ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Siddaramaiah Award: ಪತ್ರಕರ್ತೆಯರ ಸಂಘದ ಸಿಎಂ ಸಿದ್ದರಾಮಯ್ಯ ದತ್ತಿನಿಧಿ ಪ್ರಶಸ್ತಿಗೆ ಸುಶೀಲಾ ಸುಬ್ರಹ್ಮಣ್ಯ, ನೀಳಾ ಎಂ.ಎಚ್ ಆಯ್ಕೆ‌

Siddaramaiah Award: ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ತಮ್ಮದೇ ಹೆಸರಿನಲ್ಲಿ ಪ್ರಶಸ್ತಿ ಪ್ರಕಟಿಸಲು ದತ್ತಿನಿಧಿ ನೀಡಿದ್ದು, 2024-25ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಾಗಿ ಸಂಘ ಈ ಇಬ್ಬರು ಹಿರಿಯ ಪತ್ರಕರ್ತೆಯರನ್ನು ಆಯ್ಕೆ ಮಾಡಿದೆ. ʼಸಿದ್ದರಾಮಯ್ಯ ಪ್ರಶಸ್ತಿʼ ಪ್ರದಾನ ಸಮಾರಂಭ ನವೆಂಬರ್‌ 28ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ʼಕೊಂಡಜ್ಜಿ ಬಸಪ್ಪʼ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.

ಸಿದ್ದರಾಮಯ್ಯ ಪ್ರಶಸ್ತಿಗೆ ಸುಶೀಲಾ ಸುಬ್ರಹ್ಮಣ್ಯ, ನೀಳಾ ಎಂ.ಎಚ್ ಆಯ್ಕೆ‌

ನೀಳಾ ಎಂ.ಎಚ್‌, ಸುಶೀಲಾ ಸುಬ್ರಹ್ಮಣ್ಯ -

ಹರೀಶ್‌ ಕೇರ
ಹರೀಶ್‌ ಕೇರ Nov 19, 2025 12:59 PM

ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘ (karnataka women journalists association) ನೀಡುವ ಸಿಎಂ ಸಿದ್ದರಾಮಯ್ಯ ಹೆಸರಿನ 2024-25ನೇ ಸಾಲಿನ ದತ್ತಿನಿಧಿ ಪ್ರಶಸ್ತಿ ((CM Siddaramaiah award)) ಹಿರಿಯ ಪತ್ರಕರ್ತೆಯರಾದ ಸುಶೀಲಾ ಸುಬ್ರಹ್ಮಣ್ಯ ಹಾಗೂ ನೀಳಾ ಎಂ.ಎಚ್‌. ಅವರಿಗೆ ದೊರೆತಿದೆ. ನಲವತ್ತು ವರ್ಷಗಳಿಂದ ʼಸದರ್ನ್‌ ಎಕನಾಮಿಸ್ಟ್‌ʼ ಪತ್ರಿಕೆ ನಡೆಸುತ್ತಿರುವ ಹಿರಿಯ ಪತ್ರಕರ್ತೆ ಸುಶೀಲಾ ಸುಬ್ರಹ್ಮಣ್ಯ ಹಾಗೂ ‘ಪ್ರಜಾವಾಣಿʼ ಪತ್ರಿಕೆಯ ಮುಖ್ಯ ಉಪಸಂಪಾದಕಿ ನೀಳಾ ಎಂ.ಎಚ್‌. 2025ನೇ ಸಾಲಿನ ಸಿದ್ದರಾಮಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ತಮ್ಮದೇ ಹೆಸರಿನಲ್ಲಿ ಪ್ರಶಸ್ತಿ ಪ್ರಕಟಿಸಲು ದತ್ತಿನಿಧಿ ನೀಡಿದ್ದು, 2024-25ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಾಗಿ ಸಂಘ ಈ ಇಬ್ಬರು ಹಿರಿಯ ಪತ್ರಕರ್ತೆಯರನ್ನು ಆಯ್ಕೆ ಮಾಡಿದೆ. ʼಸಿದ್ದರಾಮಯ್ಯ ಪ್ರಶಸ್ತಿʼ ಪ್ರದಾನ ಸಮಾರಂಭ ನವೆಂಬರ್‌ 28ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ʼಕೊಂಡಜ್ಜಿ ಬಸಪ್ಪʼ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪರಿಚಯ

