ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಜ್ವಲ್‌ ರೇವಣ್ಣಗೆ ಮತ್ತೊಂದು ಶಾಕ್‌; ಜೀವಿತಾವಧಿ ಸೆರೆವಾಸ ಶಿಕ್ಷೆಗೆ ತಡೆ ನೀಡಿ, ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಕಾರ

Prajwal Revanna: ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸೆರೆವಾಸ ಅನುಭವಿಸುತ್ತಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್‌ ಆಘಾತ ನೀಡಿದೆ. ಜೀವಾವಧಿ ಶಿಕ್ಷೆ ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿದೆ.

ಪ್ರಜ್ವಲ್‌ ರೇವಣ್ಣಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಕಾರ

ಕರ್ನಾಟಕ ಹೈಕೋರ್ಟ್‌ ಮತ್ತು ಪ್ರಜ್ವಲ್‌ ರೇವಣ್ಣ (ಸಂಗ್ರಹ ಚಿತ್ರ). -

Ramesh B
Ramesh B Dec 3, 2025 2:05 PM

ಬೆಂಗಳೂರು, ಡಿ. 3: ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸದ್ಯ ಸೆರೆವಾಸ ಅನುಭವಿಸುತ್ತಿರುವ ಪ್ರಜ್ವಲ್‌ ರೇವಣ್ಣ (Prajwal Revanna) ಅವರಿಗೆ ಕರ್ನಾಟಕ ಹೈಕೋರ್ಟ್‌ (Karnataka High Court) ಮತ್ತೊಂದು ಶಾಕ್‌ ನೀಡಿದೆ. ಈಗಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಇದನ್ನು ಬದಿಗೆ ಸರಿಸಿ, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ (ಡಿಸೆಂಬರ್‌ 3) ವಜಾಗೊಳಿಸಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಗನ್ನಿಕಾಡದ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದದಲ್ಲಿ ಪ್ರಜ್ವಲ್​ ರೇವಣ್ಣ ಶಿಕ್ಷೆಗೆ ಒಳಗಾಗಿದ್ದಾರೆ.

ಕೋರ್ಟ್‌ ಹೇಳಿದ್ದೇನು?

ʼʼದಾಖಲೆ, ಅಪರಾಧದ ಗಂಭೀರತೆ ಪರಿಗಣಿಸಿ ಪ್ರಜ್ವಲ್‌ ಬಿಡುಗಡೆ ಮಾಡಿದರೆ ಅದು ಇತರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಪ್ರಜ್ವಲ್‌ಗೆ ವಿಧಿಸಿರುವ ಆಜೀವ ಶಿಕ್ಷೆ ಬದಿಗೆ ಸರಿಸಿ ಜಾಮೀನು ಮಂಜೂರು ಮಾಡುವುದು ಸೂಕ್ತವಲ್ಲ” ಎಂದು ನ್ಯಾಯಮೂರ್ತಿಗಳಾದ ಕೆ.ಎಸ್‌. ಮುದಗಲ್‌ ಮತ್ತು ಟಿ.ವೆಂಕಟೇಶ್‌ ನಾಯಕ್‌ ಅವರ ವಿಭಾಗೀಯ ಪೀಠವು ಅಭಿಪ್ರಾಯಪಟ್ಟಿದೆ.

