ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಗರದಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣ ಹೆಚ್ಚಳ

ಸಂಸ್ಥೆಯ ಪ್ರಕಾರ ನಗರದಲ್ಲಿ ಕಳೆದ ವರ್ಷ 16105 ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 7564 ಮಂದಿ ಪುರುಷರಾದರೆ, 8541 ಮಂದಿ ಮಹಿಳೆಯರಾಗಿದ್ದಾರೆ. ವಾರ್ಷಿಕ 3 ಸಾವಿರ ಹೊಸ ಪ್ರಕರಣಗಳು ಸ್ತನ ಕ್ಯಾನ್ಸರ್ ಆಗಿದ್ದು, ಸರಾಸರಿ ಮೂವರು ಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿಗೆ ಸ್ತನ ಕ್ಯಾನ್ಸರ್ ದೃಢಪಡುತ್ತಿದೆ.

ನಗರದಲ್ಲಿ ಸ್ತನ ಕ್ಯಾನ್ಸರ್‌ ಪ್ರಕರಣ ಹೆಚ್ಚಳ

-

Profile
Ashok Nayak Oct 30, 2026 12:21 AM

ಮಹಿಳೆಯರಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್

ಕಿದ್ವಾಯಿ ಆಸ್ಪತ್ರೆಯಿಂದ ಜಾಗೃತಿ ಅಭಿಯಾನ

ಬೆಂಗಳೂರು: ಬದಲಾದ ಜೀವನಶೈಲಿ ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ಸ್ತನ ಕ್ಯಾನ್ಸರ್ ದೃಢ ಪ್ರಮಾಣ ವಾರ್ಷಿಕ ಶೇಕಡ 3.4ರಷ್ಟು ಏರುಗತಿ ಪಡೆದಿದೆ. ಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ಶೇ.3.1ರಷ್ಟು ಮಂದಿ ಸ್ತನ ಕ್ಯಾನ್ಸರ್‌ಗೆ ಒಳಗಾಗಿದ್ದಾರೆ. ಸ್ತನ ಕ್ಯಾನ್ಸರ್ ಕುರಿತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಅಕ್ಟೋಬರ್ ತಿಂಗಳು ಸ್ತನ ಕ್ಯಾನ್ಸರ್ ಜಾಗೃತಿ ಮಾಸವಾಗಿದ್ದು, ಸಂಸ್ಥೆಯು ಚಿಕಿತ್ಸೆ ಜತೆಗೆ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಸಂಸ್ಥೆಯ ಪ್ರಕಾರ ನಗರದಲ್ಲಿ ಕಳೆದ ವರ್ಷ 16105 ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 7564 ಮಂದಿ ಪುರುಷರಾದರೆ, 8541 ಮಂದಿ ಮಹಿಳೆಯರಾಗಿದ್ದಾರೆ. ವಾರ್ಷಿಕ 3 ಸಾವಿರ ಹೊಸ ಪ್ರಕರಣಗಳು ಸ್ತನ ಕ್ಯಾನ್ಸರ್ ಆಗಿದ್ದು, ಸರಾಸರಿ ಮೂವರು ಕ್ಯಾನ್ಸರ್ ಪೀಡಿತ ಮಹಿಳೆಯರಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿಗೆ ಸ್ತನ ಕ್ಯಾನ್ಸರ್ ದೃಢಪಡುತ್ತಿದೆ.

ಇದೇ ವೇಳೆ, ಗರ್ಭಕಂಠದ ಕ್ಯಾನ್ಸರ್‌ನ ವಾರ್ಷಿಕ ದೃಢ ಪ್ರಮಾಣ ವಾರ್ಷಿಕ ಶೇ 1.9ಕ್ಕೆ ಇಳಿಕೆ ಯಾಗಿದೆ. ಕಿದ್ವಾಯಿ ಸಂಸ್ಥೆ ಒಂದರಲ್ಲಿಯೇ ಕಳೆದ ವರ್ಷ 13 ಸಾವಿರಕ್ಕೂ ಅಧಿಕ ಕ್ಯಾನ್ಸರ್ ಪ್ರಕರಣಗಳು ಹೊಸದಾಗಿ ನೋಂದಣಿಯಾಗಿದ್ದು, ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. 1500 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ದೃಢಪಟ್ಟಿದೆ. ಸಂಸ್ಥೆಯಲ್ಲಿ ದೃಢಪಟ್ಟ ಮಹಿಳೆಯರಲ್ಲಿನ ಕ್ಯಾನ್ಸರ್ ಪ್ರಕರಣಗಳಲ್ಲಿ, ಸ್ತನ ಕ್ಯಾನ್ಸರ್ ಪ್ರಮಾಣ ಶೇ 24.3 ರಷ್ಟಿದೆ.

