Navaratra Namasya: ನವರಾತ್ರಿ ಎಂದರೆ ಮನರಂಜನೆಯಲ್ಲ, ಅದು ದೇವಿಯ ಆರಾಧನೆ ಕಾಲ: ರಾಘವೇಶ್ವರ ಶ್ರೀ
Navaratra Namasya: ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ʼನವರಾತ್ರ ನಮಸ್ಯಾʼ ದ ಆರನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಆಶೀರ್ವಚನ ನೀಡಿದ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು, ನವರಾತ್ರಿ ಎಂದರೆ ಅದು ಮನರಂಜನೆಗಾಗಿ ಇರುವ ಪರ್ವವಲ್ಲ. ಬದಲಾಗಿ ದೇವಿಯ ಆರಾಧನೆ ಕಾಲ ಎಂದು ತಿಳಿಸಿದ್ದಾರೆ.

-

ಸಾಗರ: ನವರಾತ್ರಿ ಎಂದರೆ ಅದು ಮನರಂಜನೆಗಾಗಿ ಇರುವ ಪರ್ವವಲ್ಲ. ಬದಲಾಗಿ ದೇವಿಯ ಆರಾಧನೆ ಕಾಲ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಸಾಗರದ ಶ್ರೀ ರಾಘವೇಶ್ವರ ಭವನದ ಶ್ರೀಮನ್ನಗರ ವೇದಿಕೆಯಲ್ಲಿ ಏರ್ಪಡಿಸಿರುವ ʼನವರಾತ್ರ ನಮಸ್ಯಾʼ ದ (Navaratra Namasya) ಆರನೇ ದಿನದ ಲಲಿತೋಪಾಖ್ಯಾನ ಪ್ರವಚನದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.
ಲೋಕ ಕಲ್ಯಾಣ ಕಾರ್ಯದಲ್ಲಿ ತಾಯಿ ಮಗ್ನವಾಗಿರುವಾಗ ಆಕೆಯ ಪರಿವಾರ ಆಕೆಗೆ ಯಾವ ರೀತಿಯ ಸಹಕಾರ ನೀಡಿದರು ಮತ್ತು ಆ ಎಲ್ಲ ದೇವಿಯರು ಯಾರು ಎನ್ನುವ ಹೆಸರನ್ನು ತಿಳಿದರೆ, ಅವರ ನಾಮ ಜಪಿಸಿದರೆ ಅದಕ್ಕಿಂತ ಪುಣ್ಯ ಬೇರೆ ಯಾವುದಿಲ್ಲ ಎಂದು ತಿಳಿಸಿದ ಶ್ರೀಗಳು, ಅಂತಹ ಪುಣ್ಯ ಸಂಪಾದನೆಯನ್ನು ಮಾಡಿಕೊಳ್ಳುವುದಕ್ಕಾಗಿಯೇ ನವರಾತ್ರಿ ಎನ್ನುವುದು ಶ್ರೇಷ್ಠವಾದ ಕಾಲ. ಹಾಗಾಗಿ ಇದು ಪೂರ್ಣ ದೇವಿಯ ಆರಾಧನೆಯ ಸಮಯವೇ ಹೊರತು ಮನರಂಜನೆಯ ಸಮಯವಲ್ಲ ಎಂದರು.
ಆಧುನಿಕ ಪದ್ಧತಿ ವೈಜ್ಞಾನಿಕವೂ ಅಲ್ಲ ಖಗೋಳದ ಬೆಂಬಲವೂ ಇಲ್ಲ
ಜನವರಿ, ಫೆಬ್ರವರಿ, ಒಂದು ಎರಡು ದಿನಾಂಕದ ಆಧುನಿಕ ಪದ್ಧತಿಗೆ ವೈಜ್ಞಾನಿಕ ಅರ್ಥವೂ ಇಲ್ಲ, ಖಗೋಳದ ಬೆಂಬಲವೂ ಇಲ್ಲ. ಆದರೆ ತಿಥಿ, ಮಾಸಗಳಿಗೆ ಪ್ರಕೃತಿ ಸಹಜತೆ ಕಂಡು ಬಂದಿದೆ. ಉದಾಹರಣೆ ಹುಣ್ಣಿಮೆ ಎನ್ನುವ ತಿಥಿಗೆ ಆಕಾಶ ತೋರಿದರೆ ಅಲ್ಲಿ ಗೋಚರವಾಗಲಿದೆ ಇದು ಪ್ರತಿ ತಿಥಿಗೂ ಹಾಗೆ ಆಯಾ ಮಾಸಗಳಲ್ಲಿ ಪ್ರಕೃತಿಯ ಬದಲಾವಣೆಗಳನ್ನು ತಿಳಿಸುವ ವೈಜ್ಞಾನಿಕ ನಿಜವಿದೆ ಎಂದು ಹೇಳಿದ ಶ್ರೀಗಳು, ಈ ಪ್ರತಿ ತಿಥಿ ನಕ್ಷತ್ರಗಳಲ್ಲಿ ದೈವಿ ಸ್ವರೂಪ ಇದೆ ಅದನ್ನು ನಿತ್ಯ ಗಮನಿಸಿದರೆ ಪೂರ್ವಜರು ತಿಳಿಸಿರುವ ವಿಧಾನದ ಸತ್ಯ ಅರಿವಾಗಲಿದೆ. ಅಂತಹ ಪ್ರಕೃತಿ ಸಹಜತೆಯ ವಿಧಾನವನ್ನು ಬಿಟ್ಟು ವೈಜ್ಞಾನಿಕವಲ್ಲದ ಮೌಢ್ಯವನ್ನು ಅನುಸರಿಸುತ್ತಿರುವುದು ಬೇಸರದ ಸಂಗತಿ ಎಂದರು.
ಇದಕ್ಕೂ ಮುನ್ನ ನವರಾತ್ರ ನಮಸ್ಯಾ ಸಮಿತಿಯಿಂದ ಕೊಡ ಮಾಡಿದ ಸಮಾಜ ಗೌರವವನ್ನು ಗುಡಿಗಾರ ಸಮಾಜ, ಮಡಿವಾಳ ಸಮಾಜ, ಹಸಲರ ಸಮಾಜ, ವೀರಶೈವ ಸಮಾಜ, ಬಲಿಜ ಸಮಾಜ, ಬಾಹುಸಾರ ಕ್ಷತ್ರಿಯ ಸಮಾಜ, ಹಾಗೂ ಉಪ್ಪಾರ ಸಮಾಜಕ್ಕೆ ಕೊಡಲಾಯಿತು. ಆಯಾ ಸಮಾಜದ ಪರವಾಗಿ ಅಧ್ಯಕ್ಷರಾದ ಅಣ್ಣಪ್ಪ ಗುಡಿಗಾರ, ಕೊಟ್ರಪ್ಪ, ಮಲ್ಲೇಶಪ್ಪ, ಕೆ.ವಿ. ಪ್ರವೀಣ್, ಸತೀಶ, ರವಿ ಮಹೇಂದ್ರಕರ್, ಮಲ್ಲೇಶಪ್ಪ ಗೌರವ ಸ್ವೀಕರಿಸಿದರು.
ನವರಾತ್ರ ನಮಸ್ಯಾ ಸಮಿತಿಯ ಪ್ರಧಾನ ಸಂಚಾಲಕ ಮುರಳಿ ಗೀಜಗಾರು, ಅಧ್ಯಕ್ಷ ಗುರುಮೂರ್ತಿ ಹೆಗಡೆ ಕಲ್ಸೆಮನೆ, ಶ್ರೀಮಠದ ವಿತ್ತಾಧ್ಯಕ್ಷ ಜಿ.ಎಲ್. ಗಣೇಶ್, ಮಾಧ್ಯಮ ಶ್ರೀಸಂಯೋಜಕ ಸಂದೇಶ ತಲಕಾಲಕೊಪ್ಪ, ಹವ್ಯಕ ಮಂಡಲದ ಪ್ರಮುಖರಾದ ಗಣಪತಿ ಬೇದೂರು, ವಿ.ಜಿ. ಹೆಗಡೆ, ಕೆ.ಆರ್. ಗೋಪಾಲ, ತೀರ್ಥಹಳ್ಳಿ ಮಠದ ಸಮಿತಿ ಅಧ್ಯಕ್ಷ ಕಾರ್ತಿಕ್, ಮಹಾಮಂಡಲದ ಪ್ರಧಾನ ರಮೇಶ್ ಹೆಗಡೆ ಗುಂಡೂಮನೆ, ಶ್ರೀನಾಥ ಸಾರಂಗ, ಎಂ.ಜಿ. ರಾಮಚಂದ್ರ, ಗೌತಮ ಮತ್ತಿತರರು ಇದ್ದರು.
ಈ ಸುದ್ದಿಯನ್ನೂ ಓದಿ | Navaratra Namasya: ತಾಯಿ ಹೃದಯ ಇಲ್ಲದವರು ಗುರುವಾಗಲು ಸಾಧ್ಯವಿಲ್ಲ: ರಾಘವೇಶ್ವರ ಶ್ರೀ
ಇದಕ್ಕೂ ಮುನ್ನ ಬೆಳಗ್ಗೆ ಲಲಿತಾ ಹವನ, ಧೂಮ್ರಹಾ ಉಪಾಸನೆ, ಜಯದುರ್ಗ ಮೂಲಮಂತ್ರ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಉಡಿ ಹಾಗೂ ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ಹಾಗೂ ಚಂಡಿಕಾ ಪಾರಾಯಣ ನೆರವೇರಿತು.