Transport Strike: ಸಾರಿಗೆ ಮುಷ್ಕರ; ರಾಯಚೂರಿನಲ್ಲಿ ಆಂಧ್ರ, ತೆಲಂಗಾಣ ಬಸ್‌ಗಳ ಮೊರೆ ಹೋದ ಪ್ರಯಾಣಿಕರು
Raichur News: ಸಾರಿಗೆ ನೌಕರರು ಕರ್ತವ್ಯಕ್ಕೆ ಹೋಗದೆ ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ನಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿದರೆ ನಾವ್ಯಾಕೆ ಮುಷ್ಕರ ಮಾಡಬೇಕು, ನಮ್ಮ ಕಷ್ಟ ಕೇಳುವವರು ಯಾರು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.


ರಾಯಚೂರು: ಜಿಲ್ಲೆಯಲ್ಲಿ ಸಾರಿಗೆ ಮುಷ್ಕರ ಎಫೆಕ್ಟ್ ತಟ್ಟಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ನೌಕರರ ಮುಷ್ಕರ (Transport Strike) ಆರಂಭವಾಗಿದ್ದರಿಂದ ಬಸ್ ಸಂಚಾರ ಅತ್ಯಂತ ವಿರಳವಾಗಿತ್ತು. ಹೀಗಾಗಿ ದೂರದ ಊರುಗಳಿಂದ ಬಂದ ಪ್ರಯಾಣಿಕರು, ಗ್ರಾಮೀಣ ಭಾಗಗಳಿಗೆ ತೆರಳಲು ಬಸ್ ಇಲ್ಲದೆ ಪರದಾಡುತ್ತಿದ್ದಾರೆ.
ರಾಯಚೂರು ವಿಭಾಗದ ಒಟ್ಟು 600 ಬಸ್‌ಗಳಲ್ಲಿ ಕಡಿಮೆ ಪ್ರಮಾಣದ ಬಸ್‌ಗಳು ಓಡಾಟ ನಡೆಸಿವೆ. ಸಾರಿಗೆ ನೌಕರರು ಬಸ್ ಹತ್ತದೆ ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ನಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿದರೆ ನಾವ್ಯಾಕೆ ಮುಷ್ಕರ ಮಾಡಬೇಕು, ನಮ್ಮ ಕಷ್ಟ ಕೇಳುವವರು ಯಾರು ಅಂತ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳ ಒತ್ತಡಕ್ಕೆ ಪ್ರಯಾಣ ಬೆಳೆಸಿದರೆ ಮುಂದಾಗುವ ಅನಾಹುತಗಳಿಗೆ ಜವಾಬ್ದಾರಿ ಯಾರು ವಹಿಸುತ್ತಾರೆ. ಬಸ್‌ಗಳಿಗೆ ಕಲ್ಲು ತೂರಾಟ ಬೆಂಕಿ ಹಚ್ಚಿದ್ರೆ ನಾವೇನು ಮಾಡೋದು ಅಂತ ನೌಕರರು ಪ್ರಶ್ನಿಸಿದ್ದಾರೆ.
ಇನ್ನು ಗಡಿಜಿಲ್ಲೆ ರಾಯಚೂರಿನಲ್ಲಿ ಆಂಧ್ರಪ್ರದೇಶ, ತೆಲಂಗಾಣದ ಸುಮಾರು 40 ಸಾರಿಗೆ ಬಸ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂತಾರಾಜ್ಯ ಓಡಾಟಕ್ಕೆ ಪಕ್ಕದ ರಾಜ್ಯಗಳಿಂದ ಹೆಚ್ಚುವರಿ ಬಸ್‌ಗಳ ಓಡಾಟಕ್ಕಾಗಿ ರಾಯಚೂರು ಜಿಲ್ಲಾಡಳಿತ ಮನವಿ ಹಿನ್ನೆಲೆ ಹೆಚ್ಚುವರಿ ಬಸ್‌ಗಳು ಓಡಾಟ ಆರಂಭಿಸಿವೆ.
ಹೈದರಾಬಾದ್, ಮೆಹಬೂಬ್ ನಗರ, ಕರ್ನೂಲ್ ಮಾರ್ಗದಲ್ಲಿ ಬಸ್‌ಗಳ ಓಡಾಟ ನಡೆದಿದೆ. ಆದರೆ ರಾಯಚೂರು ಜಿಲ್ಲೆಯಲ್ಲಿ ವಿವಿಧ ಭಾಗಕ್ಕೆ ಕೆಲವು ಬಸ್‌ಗಳು ಮಾತ್ರ ಓಡಾಟ ನಡೆಸಿವೆ. ಬಸ್‌ಗಳು ಇಲ್ಲದೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ಮುಂದುವರೆದಿದೆ. ಅಂತರ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಿಗೆ ಬಸ್ ಓಡಾಟ ವಿರಳವಾಗಿದೆ.
