Chikkaballapur News: ನೀರಾವರಿ ಭೂಮಿ ಹೊರತುಪಡಿಸಿ ಉಳಿದ ಭೂಮಿ ಪಡೆಯಲು ಕೆಐಎಡಿಬಿ ಅಂತಿಮ ಅಧಿಸೂಚನೆ ಹೊರಡಿಸಬೇಕು : ಭಕ್ತರಹಳ್ಳಿ ಪ್ರತೀಶ್ ಆಗ್ರಹ
ಸರ್ಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ಜಂಗಮಕೋಟೆ ಹೋಬಳಿಯ ೨೮೫೩ ಭೂಸ್ವಾಧಿನ ಪ್ರಕ್ರಿಯೆಯ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಪೈಕಿ ೧೧೧೫ ಎಕೆರೆ ಭೂಮಿ ಯನ್ನು ರೈತರ ಮಕ್ಕಳ ಭವಿಷ್ಯ ಹಾಗೂ ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಬಹುತೇಕರು ಜಮೀನು ನೀಡಲು ಮುಂದೆ ಬಂದಿದ್ದಾರೆ.
-
ಚಿಕ್ಕಬಳ್ಳಾಪುರ : ಜಂಗಮಕೋಟೆ ಭಾಗದಲ್ಲಿ ನೀರಾವರಿ ಭೂಮಿಯನ್ನು ಹೊರತುಪಡಿಸಿ, ಇತರೆ ಭೂಸ್ವಾದೀನ ಪ್ರಕ್ರಿಯೆ ತ್ವರಿತವಾಗಿ ನಡೆಸುವುದು ಸೇರಿ ಇತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನ.೨೩ ರಂದು ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಂಗಮಕೋಟೆ ಹೋಬಳಿಯ ಜಮೀನುಗಳ ರೈತಪರ ಹೋರಾಟ ಸಮಿತಿಯ ಭಕ್ತರಹಳ್ಳಿ ಪ್ರತೀಶ್ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಜಂಗಮಕೋಟೆ ಹೋಬಳಿ ಕೆಐಎಡಿಬಿ ಜಮೀನು ಗಳ ರೈತರ ಪರ ಹೋರಾಟ ಸಮಿತಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ದರು.
ಸರ್ಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ಜಂಗಮಕೋಟೆ ಹೋಬಳಿಯ ೨೮೫೩ ಭೂಸ್ವಾಧಿನ ಪ್ರಕ್ರಿಯೆಯ ಕುರಿತು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಪೈಕಿ ೧೧೧೫ ಎಕೆರೆ ಭೂಮಿಯನ್ನು ರೈತರ ಮಕ್ಕಳ ಭವಿಷ್ಯ ಹಾಗೂ ತಾಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಬಹುತೇಕರು ಜಮೀನು ನೀಡಲು ಮುಂದೆ ಬಂದಿದ್ದಾರೆ. ಆದರೆ ರೈತರ ಪಹಣಿಯಲ್ಲಿ ಕೆಐಎಡಿಬಿ ಎಂದು ನಮೂದು ಆಗಿರುವುದರಿಂದ ರೈತರಿಗೆ ಬೆಳೆ ಸಾಲ ಸೇರಿ ಯಾವುದೇ ಸವಲತ್ತು ಪಡೆಯಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಫಲವತ್ತಾದ ನೀರಾವರಿ ಭೂಮಿಯನ್ನು ಹೊರತುಪಡಿಸಿ ಉಳಿದ ಭೂಮಿಯ ಸ್ವಾಧೀನ ಪ್ರಕ್ರಿಯೆಗಾಗಿ ಅಂತಿಮ ಅಧಿಸೂಚನೆ ಹೊರಡಿಸಿ ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: Chikkaballapur: ಅಡ್ಡಾದಿಡ್ಡಿ ಡ್ರೈವಿಂಗ್ ಪ್ರಶ್ನಿಸಿದ್ದಕ್ಕೆ ಬೈಕ್ ಸವಾರನಿಗೆ ಚೂರಿಯಿಂದ ಇರಿದ ಲೇಡಿ ಟೆಕ್ಕಿ
ಭೂಮಿ ಕೊಡಲು ಒಪ್ಪಿರುವ ರೈತರಿಗೆ ಕನಿಷ್ಟ ಪ್ರತಿ ಎಕರೆಗೆ ೨ ಕೋಟಿ ಭೂ ಪರಿಹಾರ ನೀಡಬೇಕು. ಭೂಮಿ ನೀಡುವ ಪ್ರತಿ ರೈತನ ಕುಟುಂಬದಲ್ಲಿ ಒಬ್ಬರಿಗೆ ಖಾಯಂ ಉದ್ಯೋಗ ನೀಡಬೇಕು. ರೈತರಿಗೆ ಮೋಸ ಮಾಡಿ ೫೨೫ ಎಕೆರೆ ಭೂಮಿಯನ್ನು ಪಿಎಸ್‌ಎಲ್ ಕಂಪನಿಯ ಪರಭಾರೆ ಮಾಡಿದೆ.ಇದೇ ವಿಚಾರದಲ್ಲಿ ಈ ಪ್ರಕರಣ ಸುಪ್ರಿಂಕೋರ್ಟಿನಲ್ಲಿದೆ.
ಈ ಸಮಸ್ಯೆಯನ್ನು ಬಗೆಹರಿಸಿ ಮೂಲ ರೈತರಿಗೆ ಪರಿಹಾರ ಖಾತೆ ಮಾಡಿಕೊಡಲು ಸರಕಾರವೇ ವಕೀಲರನ್ನಿಟ್ಟು ಸಹಾಯ ಮಾಡಬೇಕು.ಈ ಭೂಮಿಗೆ ಸಂಬಂಧಪಟ್ಟಂತೆ ಸರಕಾರ ಪರಿಹಾರ ನೀಡುವಾಗ ಪಿಎಸ್‌ಎಲ್ ಕಂಪನಿಗೆ ಕೊಡಬಾರದು, ಮೂಲರೈತರಿಗೆ ನೀಡಬೇಕು. ಇನ್ನು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲು ೧೦ ದಿನ ಮೊದಲೇ ಅನುಮತಿ ಪಡೆಯಬೇಕೆಂಬ ