Special Economic Zone: ಇಟ್ಟಿಗಟ್ಟಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ SEZ ಘೋಷಣೆ; 28 ಎಕರೆ ವಿಶೇಷ ಆರ್ಥಿಕ ವಲಯಕ್ಕೆ ಗೆಜೆಟ್
Pralhad Joshi: ಧಾರವಾಡದ ಇಟ್ಟಿಗಟ್ಟಿಯಲ್ಲಿ ʼಏಕಸ್ ಇನ್ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್ ಪ್ರೈವೇಟ್ ಲಿಮಿಟೆಡ್ ಪ್ರಸ್ತಾಪಿಸಿದ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯ (SEZ) ವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ.

ನವದೆಹಲಿ: ಕೇಂದ್ರ ಸರ್ಕಾರ 79ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ (SEZ) ಘೋಷಣೆಯ ವಿಶಿಷ್ಠ ಕೊಡುಗೆ ನೀಡಿದೆ. ಧಾರವಾಡದ ಇಟ್ಟಿಗಟ್ಟಿಯಲ್ಲಿ ʼಏಕಸ್ ಇನ್ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್ ಪ್ರೈವೇಟ್ ಲಿಮಿಟೆಡ್ ಪ್ರಸ್ತಾಪಿಸಿದ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯ (SEZ) ವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಎಲೆಕ್ಟ್ರಾನಿಕ್ಸ್ ಘಟಕಗಳ ಅವಶ್ಯಕತೆಯನ್ನು ಮನಗಂಡು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಇಟ್ಟಿಗಟ್ಟಿಯಲ್ಲಿ (Itigatti) ಎಲೆಕ್ಟ್ರಾನಿಕ್ ಘಟಕಗಳಿಗಾಗಿ ಎಸ್‌ಇಝಡ್ (Special Economic Zone) ಘೋಷಣೆಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಸಚಿವ ಜೋಶಿ ಅವರ ಮನವಿಗೆ ಸ್ಪಂದಿಸಿ SEZ ಘೋಷಣೆ ಮಾಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
28 ಎಕರೆ SEZ ಘೋಷಣೆ
ಒಟ್ಟು 391 ಎಕರೆ ಭೂಮಿ ಹೊಂದಿರುವ ಏಕಸ್ ಇನ್ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್‌ನಲ್ಲಿ ಈಗ 28 ಎಕರೆ ಭೂಮಿಯನ್ನು ಎಲೆಕ್ಟ್ರಾನಿಕ್ಸ್ ವಿಶೇಷ ಆರ್ಥಿಕ ವಲಯ ಎಂದು ಘೋಷಿಸಿದ್ದು, ಉತ್ತರ ಕರ್ನಾಟಕದ ಅದರಲ್ಲಿಯೂ ವಿಶೇಷವಾಗಿ ಹುಬ್ಬಳ್ಳಿ-ಧಾರವಾಡ ಕೈಗಾರಿಕೋದ್ಯಮಿಗಳಿಗೆ ಇದು ಸಂತಸದ ವಿಷಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಉತ್ತರ ಕರ್ನಾಟಕ ಭಾಗಕ್ಕೆ ಬರುವ ದಿನಗಳಲ್ಲಿ ಹೊಸ ಎಲೆಕ್ಟ್ರಾನಿಕ್ಸ್ ಉದ್ಯಮಗಳು ಬಂದಂತೆ ವಿಶೇಷ ಆರ್ಥಿಕ ವಲಯದ ವಿಸ್ತರಣೆ ಮಾಡುವ ಅವಕಾಶವಿದೆ. ಹುಬ್ಬಳ್ಳಿ-ಧಾರವಾಡದ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ಈ ವಿಶೇಷ ಆರ್ಥಿಕ ವಲಯ ಉತ್ತೇಜನ ನೀಡಲಿದೆ ಎಂದು ಸಚಿವ ಜೋಶಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕ್ರಮ ಹುಬ್ಬಳ್ಳಿಯನ್ನು ಎಲೆಕ್ಟ್ರಾನಿಕ್ಸ್, ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಶಕ್ತಿಕೇಂದ್ರವಾಗಿ ಪರಿವರ್ತಿಸುವ ನಿರ್ಣಾಯಕ ಹೆಜ್ಜೆಯಾಗಲಿದೆ. ಹುಬ್ಬಳ್ಳಿ-ಧಾರವಾಡ ಕೌಶಲ್ಯಪೂರ್ಣ ಕಾರ್ಮಿಕರ ತಂಡದೊಂದಿಗೆ ತ್ವರಿತ ಕೈಗಾರಿಕಾ ಬೆಳವಣಿಗೆ, ಗುಣಮಟ್ಟದ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ಹೊಂದಿದವರಿಗೆ ಗುಡ್‌ನ್ಯೂಸ್; ಬರೋಬ್ಬರಿ 5,180 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ
ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದ
ನನ್ನ ಮನವಿಗೆ ಸ್ಪಂದಿಸಿ ಏಕಸ್ ಇನ್ಫ್ರಾದ ಹುಬ್ಬಳ್ಳಿ ಡ್ಯೂರಬಲ್ ಗೂಡ್ಸ್ ಕ್ಲಸ್ಟರ್ ಪ್ರೈವೇಟ್ ಲಿಮಿಟೆಡ್ ಪ್ರಸ್ತಾಪಿಸಿದ ಎಲೆಕ್ಟ್ರಾನಿಕ್ ಘಟಕಗಳಿಗಾಗಿ ವಿಶೇಷ ಆರ್ಥಿಕ ವಲಯ (SEZ) ವನ್ನಾಗಿ ಘೋಷಿಸಿದ್ದಕ್ಕೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಹಾಗೂ ಕರ್ನಾಟಕ ಸರ್ಕಾರದ ವಾಣಿಜ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧ್ಯನವಾದ ತಿಳಿಸಿದ್ದಾರೆ.