ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prakash Raj: ಬೆಟ್ಟಿಂಗ್‌ ಆ್ಯಪ್‌ ಜಾಹೀರಾತು; ನನ್ನಿಂದ ಒಂದು ತಪ್ಪಾಗಿದೆ, ಕ್ಷಮಿಸಿ ಎಂದ ಪ್ರಕಾಶ್‌ ರಾಜ್

Prakash Raj: ಹೌದು, ನಾನು 8 ವರ್ಷಗಳ ಹಿಂದೆ ಬೆಟ್ಟಿಂಗ್‌ ಆ್ಯಪ್‌ ಪ್ರಚಾರ ಜಾಹೀರಾತು ಮಾಡಿದ್ದೆ. ಆದರೆ, ಅದಾದ ಮೇಲೆ ನಾನು ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಮೋಟ್‌ ಮಾಡಬಾರದು ಎಂದು ನಿರ್ಧರಿಸಿದ್ದೆ. ನಂತರ ನಾನು ಬೆಟ್ಟಿಂಗ್‌ ಆ್ಯಪ್‌ ಪರ ಪ್ರಚಾರ ಮಾಡಿಲ್ಲ ಎಂದು ನಟ ಪ್ರಕಾಶ್‌ ರಾಜ್ ಹೇಳಿದ್ದಾರೆ.

ಬೆಟ್ಟಿಂಗ್‌ ಆ್ಯಪ್‌ ಪ್ರಚಾರ; ನನ್ನಿಂದ ತಪ್ಪಾಗಿದೆ ಎಂದ ಪ್ರಕಾಶ್‌ ರಾಜ್

Profile Prabhakara R Mar 21, 2025 8:04 PM

ಬೆಂಗಳೂರು: ಬೆಟ್ಟಿಂಗ್‌ ಆ್ಯಪ್‌ ಜಾಹೀರಾತು (Betting Apps) ಮಾಡಿದ್ದ ಟಾಲಿವುಡ್‌ನ ಪ್ರಮುಖ ನಟ, ನಟಿಯರಿಗೆ ಸಂಕಷ್ಟ ಎದುರಾಗಿದೆ. ಜಾಹೀರಾತಿನ ಮೂಲಕ ಜನರನ್ನು ತಪ್ಪು ದಾರಿಗೆ ಎಳೆದ ಆರೋಪದಲ್ಲಿ ನಟ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್‌ ರಾಜ್‌ (Prakash Raj) ಸೇರಿ 25 ಮಂದಿ ವಿರುದ್ಧ ಹೈದರಾಬಾದ್‌ನ ಮಿಯಾಪುರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಈ ಬಗ್ಗೆ ನಟ ಪ್ರಕಾಶ್‌ ರಾಜ್‌ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಬೆಟ್ಟಿಂಗ್‌ ಆ್ಯಪ್‌ ಪ್ರಚಾರ ಮಾಡಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಹೌದು, ನಾನು 8 ವರ್ಷಗಳ ಹಿಂದೆ ಬೆಟ್ಟಿಂಗ್‌ ಆ್ಯಪ್‌ ಪ್ರಚಾರ ಜಾಹೀರಾತು ಮಾಡಿದ್ದೆ. ಆದರೆ, ಅದಾದ ಮೇಲೆ ನಾನು ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಮೋಟ್‌ ಮಾಡಬಾರದು ಎಂದು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನು ಎಲ್ಲರಿಗೂ ಪ್ರಶ್ನೆ ಕೇಳುತ್ತೇನೆ, ನನ್ನ ಬಗ್ಗೆ ಪ್ರಶ್ನೆಗಳು ಎದ್ದಾಗ ನಾನು ಉತ್ತರ ಕೊಡಬೇಕು. ನನಗೆ ಈವರೆಗೂ ಪೊಲೀಸರಿಂದ ಯಾವುದೇ ನೋಟಿಸ್ ಬಂದಿಲ್ಲ, ಒಂದು ವೇಳೆ ಬಂದರೆ ಖಂಡಿತ ಅದಕ್ಕೆ ನಾನು ಉತ್ತರವನ್ನು ಕೊಡುತ್ತೇನೆ, ಯಾಕೆಂದರೆ ಅದು ನನ್ನ ಜವಾಬ್ದಾರಿ. ಇನ್ನು ಇದೇ ಸಮಯದಲ್ಲಿ ಯುವ ಜನಾಂಗ ಜೂಜಾಟಕ್ಕೆ ಬಲಿಯಾಗಬಾರದು, ಅದು ಜೀವನವನ್ನೇ ಹಾಳು ಮಾಡುತ್ತೆ, ''Say no to betting apps" ಎಂದು ಹೇಳಿದ್ದಾರೆ. 8 ವರ್ಷದ ಹಿಂದೆ ನನ್ನಿಂದ ತಪ್ಪಾಗಿದೆ. ಈ ತಪ್ಪನ್ನು ನೀವೆಲ್ಲ ಕ್ಷಮಿಸುತ್ತೀರೆಂದು ನಾನು ನಂಬುತ್ತೇನೆ, ಕ್ಷಮೆ ಇರಲಿ ಎಂದು ಅವರು ಮನವಿ ಮಾಡಿದ್ದಾರೆ.

