿಕೆಗಳು ಹಾಗೂ ವಿವಿಧ ಸರಕಾರಿ ಇಲಾಖೆಗಳ ಸಮನ್ವಯದೊಂದಿಗೆ ವಾರ್ಡ್ಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಪ್ರತಿ ನಗರ ಪಾಲಿಕೆಯ ಪ್ರತಿ ವಿಭಾಗದಿಂದ ಒಂದೊಂದು ವಾರ್ಡ್ನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಪ್ರಮುಖ ಸಮಸ್ಯೆ ಗುರುತಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು. ರಸ್ತೆ ಮತ್ತು ಜಂಕ್ಷನ್ಗಳ ದುರಸ್ತಿ, ತೀವ್ರ ಸ್ವಚ್ಛತಾ ಕಾರ್ಯ, ಪಾದಚಾರಿ ಮಾರ್ಗಗಳ ಕರ್ಬ್ಸ್ಟೋನ್ ಹಾಗೂ ಸ್ಲ್ಯಾಬ್ಗಳ ದುರಸ್ತಿ, ಒಳಚರಂಡಿ ಚೇಂಬರ್'ಗಳ ಮುಚ್ಚಳಗಳ ಸರಿಪಡಿಸುವಿಕೆ ಮತ್ತು ಬೀದಿ ದೀಪಗಳ ದುರಸ್ತಿಗೆ ಆದ್ಯತೆ ನೀಡಲಾಗುವುದು.
ಇದಲ್ಲದೆ, ಒಣಗಿದ ಮರದ ರೆಂಬೆ-ಕೊಂಬೆ ತೆರವುಗೊಳಿಸುವುದು, ರಸ್ತೆ ಬದಿಯ ಮಣ್ಣು ಮತ್ತು ತ್ಯಾಜ್ಯದ ರಾಶಿ ತೆರವುಗೊಳಿಸುವುದು, ಬೆಸ್ಕಾಂ ವಿದ್ಯುತ್ ಕಂಬ ಹಾಗೂ ಆರ್ಎಂಯು ಘಟಕಗಳಿಗೆ ಸಂಬಂಧಿಸಿದ ಸಮಸ್ಯೆ ಪರಿಹರಿಸುವುದು ಮತ್ತು ಜಲಮಂಡಳಿಯ ನೀರಿನ ಸೋರಿಕೆ ತಡೆಗಟ್ಟುವ ಕಾರ್ಯಗಳನ್ನೂ ಕೈಗೊಳ್ಳಲಾಗುವುದು ಎಂದರು.
ಕಸ ವಿಲೇವಾರಿಗೆ 33 ಪ್ಯಾಕೇಜ್ಗಳಾಗಿ ವಿಂಗಡಣೆ: ನೂತನ ಟೆಂಡರ್ ನಗರದ ತ್ಯಾಜ್ಯ ನಿರ್ವಹಣೆ ಸುಧಾರಿಸಿ, ಕಸ ವಿಲೇವಾರಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು 27 ವಿಧಾನಸಭಾ ಕ್ಷೇತ್ರಗಳನ್ನು 33 ಪ್ಯಾಕೇಜ್ಗಳಾಗಿ ವಿಂಗಡಿಸಿ ನೂತನ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಪೈಕಿ ಐದು ಪ್ಯಾಕೇಜ್ಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ನವೆಂಬರ್ನಲ್ಲಿ ಕಾರ್ಯಾರಂಭವಾಗಲಿದೆ.
ನಗರದ ತ್ಯಾಜ್ಯ ನಿರ್ವಹಣೆ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಹೊಸ ಯೋಜನೆ ರೂಪಿಸಲಾಗಿದೆ. ಒಟ್ಟು 33 ಪ್ಯಾಕೇಜ್ಗಳ ಪೈಕಿ ಐದಕ್ಕೆ ಕಾರ್ಯಾದೇಶ ನೀಡಲಾಗಿದೆ.
ಮೂರು ಪ್ಯಾಕೇಜ್ಗಳಿಗೆ ಒಪ್ಪಿಗೆ ಪತ್ರ ನೀಡಲಾಗಿದ್ದು, 10 ಪ್ಯಾಕೇಜ್ಗಳ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡು ಸರಕಾರದ ಆಡಳಿತಾತ್ಮಕ ಅನುಮೋದನೆಗೆ ಸಲ್ಲಿಸಲಾಗಿದೆ. ಅನುಮೋದನೆ ದೊರೆತ 10 ರಿಂದ 15 ದಿನಗಳಲ್ಲಿ ಈ ಪ್ಯಾಕೇಜ್ಗಳಿಗೂ ಕಾರ್ಯಾದೇಶ ನೀಡಲಾಗುವುದು. 10 ಪ್ಯಾಕೇಜ್ಗಳು ಬಿಡ್ಡಿಂಗ್ ಹಂತದಲ್ಲಿದ್ದು, ಅ. 30 ಮತ್ತು ನವೆಂಬರ್ 1ರಂದು ತಲಾ ಒಂದು ಪ್ಯಾಕೇಜ್ ಬಿಡ್ಡಿಂಗ್ ನಡೆಯಲಿದೆ. ನ್ಯಾಯಾಲಯದ ಹಂತದಲ್ಲಿರುವ ಮೂರು ಪ್ಯಾಕೇಜ್ಗಳಿಗೆ ಅನುಮತಿ ದೊರೆತ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸಮೀಕ್ಷೆ ನಡೆಸಿ ಕಾರ್ಯಯೋಜನೆ
ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿಭಾಗವಾರು ಅಧಿಕಾರಿಗಳ ಸಮಿತಿ ರಚಿಸಲಾಗುವುದು. ವಾರ್ಡ್ ಸಹಾಯಕ ಅಭಿಯಂತರರು, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ಗಳು ಪರಿಶೀಲನಾ ಪಟ್ಟಿಯ ಆಧಾರದ ಮೇಲೆ ವಾರ್ಡ್ ಗಳಲ್ಲಿನ ಸಮಸ್ಯೆ ಗುರುತಿಸಿ, ಸಂಬಂಧಪಟ್ಟ ಇಲಾಖೆಗಳ ವಿವರಗಳೊಂದಿಗೆ ಪಟ್ಟಿ ಸಿದ್ಧಪಡಿಸಬೇಕು. ನಂತರ ಇಲಾಖೆಗಳ ಸಮನ್ವಯದೊಂದಿಗೆ ಆದ್ಯತೆ ನಿಗದಿಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.