ಈ ಸುದ್ದಿಯನ್ನೂ ಓದಿ | kSRTC Strike: ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಸಂಬಳ ಕಟ್, ರಜೆ ರದ್ದು, ಎಸ್ಮಾ ಜಾರಿ
ಕಲಬುರಗಿಯಲ್ಲಿ ಜನರಿಗೆ ತಟ್ಟಿದ ಬಿಸಿ; ವಿದ್ಯಾರ್ಥಿಗಳು, ನೌಕರರ ಪರದಾಟ

ಕಲಬುರಗಿ: ಸಾರಿಗೆ ಇಲಾಖೆಯ ನೌಕರರು ತಮ್ಮ 38 ತಿಂಗಳ ಹಿಂಬಾಕಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ರಾಜ್ಯದಾದ್ಯಂತ ಕೈಗೊಂಡ ಅನಿರ್ಧಿಷ್ಟಾವಧಿ ಮುಷ್ಕರದ (KSRTC Strike) ಬಿಸಿ ಕಲ್ಯಾಣ ನಾಡಿನ ಕೇಂದ್ರ ಸ್ಥಾನ ಕಲಬುರಗಿಗೂ (Kalaburagi news) ತಟ್ಟಿದೆ. ಕಲಬುರಗಿಯಲ್ಲೂ ಬಂದ್ ಬಿಸಿ ಭಾರಿ ಪ್ರಮಾಣದಲ್ಲಿ ತಟ್ಟಿದ್ದು, ಒಂದೇ ಒಂದು ಬಸ್ ಸಹ ರಸ್ತೆಗೆ ಇಳಿಯದ ಹಿನ್ನಲೆ ಪ್ರತಿನಿತ್ಯ ಬೆಳಗಿನ ಜಾವವೇ ಎದ್ದು ದೂರದ ಶಾಲಾ, ಕಾಲೇಜ್, ನೌಕರಿಗಳಿಗೆ ಹೋಗುವವರು ಭಾರಿ ಪರದಾಟ ನಡೆಸಿದರು. ಜತೆಗೆ ದೂರದೂರಿನಿಂದ ಕಲಬುರಗಿಗೆ ಆಸ್ಪತ್ರೆ ಸೇರಿ ವಿವಿಧ ಕಾರ್ಯ ನಿಮಿತ್ತ ಆಗಮಿಸಿ ಮರಳಿ ತಮ್ಮ ಊರಿಗೆ ಹೋಗುವ ಪ್ರಯಾಣಿಕರು ಸಹ ಗೋಳಾಡಿದರು.
ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವದಿಂದಲೇ ಎಂದಿನಂತೆ ಪ್ರಯಾಣಿಕರು ಆಗಮಿಸಿದರು. ಆದರೆ, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಬಸ್ ಹತ್ತುವುದಿಲ್ಲ ಎಂದು ನೌಕರರು ಪಟ್ಟು ಹಿಡಿದರು. ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಸ್ ಗಳ ಸಂಚಾರ ಇಲ್ಲದೇ ಪ್ರಯಾಣಿಕರಂತೂ ತೊಂದರೆಗೆ ಸಿಲುಕಿದ ದೃಶ್ಯ ಕಂಡು ಬಂತು.
ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್‌ಡಿ ಭೇಟಿ ನೀಡಿ, ಬಸ್‌ಗಳ ಪ್ರಯಾಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಖಾಸಗಿ ವಾಹನಗಳ ಮೊರೆ
ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರ ಹಿನ್ನಲೆ ಕಲಬುರಗಿಯ ಯಾವ ಬೀದಿಯಲ್ಲೂ ಬಸ್ ಗಳ ಸಂಚಾರದ ಲಕ್ಷಣ ಕಾಣದೇ ಇರುವುದರಿಂದ ಬೇರೆ ಜಿಲ್ಲೆ, ಊರುಗಳಲ್ಲಿ ಸರಕಾರಿ ನೌಕರಿ ಮಾಡುವ ನೌಕರರೆಲ್ಲ ಸೇರಿ ಖಾಸಗಿ ವಾಹನಗಳ ಮೊರೆ ಹೋದರು. ನಾಲ್ಕೈದು ಜನರು ಸೇರಿ ಒಂದು ಖಾಸಗಿ ವಾಹನ ಬುಕ್ ಮಾಡಿ ತಮ್ಮ ಕೆಲಸಗಳಿಗೆ ತೆರಳಿದ ಪ್ರಸಂಗ ಸಹ ನಡೆದಿದೆ. ಇನ್ನು ಕೆಲ ಸಾರ್ವಜನಿಕರು ಕೂಡ ಬಸ್ ಗಾಗಿ ಕಾಯದೆ, ಖಾಸಗಿ ವಾಹನ, ಪರಿಚಿತರ ವಾಹನ, ಸ್ವಂತ ವಾಹನಗಳಲ್ಲಿ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಮುಂದಾದರು.
