Raichur Murder: ರಾಯಚೂರಿನಲ್ಲಿ ಕಲ್ಲಿನಿಂದ ಜಜ್ಜಿ ಮಹಿಳೆಯ ಭೀಕರ ಹತ್ಯೆ; ರಕ್ತಸಿಕ್ತವಾಗಿದ್ದ ತಾಯಿಯ ಬಳಿ ಕುಳಿತು 2 ವರ್ಷದ ಮಗು ರೋದನೆ
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಆರ್‌ಎಚ್.ಕ್ಯಾಂಪ್ 5ರ ಹೊರವಲಯದ ಜಮೀನಿನಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ರಾಯಚೂರು: ಕಲ್ಲಿನಿಂದ ಜಜ್ಜಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಸಿಂಧನೂರು ತಾಲೂಕಿನ ಆರ್‌ಎಚ್.ಕ್ಯಾಂಪ್ 5ರ ಹೊರವಲಯದ ಜಮೀನಿನಲ್ಲಿ ನಡೆದಿದೆ. ಆರ್‌ಎಚ್.ಕ್ಯಾಂಪ್ 4ರ ನಿವಾಸಿ ಸ್ನೇಹಾ (25) ಕೊಲೆಯಾದ ಮಹಿಳೆ.
ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಗ 2 ವರ್ಷದ ಮಗುವನ್ನು ಪಕ್ಕದಲ್ಲಿ ಇರಿಸಿ ಆರೋಪಿಗಳು ಪರಾರಿಯಾಗಿದ್ದರು. ಸುಮಾರು ಹೊತ್ತು ತಾಯಿಯ ಸ್ಥಿತಿ ಅರಿಯದೇ ಪುಟ್ಟ ಕಂದಮ್ಮ ತಾಯಿ ಎದೆಯ ಮೇಲೆಯೇ ಮಲಗಿತ್ತು.
ಮಹಿಳೆಯನ್ನು ಗಮನಿಸಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾಳೆ. ಮಗುವಿನ ತಲೆಗೂ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದೆ.
ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು, ಮೃತಳ ಪತಿ ಅಮಿತ್ ಹಾಗೂ ಮೃತಳ ಪ್ರಿಯಕರ ಶುಭಂನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತಿಯೊಂದಿಗೆ ಜಗಳ ಮಾಡಿಕೊಂಡು 15 ದಿನಗಳ ಹಿಂದೆ ಸ್ನೇಹಾ ತವರು ಮನೆಗೆ ತೆರಳಿದ್ದಳು. ಇಂದು (ಸೆ.19) ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಣ್ಣನ ಮನೆಯಿಂದ ಹೊರಗಡೆ ಬಂದಿದ್ದಳು ಎಂದು ತಿಳಿದುಬಂದಿದೆ.
ಕೊಡಲಿಯಿಂದ ಕೊಚ್ಚಿ ಕೊಚ್ಚಿ ಪತ್ನಿ-ಮೂವರು ಮಕ್ಕಳನ್ನು ಕೊಂದ ಪಾಪಿ ಪತಿ
ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.