ಇದನ್ನೂ ಓದಿ: Liver Cancer: ಸ್ಥೂಲತೆಯು ಹೆಚ್ಚುತ್ತಿರುವ ಜಗತ್ತಿನಲ್ಲಿ ಯಕೃತ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸರಿಯಾದ ಕೊಬ್ಬನ್ನು ಆಯ್ಕೆ ಮಾಡೋಣ

ನಗರದ ವಿವಿಧ ಆಸ್ಪತ್ರೆಗಳಿಂದ ಒಟ್ಟಾರೆ ಈ ಪ್ರಮಾಣ ಶೇ 35 ದಾಟಿದೆ. ಮಹಿಳೆಯರಲ್ಲಿನ ಜೀವನ ಶೈಲಿ ಬದಲಾವಣೆಯೇ ಪ್ರಮುಖ ಕಾರಣವೆಂದು ವಿಶ್ಲೇಷಿಸಿರುವ ಸಂಸ್ಥೆಯ ಕ್ಯಾನ್ಸರ್ ತಜ್ಞರು, ಕೌಟುಂಬಿಕ ಇತಿಹಾಸದ ಜತೆಗೆ ತಡವಾಗಿ ವಿವಾಹ ಹಾಗೂ ಮಕ್ಕಳನ್ನು ಪಡೆಯುವಿಕೆ, ಸ್ಥೂಲಕಾಯ, ಮಕ್ಕಳಿಗೆ ಹಾಲು ನೀಡದಿರು ವುದು, ಕೊಲೆಸ್ಟ್ರಾಲ, ಹಾರ್ಮೋನ್ ಬದಲಾವಣೆ ಚಿಕಿತ್ಸೆ, ಹೆಚ್ಚು ಕೊಬ್ಬಿನ ಆಹಾರ ಸೇವನೆ ಹಾಗೂ ಮದ್ಯಪಾನವೂ ಸ್ತನ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣವೆಂದು ಗುರುತಿಸಿದ್ದಾರೆ.

ಸ್ತನ ಕ್ಯಾನ್ಸರ್ ಜಾಗೃತಿಗೆ ವಿನೂತನ ಹೆಜ್ಜೆ

ಸ್ತನ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವತಿಯರು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಧಾನಸೌಧ ಸೇರಿದಂತೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ರಾಗಾಆವಿವಿ), ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ವಿನೂತನ ಉಪಕ್ರಮಕ್ಕೆ ಮುಂದಾಗಿದೆ. ಸ್ತನ ಕ್ಯಾನ್ಸರ್‌ನ ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ ಹಾಗೂ ಮಹಿಳೆಯರ ಆರೋಗ್ಯದ ಮಹತ್ವವನ್ನು ಸಾರಲು ಇಂದು (ಅ.29ರಂದು) ಐತಿಹಾಸಿಕ ಕಟ್ಟಡಗಳಿಗೆ ಗುಲಾಬಿ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲು ಉದ್ದೇಶಿಸಿದೆ.

ಶೀಘ್ರ ಪತ್ತೆಯಿಂದ ಕ್ಯಾನ್ಸರ್ ಗುಣಮುಖ

ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದಲೂ ಇಲ್ಲಿನ ಹೊಂಬೇಗೌಡ ನಗರದಲ್ಲಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ರೋಗಿಗಳು ಭೇಟಿ ನೀಡುತ್ತಿದ್ದಾರೆ. ಸಂಸ್ಥೆಯು ಕ್ಯಾನ್ಸರ್ ಚಿಕಿತ್ಸೆಯ ಜತೆಗೆ ಶಿಕ್ಷಣ, ಸಂಶೋಧನೆ ಹಾಗೂ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ದಲ್ಲಿಯೂ ತೊಡಗಿಕೊಂಡಿದೆ. ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಭೇಟಿ ನೀಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರ ರಾಜ್ಯಗಳಿಂದ ಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದಾರೆ. ಪ್ರತಿ ತಿಂಗಳು ಸರಾಸರಿ 33946 ಮಂದಿ ಹೊರ ರೋಗಿಗಳಾಗಿ ಭೇಟಿ ನೀಡಿದರೆ 1839 ಮಂದಿ ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಸಂಸ್ಥೆಯ ಹೊರರೋಗಿ ವಿಭಾಗಕ್ಕೆ ವಾರ್ಷಿಕ ಕ್ಯಾನ್ಸರ್ ಪರೀಕ್ಷೆ ಹಾಗೂ ಚಿಕಿತ್ಸೆ ಸಂಬಂಧ 4 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡುತ್ತಿದೆ.

image

ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದರೆ ಶೇ 90ರಷ್ಟು ಪ್ರಕರಣಗಳಲ್ಲಿ ಗುಣಪಡಿಸಲು ಸಾಧ. ಸ್ತನ ಕ್ಯಾನ್ಸರ್ ತಡೆಗೆ 30 ವರ್ಷ ಮೇಲ್ಪಟ್ಟವರು ನಿಯಮಿತವಾಗಿ ಸ್ವಯಂ ಮತ್ತು ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. 40 ವರ್ಷ ಮೇಲ್ಪಟ್ಟವರು ಎರಡು ವರ್ಷಗಳಿಗೊಮ್ಮೆ ಮ್ಯಾಮೋಗ್ರಫಿ ತಪಾಸಣೆ ಮಾಡಿಸಿಕೊಳ್ಳಬೇಕು.

- ಡಾ.ಆರ್.ಕೃಷ್ಣಪ್ಪ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