ದುಪ್ಪಟ್ಟಾದ ಆಟೋ ರೇಟ್
ಬಸ್ ಮುಷ್ಕರ ಪ್ರಯುಕ್ತ ಜನರು ಅನಿವಾರ್ಯ ಕಾರಣ ಖಾಸಗಿ ವಾಹನಗಳ ಮೊರೆ ಹೋದರೆ, ವಾಹನಗಳ ಸೌಲಭ್ಯ ಪಡೆಯಲು ಆಗದ ಕೆಲವರು ಆಟೋಗಳ ಮೊರೆ ಹೋದರು. ಆದರೆ, ನಿತ್ಯವೂ ಒಂದಿದ್ದ ಆಟೋ ದರ ಮುಷ್ಕರ ಹಿನ್ನಲೆ ದುಪ್ಪಟ್ಟಾಗಿತ್ತು. ೨೦ ರು. ಜಾಗದಲ್ಲಿ ೨೦೦ ರು. ೫೦ ಜಾಗದಲ್ಲಿ ೫೦೦ ರು. ದರ ನಿಗದಿ ಮಾಡಿದ ಆಟೋ ಚಾಲಕರು ಮುಷ್ಕರದ ದುರುಪಯೋಗ ಮಾಡಿಕೊಂಡ ಘಟನೆ ಸಹ ನಡೆಯಿತು. ಬಸ್ ಸೇವೆ ಇಲ್ಲದೇ, ವಾಹನಗಳ ಸೌಲಭ್ಯ ಪಡೆಯಲು ಆಗದೆ, ಆಟೋಗಳಿಗೆ ದುಪ್ಪಟು ಹಣ ನೀಡುವ ಪರಿಸ್ಥಿತಿಯಿಂದಾಗಿ ಶ್ರೀ ಸಾಮಾನ್ಯ ಪರದಾಡಿದರು.
ಕಾನೂನು ಕೈಗೆತ್ತಿಕೊಂಡರೆ ಕ್ರಮ: ಆಯುಕ್ತರು
ಮುಷ್ಕರದಿಂದಾಗಿ ನಗರದ ಎಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಯಾರೇ ಬಂದ್ ಮಾಡುವಂತ ಕೆಲಸಕ್ಕೆ ಕೈಹಾಕಬಾರದು. ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಶೇ.10ರಷ್ಟು ಮಾತ್ರ ಬಸ್ ಸಂಚಾರ ಮಾಡುತ್ತಿವೆ. ಸಾರಿಗೆ ಇಲಾಖೆ ಅಧಿಕಾರಿಗಳ ಜತೆಗೆ ಚೆರ್ಚೆ ಮಾಡಿ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಹೇಳಿದ್ದಾರೆ.
ಪರ್ಯಾಯ ವ್ಯವಸ್ಥೆ
ನಿತ್ಯ ಬೆಳಗ್ಗೆ 5 ಗಂಟೆಯಿಂದ ೮ ಗಂಟೆಗೆ ವರೆಗೆ ನಿತ್ಯ ೨೨೦ ಬಸ್ ಸಂಚಾರ ಮಾಡುತ್ತಿದ್ದವು. ಮುಷ್ಕರದಿಂದ ಕೇವಲ 20 ಬಸ್ ಮಾತ್ರ ಸಂಚರಿಸಿವೆ. ಪರ್ಯಾಯವಾಗಿ ಖಾಸಗಿ ಬಸ್ ಹಾಗು ಕ್ರೂಸರ್‌ಗಳ ಬಳಕ್ಕೆ ಮಾಡುತ್ತಿದ್ದೇವೆ. ಪ್ರಯಾಣಿಕರಿಗೆ ತೊಂದರೆ ಆಗದಂತೆ ಮಾಡುತ್ತಿದ್ದೇವೆ ಎಂದು ಕೆಕೆಆರ್ಟಿಸಿ ವಿಭಾಗ-೧ರ ಗಂಗಾಧರ್ ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ: kSRTC Strike: ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಸಂಬಳ ಕಟ್, ರಜೆ ರದ್ದು, ಎಸ್ಮಾ ಜಾರಿ