2016ರ ಜೂನ್‌ನಲ್ಲಿ ಜಂಗ್ಲಿ ರಮ್ಮಿ ಅವರು ನನ್ನನ್ನು ಸಂಪರ್ಕಿಸಿದ್ದರು. ನಾನು ಕೂಡ ಒಪ್ಪಿಕೊಂಡು ರಮ್ಮಿ ಆಡಿ ಎಂದು ಹೇಳಿದ್ದೆ, ಆದರೆ ಆ ನಂತರ ನನಗೆ ಯಾಕೋ ಕಸಿವಿಸಿ ಆಗಲು ಶುರುವಾಯ್ತು, ನಾನು ಮಾಡಿದ್ದು ಸರಿಯಲ್ಲ ಎಂಬ ಭಾವನೆ ನನಗೆ ಬಂತು. ಆದರೆ, ಅದಾಗಲೇ ಜಾಹೀರಾತು ಚಿತ್ರೀಕರಣವಾಗಿದ್ದರಿಂದ, ಒಂದು ವರ್ಷದ ಒಪ್ಪಂದ ಇದ್ದಿದ್ದರಿಂದ ನನ್ನಿಂದ ಆಗ ಏನೂ ಮಾಡಲು ಸಾಧ್ಯವಾಗಲಿಲ್ಲ. ವರ್ಷದ ನಂತರ ನಮ್ಮ ನಡುವೆ ಆಗಿದ್ದ ಒಪ್ಪಂದದ ನವೀಕರಣ ಮಾಡಲು ಅವರು ಮತ್ತೆ ಬಂದರು. ಆಗ ನಾನು ಆಗಲ್ಲ, ನನ್ನ ಆತ್ಮಸಾಕ್ಷಿ ಇದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಿ ನಿರಾಕರಿಸಿದ್ದೆ.

ಇದು 8-9 ವರ್ಷಗಳ ಹಿಂದಿನ ಕಥೆ ಅದಾದ ನಂತರ ನಾನು ಜೂಜಿಗೆ ಪ್ರೋತ್ಸಾಹಿಸುವ ಕೆಲಸವನ್ನು ಯಾವತ್ತೂ ಮಾಡಿಲ್ಲ. ಪ್ರಚಾರವನ್ನೂ ಮಾಡಿಲ್ಲ. ಮುಂದುವರಿದು 2021ರಲ್ಲಿ ಆ ಕಂಪನಿಯನ್ನು ಬೇರೆಯವರಿಗೆ ಮಾರಿದರು ಎನಿಸುತ್ತದೆ. ಆಗ ಅವರು ಕೆಲ ಕಡೆ ನನ್ನ ವಿಡಿಯೊ ತುಣುಕುಗಳನ್ನು ಬಳಸಿಕೊಂಡಿದ್ದರು. ಹೀಗಾಗಿ ನಾನು ಅವರಿಗೆ ಲೀಗಲ್ ನೋಟಿಸ್ ಕೂಡ ಕಳಿಸಿದ್ದೆ. ನಂತರ ಅವರು ಪ್ರಸಾರವನ್ನು ನಿಲ್ಲಿಸಿದರು. ಹೀಗಾಗಿ ನನ್ನ ಒಂದು ತಪ್ಪನ್ನು ನೀವೆಲ್ಲ ಕ್ಷಮಿಸುತ್ತೀರೆಂದು ನಾನು ನಂಬುತ್ತೇನೆ ಎಂದು ಕೋರಿದ್ದಾರೆ.