ಸುಶೀಲಾ ಸುಬ್ರಹ್ಮಣ್ಯ

91 ವರ್ಷದ ಹಿರಿಯ ಪತ್ರಕರ್ತೆಯಾಗಿರುವ ಸುಶೀಲಾ ಸುಬ್ರಹ್ಮಣ್ಯ ಅವರು ಸುಮಾರು 40 ವರ್ಷಗಳಿಂದ ʼಸದರ್ನ್‌ ಎಕನಾಮಿಸ್ಟ್‌ʼ ಎಂಬ ಆರ್ಥಿಕ ವಿಚಾರ, ವಿಶ್ಲೇಷಣೆಗಳನ್ನು ಒಳಗೊಂಡ ಇಂಗ್ಲಿಷ್‌ ಪಾಕ್ಷಿಕವನ್ನು ಹೊರತರುತ್ತಿದ್ದಾರೆ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಸುಶೀಲಾ ಅವರು ತಮ್ಮ ಪತಿ ಕೆ.ಎನ್‌. ಸುಬ್ರಹ್ಮಣ್ಯ ಅವರು 60ರ ದಶಕದಲ್ಲಿ ಆರಂಭಿಸಿದ ʼಸದರ್ನ್‌ ಎಕನಾಮಿಸ್ಟ್‌ʼ ಪತ್ರಿಕೆಯನ್ನು ಪತಿಯ ಮರಣದ ನಂತರವೂ 41 ವರ್ಷಗಳಿಂದ ಏಕಾಂಗಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಹಿರಿಯ ಅರ್ಥಶಾಸ್ತ್ರಜ್ಞರಾದ ಸಿ. ರಂಗರಾಜನ್‌, ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯಾ ತರಹದ ಗಣ್ಯರು ಈ ಪತ್ರಿಕೆಗೆ ಲೇಖನಗಳನ್ನು, ಅಂಕಣಗಳನ್ನು ಬರೆದಿದ್ದಾರೆ. ಈ ಪತ್ರಿಕೆ ದೇಶದಾದ್ಯಂತ ಚಂದಾದಾರರನ್ನು ಹೊಂದಿದ್ದು, ಅರ್ಥಶಾಸ್ತ್ರಜ್ಞರ, ವಿಶ್ಲೇಷಕರ, ಶಿಕ್ಷಕರ, ವಿದ್ಯಾರ್ಥಿಗಳ ಮೆಚ್ಚುಗೆ ಪಡೆದಿದೆ. ಬ್ಯಾಂಕಿಂಗ್‌, ಕೈಗಾರಿಕೆ, ಹಣಕಾಸು ವಿಚಾರ, ಯೋಜನೆ, ವಿದೇಶಿ ವ್ಯವಹಾರ, ಸ್ಟಾಕ್‌ ಮಾರ್ಕೆಟ್‌ ಇತ್ಯಾದಿಗಳ ಬಗ್ಗೆ ʼಸದರ್ನ್‌ ಎಕನಾಮಿಸ್ಟ್‌ʼ ನಲ್ಲಿ ಲೇಖನಗಳು ಪ್ರಕಟವಾಗುತ್ತವೆ. ಪತ್ರಿಕೆಯ ಹೊರತಾಗಿ ಅಧ್ಯಯನ ಕೇಂದ್ರವೊಂದನ್ನು ಸುಶೀಲಾ ಅವರು ಸ್ಥಾಪಿಸಿದ್ದು, ಪುಸ್ತಕ ಪ್ರಕಟಣೆಯಲ್ಲೂ ತೊಡಗಿಕೊಂಡಿದ್ದಾರೆ.

ನೀಳಾ ಎಂ.ಎಚ್‌.