“ವಿಚಾರಣಾಧೀನ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆ ನಡೆದಿದ್ದು ಮತ್ತೆ ಹೈಕೋರ್ಟ್‌ನಲ್ಲಿ ಸಾಕ್ಷಿಯ ವಿಚಾರಣೆ ನಡೆಸಲಾಗದು. ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಪ್ರಜ್ವಲ್‌ ಪರ ವಾದ ಮಂಡಿಸಿದ್ದು, ರಾಜಕೀಯ ಪ್ರತೀಕಾರ, ಸಂತ್ರಸ್ತೆ ದೂರು ದಾಖಲಿಸಲು ವಿಳಂಬ ಮಾಡಿರುವುದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿನ ವ್ಯತ್ಯಾಸ, ಅಶ್ಲೀಲ ವಿಡಿಯೊ ಜಫ್ತಿಯಾಗಿಲ್ಲ, ಗನ್ನಿಗಢ ತೋಟವು ಪ್ರಜ್ವಲ್‌ಗೆ ಸೇರಿಲ್ಲವಾದ್ದರಿಂದ ಅವರು ಅಲ್ಲಿಗೆ ಹೋಗಿಯೇ ಇಲ್ಲ. ಬಸವನಗುಡಿಯ ಮನೆಗೂ ಪ್ರಜ್ವಲ್‌ ಹೋಗಿಲ್ಲ. ಸಂತ್ರಸ್ತೆಯು ಗನ್ನಿಗಢ ತೋಟದಲ್ಲಿ ಕೆಲಸವನ್ನೇ ಮಾಡಿಲ್ಲ, ಆ ತೋಟವು ಪ್ರಕಾಶ್‌ ಎಂಬವರಿಗೆ ಸೇರಿದೆ. ಡಿಎನ್‌ಎ ಪರೀಕ್ಷೆಯನ್ನು ಕಾನೂನಿಗೆ ಅನ್ವಯವಾಗಿ ನಡೆಸಿಲ್ಲ ಇತ್ಯಾದಿ ವಿಚಾರಗಳ ಕುರಿತು ವಾದಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಪರಿಗಣಿಸಲಾಗುವುದು” ಎಂದು ನ್ಯಾಯಾಲಯ ಹೇಳಿದೆ.

“ಪ್ರಜ್ವಲ್‌ಗೆ ವಿಧಿಸಿರುವ ಶಿಕ್ಷೆಯನ್ನು ಬದಿಗೆ ಸರಿಸಲು ಸಾಕ್ಷಿಗಳು ಅತ್ಯಂತ ದುರ್ಬಲವಾಗಿವೆ ಎಂದು ಲೂಥ್ರಾ ಸಾಬೀತುಪಡಿಸಿಲ್ಲ. ಇದೇ ಕಾರಣಕ್ಕಾಗಿ ಲೂಥ್ರಾ ಅವರ ವಾದವನ್ನು ಒಪ್ಪಲಾಗುತ್ತಿಲ್ಲ” ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಜೀವಾವಧಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಪ್ರಜ್ವಲ್‌ ರೇವಣ್ಣ

ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ “ಈ ಪ್ರಕರಣದಲ್ಲಿ ಪ್ರಜ್ವಲ್‌ ಶಿಕ್ಷೆ ಅಮಾನತುಪಡಿಸಿದರೆ ಉಳಿದ ಪ್ರಕರಣಗಳಲ್ಲಿ ಸಾಕ್ಷಿ ತಿರುಚುವ ಸಾಧ್ಯತೆ ಇದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಲಾಗಿದ್ದು, ವಾದ ಮಂಡಿಸಲು ಸಿದ್ಧವಾಗಿದ್ದೇವೆ. ಮೇಲ್ಮನವಿದಾರರು ಮೆರಿಟ್‌ ಮೇಲೆ ವಾದಿಸಬಹುದು” ಎಂದಿರುವುದಕ್ಕೆ ನ್ಯಾಯಾಲಯ ಸಮ್ಮತಿಸಿದೆ. ಆ ಮೂಲಕ ಪ್ರಜ್ವಲ್‌ ರೇವಣ್ಣ ಅವರಿಗೆ ಹಿನ್ನಡೆಯಾಗಿದೆ.

ಆಗಸ್ಟ್‌ 2ರಂದು ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆಯ ಜತೆಗೆ 11.60 ಲಕ್ಷ ರೂ. ದಂಡವನ್ನು ವಿಧಿಸಿ ಆದೇಶ ಹೊರಡಿಸಿತ್ತು. ಇದರಲ್ಲಿ ಸಂತ್ರಸ್ತೆಗೆ 11.25 ಲಕ್ಷ ರೂ. ಪರಿಹಾರದ ರೂಪದಲ್ಲಿ, ಬಾಕಿ ಹಣವನ್ನು ಸರ್ಕಾರದ ಖಾತೆಗೆ ಜಮೆ ಮಾಡಲು ಆದೇಶಿಸಿತ್ತು.