25 ಜನರ ವಿರುದ್ಧ ಪ್ರಕರಣ

ಬೆಟ್ಟಿಂಗ್‌ ಆ್ಯಪ್‌ ಜಾಹೀರಾತು ಮಾಡಿದ್ದ ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ, ರಾಣಾ ದಗ್ಗುಬಾಟಿ ಸೇರಿ 25 ಜನರ ವಿರುದ್ದ ಐಟಿ ಕಾಯ್ದೆಯ ಸೆಕ್ಷನ್ 318(4), ಬಿಎನ್‌ಎಸ್ 3, 3ಎ, 4 ಮತ್ತು 66ಡಿ ಅಡಿಯಲ್ಲಿ ಹೈದರಾಬಾದ್‌ನ ಮಿಯಾಪುರ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಈ ಪೈಕಿ ಕಿರುತೆರೆಯಲ್ಲಿ ಪ್ರಸಾರವಾಗುವ ಜಬರದಸ್ತ್ ಕಾರ್ಯಕ್ರಮದ ಮೂಲಕ ಮನೆ ಮಾತಾದ ರೀತು ಚೌಧರಿ ಪಂಜಾಗುಡ್ಡ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ವಿಷ್ಣುಪ್ರಿಯ ಅವರ ವಿಚಾರಣೆಯನ್ನು ಕೂಡ ಪೊಲೀಸರು ಮಾಡಿದ್ದಾರೆ. ಪೊಟ್ಟೇಲ್ ಸೇರಿ ಹಲವು ಚಿತ್ರಗಳಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿರುವ ಅನನ್ಯಾ ನಾಗಲ್ಲಾ ನನ್ನಿಂದ ತಪ್ಪಾಗಿದೆ ಎಂದು ಕ್ಷಮೆ ಕೋರಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಾಣಾ ದಗ್ಗುಬಾಟಿ ಕೂಡ ಸ್ಪಷ್ಟನೆ ನೀಡಿದ್ಧಾರೆ.

ಈ ಸುದ್ದಿಯನ್ನೂ ಓದಿ | Betting App : ಬೆಟ್ಟಿಂಗ್‌ ಆ್ಯಪ್‌ ಪ್ರಮೋಷನ್‌; ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ಸೇರಿ 25 ಕ್ಕೂ ಹೆಚ್ಚು ಸೆಲೆಬ್ರಿಟಿಗಳ ವಿರುದ್ಧ FIR!

ಉಳಿದಂತೆ ನಯನಿ ಪಾವನಿ, ನೇಹಾ ಪಠಾಣ್, ಪದ್ಮಾವತಿ, ಪಾಂಡು, ಇಮ್ರಾನ್ ಖಾನ್, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಟೇಸ್ಟಿ ತೇಜ, ನೀತು ಅಗರ್ವಾಲ್, ವರ್ಷಿಣಿ, ಸಿರಿ ಹನುಮಂತು, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಶ್ರೀಮುಖಿ, ನಿರೂಪಕಿ ಶ್ಯಾಮಲಾ, ಮೌನಕ್ಕೆ ಶರಣಾಗಿದ್ದಾರೆ. ಇದರ ನಡುವೆ ಈಗ ಪ್ರಕಾಶ್ ರಾಜ್ ವಿಡಿಯೊ ಮೂಲಕ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಾನು ಬೆಟ್ಟಿಂಗ್ ಆ್ಯಪ್‌ ಪ್ರಚಾರ ಮಾಡಿದ್ದು ನಿಜ, ಆದರೆ ಆ ನಂತರ ನನ್ನ ತಪ್ಪಿನ ಅರಿವು ನನಗಾಗಿತ್ತು ಎಂದು ಹೇಳಿದ್ದಾರೆ.