ಮೂಲತಃ ಮೈಸೂರಿನವರಾದ ನೀಳಾ ಎಂ.ಎಚ್‌. (51 ವರ್ಷ) ಅವರು ʻಪ್ರಜಾವಾಣಿʼ ಪತ್ರಿಕೆಯಲ್ಲಿ 28 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಮುಖ್ಯ ಉಪಸಂಪಾದಕಿಯಾಗಿದ್ದು, ‘ಭೂಮಿಕಾʼ ಮತ್ತು ‘ಶಿಕ್ಷಣ’ ಪುರವಣಿಗಳನ್ನು ನಿರ್ವಹಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ʼಮಹಾನಂದಿʼ ಪತ್ರಿಕೆಯ ಮೂಲಕ ಪತ್ರಕರ್ತೆಯಾಗಿ ಮೊದಲ ಹೆಜ್ಜೆ ಇಟ್ಟರು. 1997ರಲ್ಲಿ ʼಪ್ರಜಾವಾಣಿʼ ಬಳಗಕ್ಕೆ ಸೇರ್ಪಡೆಯಾದ ಇವರು ಬೆಂಗಳೂರು ಕಚೇರಿಯಲ್ಲಿ ಜನರಲ್‌ ಡೆಸ್ಕ್‌, ಗ್ರಾಮಾಂತರ ವಿಭಾಗ, ರಿಪೋರ್ಟಿಂಗ್‌, ‘ಸುಧಾ’ ವಾರಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದರು. 2001ರಲ್ಲಿ ಜಿಲ್ಲಾ ವರದಿಗಾರ್ತಿಯಾಗಿ ಚಿಕ್ಕಮಗಳೂರಿಗೆ ವರ್ಗಾವಣೆ. ಬಾಬಾಬುಡನ್‌ಗಿರಿ ವಿವಾದ, ನಕ್ಸಲಿಸಂ, ಒತ್ತುವರಿ ಸಮಸ್ಯೆ, ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ವಿರುದ್ಧದ ಪ್ರತಿಭಟನೆ ಎಲ್ಲವೂ ಉತ್ತುಂಗದಲ್ಲಿದ್ದ ಕಾಲಘಟ್ಟದಲ್ಲಿ ಕೆಲಸ ನಿರ್ವಹಿಸಿದ ಅನುಭವ ಇದೆ. ಪಶ್ಚಿಮಘಟ್ಟದಲ್ಲಿ ನಕ್ಸಲೀಯ ಚಟುವಟಿಕೆ ಇರುವುದು ಬೆಳಕಿಗೆ ಬಂದು, ಅದರ ಬೆನ್ನಲ್ಲೇ ನಡೆದ ನಕ್ಸಲೀಯರ ಎನ್‌ಕೌಂಟರ್‌ಗಳು, ಅದಕ್ಕೆ ಪ್ರತಿಯಾಗಿ ಪೊಲೀಸರ ಹತ್ಯೆಗಳು ಆರಂಭವಾದಾಗ, ಅವುಗಳಿಗೆ ಸಂಬಂಧಿಸಿದ ವರದಿಗಳು, ವಿಶೇಷ ವರದಿಗಳು ಪ್ರಕಟವಾಗಿವೆ. 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕುದುರೆಮುಖ ಕಬ್ಬಿಣ ಅದಿರು ಕಂಪನಿಯನ್ನು (ಕೆಐಒಸಿಎಲ್‌) ಮುಚ್ಚಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದಾಗ, ಅದಕ್ಕೆ ಸಂಬಂಧಿಸಿದಂತೆ ಸರಣಿ ವಿಶೇಷ ವರದಿಗಳು ಪ್ರಕಟವಾಗಿವೆ.

ಏಳು ವರ್ಷಗಳ ನಂತರ ಬೆಂಗಳೂರು ಕಚೇರಿಗೆ ವರ್ಗವಾದ ಬಳಿಕ ಜನರಲ್‌ ಡೆಸ್ಕ್‌ನಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಸುದ್ದಿಗಳ ಸಂಪಾದನೆ, ಅನುವಾದ ಮತ್ತು ಪಾಳಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ ಹೆಗ್ಗಳಿಕೆ. ಸತತ ಆರು ವರ್ಷಗಳ ಕಾಲ ‘ಪ್ರಜಾವಾಣಿ’ಯ ಸಂಪಾದಕೀಯ ಪುಟದ ನಿರ್ವಹಣೆಯಲ್ಲೂ ಕೈಜೋಡಿಸಿದ ಅನುಭವ ಹೊಂದಿದ್ದಾರೆ. ಇದಲ್ಲದೇ ಛತ್ತೀಸ್‌ಗಢದ ಕಾಡಿನಲ್ಲಿನ ನಕ್ಸಲೀಯರ ಚಲನವಲನಗಳಿಗೆ ಸಂಬಂಧಿಸಿದಂತೆ ಇಂಗ್ಲಿಷ್‌ ನಿಯತಕಾಲಿಕದಲ್ಲಿ ಪ್ರಕಟವಾದ, ಸಾಹಿತಿ ಅರುಂಧತಿ ರಾಯ್‌ ಅವರ ಲೇಖನದ ಕನ್ನಡಾನುವಾದ ಮಾಡಿದ್ದು, ಈ ಸರಣಿ ಲೇಖನಗಳು ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ. ಕೆಎಂಎಫ್‌ ಅಕ್ರಮಗಳ ಕುರಿತು 11 ದಿನಗಳ ಸರಣಿ ಲೇಖನ ಮುಖಪುಟದಲ್ಲಿಯೇ ಪ್ರಕಟವಾಗಿ ಗಮನಸೆಳೆದಿದೆ. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ, ಸಂಪಾದಕೀಯ ಪುಟ, ʼಭೂಮಿಕಾʼ ಪುರವಣಿ ಮತ್ತು ʻಸುಧಾʼ ವಾರಪತ್ರಿಕೆಯಲ್ಲಿ ಹಲವಾರು ಲೇಖನಗಳು ಪ್ರಕಟಗೊಂಡಿವೆ.

ಇದನ್ನೂ ಓದಿ: Kannada Rajyotsava award 2025: ಪ್ರಕಾಶ್‌ ರಾಜ್‌ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ; ಪ್ರಶಸ್ತಿಗೆ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮ ಎಂದ ಸಿಎಂ