Bangladeshi Gang Attack: ಒಳನುಗ್ಗಲು ಯತ್ನಿಸಿದ ಬಾಂಗ್ಲಾ ಗ್ಯಾಂಗ್‌ನ ಮತ್ತೋರ್ವನನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು
ಮೇಘಾಲಯದ ರೋಂಗ್‌ಡಂಗೈ ಗ್ರಾಮದ ಸ್ಥಳೀಯ ವ್ಯಕ್ತಿಯೊಬ್ಬನ ಅಪಹರಣ ಯತ್ನದಲ್ಲಿ ಭಾಗಿಯಾಗಿದ್ದ ಬಾಂಗ್ಲಾದೇಶದ ಅಕ್ರಮ್ ಮೇಲೆ ಕೈತಾ ಕೋನಾ ಗ್ರಾಮಸ್ಥರು ಹಲ್ಲೆ ನಡೆಸಿದ್ದು, ಆತ ಸಾವನ್ನಪ್ಪಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಇದರಲ್ಲಿ ಓರ್ವ ಬಾಂಗ್ಲಾದೇಶ ಪೊಲೀಸರ ಸಶಸ್ತ್ರ ಸಿಬ್ಬಂದಿ ಎಂದು ಗುರುತಿಸಲಾಗಿದೆ.


ಶಿಲ್ಲೊಂಗ್: ಕಳೆದ ಶುಕ್ರವಾರ ಮೇಘಾಲಯದ ರೊಂಗ್ಡೊಂಗೈ ಗ್ರಾಮಕ್ಕೆ (Rongdangai village) ನುಗ್ಗಿದ ಬಾಂಗ್ಲಾದೇಶಿ ಗ್ಯಾಂಗ್ (Bangladeshi Gang Attack) ಗ್ರಾಮಸ್ಥನೊಬ್ಬನ ಮೇಲೆ ದಾಳಿ ನಡೆಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐವರನ್ನು ಬಂಧಿಸಲಾಗಿತ್ತು. ಇದೀಗ ಮೇಘಾಲಯದ ಕೈತಾ ಕೋನಾ ಗ್ರಾಮದಲ್ಲಿ (Kaitha Kona village) ಒಳನುಗ್ಗಲು ಯತ್ನಿಸಿದ ಬಾಂಗ್ಲಾದೇಶದ ವ್ಯಕ್ತಿಯೊಬ್ಬನ ಮೇಲೆ ಸ್ಥಳೀಯರೇ ಹಲ್ಲೆ ನಡೆಸಿದ್ದು, ಆತ ಸಾವನ್ನಪ್ಪಿದ್ದಾನೆ. ಮೃತನನ್ನು ಬಾಂಗ್ಲಾದೇಶದ ಅಕ್ರಮ್ ಎಂದು ಗುರುತಿಸಲಾಗಿದೆ. ಅಕ್ರಮ್‌ನನ್ನು ಸೋಮವಾರ ಕೈತಾ ಕೋನಾ ಗ್ರಾಮಸ್ಥರು ಸೆರೆ ಹಿಡಿದಿದ್ದರು.
ಮೇಘಾಲಯದ ನೈಋತ್ಯ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಗಡಿಯಾಚೆಗಿನ ಒಳನುಗ್ಗುವಿಕೆ ಮತ್ತು ಅಪಹರಣ ಪ್ರಯತ್ನದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಬಾಂಗ್ಲಾದೇಶದ ಅಕ್ರಮ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದು, ಆತ ಸಾವನ್ನಪ್ಪಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಮೃತನನ್ನು ಬಾಂಗ್ಲಾದೇಶದ ಶೇರ್‌ಪುರ ಜಿಲ್ಲೆಯ ಜೆನಾಘಾಟಿಯ ಅಕ್ರಮ್ ಎಂದು ಗುರುತಿಸಲಾಗಿದೆ. ಈತನನ್ನು ಸೋಮವಾರ ಸಂಜೆ 4.30ರ ಸುಮಾರಿಗೆ ಕೈತಾ ಕೋನಾ ಗ್ರಾಮದ ನಿವಾಸಿಗಳು ಸೆರೆ ಹಿಡಿದಿದ್ದರು.
ಗಂಭೀರವಾಗಿ ಗಾಯಗೊಂಡ ಅಕ್ರಮ್‌ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದರು. ಅನಂತರ ಅತನನ್ನು ಮಹೇಶ್‌ಖೋಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಬನ್ರಾಪ್ ಜೈರ್ವಾ ತಿಳಿಸಿದ್ದಾರೆ.
ಅಕ್ರಮ್ ಕೂಡ ರೋಂಗ್‌ಡಂಗೈ ಗ್ರಾಮದ ಸ್ಥಳೀಯ ವ್ಯಕ್ತಿಯೊಬ್ಬನ ಅಪಹರಣ ಯತ್ನದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐದು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬ ಬಾಂಗ್ಲಾದೇಶ ಪೊಲೀಸರ ಸಶಸ್ತ್ರ ಸಿಬ್ಬಂದಿ ಎಂದು ಗುರುತಿಸಲಾಗಿದೆ.
ಸ್ಥಳೀಯರು ಅಕ್ರಮ್ ನನ್ನು ಸೆರೆ ಹಿಡಿಯುವ ಮೊದಲು ಸುಮಾರು ಸುಮಾರು ಎಂಟು ಮಂದಿ ಗ್ರಾಮಕ್ಕೆ ನುಗ್ಗಿ ಗ್ರಾಮದ ಆಸ್ತಿಯನ್ನು ಧ್ವಂಸಗೊಳಿಸಿದ್ದರು. ಆರೋಪಿಗಳಿಂದ ಒಂದು ರಿವಾಲ್ವರ್, ಬಾಂಗ್ಲಾದೇಶ ಪೊಲೀಸ್ ಗುರುತಿನ ಚೀಟಿ, ಮೂರು ವೈರ್‌ಲೆಸ್ ಸೆಟ್‌ಗಳು ಮತ್ತು ಒಂದು ಮ್ಯಾಗಜೀನ್ ಪೌಚ್ ಅನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಜೈರ್ವಾ ಹೇಳಿದರು.
ಇದನ್ನೂ ಓದಿ: Bangladeshi Gang Attack: ಗಡಿಯೊಳಗೆ ನುಗ್ಗಿ ಬಾಂಗ್ಲಾದೇಶಿ ಗ್ಯಾಂಗ್‌ನಿಂದ ಡೆಡ್ಲಿ ಅಟ್ಯಾಕ್!
ಬಂಧಿತರಲ್ಲಿ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಇಬ್ಬರ ಪತ್ತೆಗೆ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.