ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗಂಡ ಮೃತಪಟ್ಟ ಒಂದೇ ವಾರಕ್ಕೆ ಪೊಲೀಸಪ್ಪನಿಂದ ಕಿರುಕುಳ; ಮನನೊಂದು ಮಹಿಳೆ ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಪತಿ ಫೆಬ್ರವರಿ 14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಅವರು ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.

ಪೊಲೀಸ್‌ ಪೇದೆ ಕಿರುಕುಳ; ಗಂಡ ಮೃತಪಟ್ಟ ಒಂದೇ ವಾರಕ್ಕೆ ಪತ್ನಿಯೂ ಆತ್ಮಹತ್ಯೆ

ಜಗದೀಶ್‌-ಸ್ವಾತಿ ದಂಪತಿ ಮತ್ತು ಕಿರುಕುಳ ನೀಡಿದ ಪೊಲೀಸ್‌ ಪೇದೆ ಮೋಹನ್. -

Prabhakara R
Prabhakara R Feb 20, 2026 10:39 PM

ಭದ್ರಾವತಿ: ಪತಿ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಪತ್ನಿಯೂ ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ (Shivamogga News) ಜಿಲ್ಲೆ ಭದ್ರಾವತಿ ತಾಲೂಕಿನ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಪೊಲೀಸ್ ಕಾನ್ಸ್‌ಸ್ಟೆಬಲ್‌ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇವರ ಪತಿ ಜಗದೀಶ್ ಅವರು ಕೆಎಸ್ಐಎಸ್ಎಫ್ ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಜೀವನದಲ್ಲಿ ಜುಗುಪ್ಸೆಗೊಂಡು ಫೆಬ್ರವರಿ 14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಪತಿ ಮೃತಪಟ್ಟು ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.

ಸ್ವಾತಿ ಅವರು ಸಾಯುವ ಮುನ್ನ ಅವರ ತಾಯಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಮೋಹನ್ ಎಂಬುವವರ ಹೆಸರನ್ನು ಉಲ್ಲೇಖಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಮೋಹನ್‌ ಎಂಬ ಪೊಲೀಸ್‌ ತನಗೆ ಮೆಸೇಜ್ ಮಾಡಿದ್ದರು. ಬ್ಲಾಕ್ ಮಾಡಿದ್ದಕ್ಕೆ, ಆತ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮ್ಮನೆ ಬಿಡಬೇಡಿ ಎಂದು ಸ್ವಾತಿ ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳು ಈಗ ಅನಾಥರಾಗಿದ್ದಾರೆ. ಸ್ವಾತಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.