Navaratra Namasya: ತಾಯಿ ಹೃದಯ ಇಲ್ಲದವರು ಗುರುವಾಗಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ
Navaratra Namasya: ತಾಯಿ ಮತ್ತು ಗುರುವಿನ ತತ್ವಗಳು ಒಂದೆ, ಅದು ವಾತ್ಸಲ್ಯ. ತಾಯಿ ಹೃದಯವಿಲ್ಲದವರು ಗುರುವಾಗುವುದಕ್ಕೆ ಸಾಧ್ಯವಿಲ್ಲ ಹಾಗೂ ಗುರು ಒಲಿಯುವುದಕ್ಕೂ ತಾಯಿಯ ಆಶೀರ್ವಾದಬೇಕು ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

-

ಸಾಗರ: ನಾವು ನಮ್ಮ ವಶದಲ್ಲಿರಬೇಕು. ಹಾಗಿದ್ದರೆ ಮಾತ್ರ ನೆಮ್ಮದಿ. ಮನಸ್ಸು, ದೇಹ ನಮ್ಮ ವಶದಲ್ಲಿಲ್ಲ ಎಂದಾದರೆ ಯಾವ ಸಾಧನೆಯನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ 'ನವರಾತ್ರ ನಮಸ್ಯಾ'(Navaratra Namasya) ಐದನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಇಂದು ಊರು, ರಾಜ್ಯ ಜಗತ್ತು ತನ್ನ ವಶವಾಗಬೇಕು ಎನ್ನುವ ಮನಸ್ಸು ಹೊಂದಿರುವ ಮನುಷ್ಯ ತನ್ನನ್ನು ತಾನು ವಶವಿಟ್ಟುಕೊಳ್ಳಲಾಗದಿರುವ ಪರಿಸ್ಥಿತಿಯಲ್ಲಿದ್ದಾನೆ. ಕ್ಷಣಕ್ಕೂ ಚಂಚಲವಾಗುವ ಮನಸ್ಸು ನಿಯಂತ್ರಣದಲ್ಲಿಟ್ಟುಕೊಳ್ಳಲಾಗದಿರುವ ಮನುಷ್ಯ ಕನಿಷ್ಠ ದೇಹದ ಆರೋಗ್ಯವನ್ನಾದರೂ ವಶದಲ್ಲಿಟ್ಟುಕೊಂಡಿದ್ದಾನಾ ಎಂದು ಕೇಳಿದರೆ ಖಂಡಿತಾ ಇಲ್ಲ. ಎಂದರೆ ದೇಹವೂ ನಮ್ಮ ವಶದಲ್ಲಿಲ್ಲ ಹೀಗಿದ್ದೂ ಬೇರೆಯದನು ನನ್ನದಾಗಿಸಿಕೊಳ್ಳುವ ಆಸೆ ಹೊಂದುವುದು ವಿಪರ್ಯಾಸ ಎಂದ ಶ್ರೀಗಳು, ಜಗನ್ಮಾತೆ ಮಾತ್ರ ತನ್ನನ್ನು ತಾನು ವಶದಲ್ಲಿಟ್ಟುಕೊಳ್ಳುವುದಲ್ಲದೆ ಜಗತ್ತನ್ನು ವಶವಿಟ್ಟುಕೊಳ್ಳಬಲ್ಲಳು ಎಂದು ಹೇಳಿದರು.
ತಾಯಿ ಮತ್ತು ಗುರುವಿನ ತತ್ವಗಳು ಒಂದೆ, ಅದು ವಾತ್ಸಲ್ಯ, ತಾಯಿ ಹೃದಯವಿಲ್ಲದವರು ಗುರುವಾಗುವುದಕ್ಕೆ ಸಾಧ್ಯವಿಲ್ಲ ಹಾಗೂ ಗುರು ಒಲಿಯುವುದಕ್ಕೂ ತಾಯಿಯ ಆಶೀರ್ವಾದಬೇಕು ಎಂದರು.
ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಶ್ರೀಮಠದ ಪರವಾಗಿ ಕೊಡ ಮಾಡಿದ ಸಮಾಜ ಗೌರವವನ್ನು ಜೋಗಿ ಸಮಾಜ, ಬಿಲ್ಲವ ಯಾನೆ ಪೂಜಾರ ಸಮಾಜ, ನಾಮದೇವ ಸಮಾಜ, ಒಕ್ಕಲಿಗರ ಸಮಾಜ ಹಾಗೂ ನಾಮಧಾರಿ ಸಮಾಜದ ಪರವಾಗಿ ಆಯಾ ಸಮಾಜದ ಅಧ್ಯಕ್ಷರಾದ ಸತೀಶ್ ಜೋಗಿ, ಸುಂದರ್, ರಾಘವೇಂದ್ರ, ಗುಂಡಪ್ಪ ಗೌಡ, ಕೆ.ಎಸ್. ವೆಂಕಟೇಶ್ ಸ್ವೀಕರಿಸಿದರು.
ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಂ.ಎ.ಡಿ.ಬಿ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ, ಶಿಮೂಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಮತ್ತಿತರ ಪ್ರಮುಖರು ಶ್ರೀಗಳವರಿಂದ ಆಶೀರ್ವಾದ ಪಡೆದರು. ಚಿತ್ರ ಕಲಾವಿದೆ ಶ್ರೀಲಕ್ಷ್ಮಿ ಪ್ರವಚನಕ್ಕೆ ಪೂರಕವಾಗಿ ಸ್ಥಳದಲ್ಲಿಯೇ ಚಿತ್ರ ರಚಿಸಿ ಮೆಚ್ಚುಗೆಗೆ ಪಾತ್ರರಾದರು.
ನವರಾತ್ರ ನಮಸ್ಯಾ ಸಮಿತಿಯ ಶಿವರಾಮಯ್ಯ, ಲಕ್ಷ್ಮಿನಾರಾಯಣ ಸಂಪ, ಅಶೋಕ ಅತ್ತಿಸರ, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಎಂಜಿ, ರಾಮಚಂದ್ರ, ಸುಬ್ರಮಣ್ಯ ಐಸಿರಿ, ಶ್ರೀನಾಥ ಸಾರಂಗ, ರವಿ ಕೈತೋಟ ಮತ್ತಿತರರು ಇದ್ದರು.
ಈ ಸುದ್ದಿಯನ್ನೂ ಓದಿ | ಜಗತ್ತಿನಲ್ಲಿ ಸಹನೆಗಿಂತ ದೊಡ್ಡ ಅಸ್ತ್ರ ಇಲ್ಲ: ರಾಘವೇಶ್ವರ ಶ್ರೀ
ಇದಕ್ಕೂ ಮುನ್ನ ಬೆಳಗ್ಗೆ ಲಲಿತಾ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ನೆರವೇರಿತು.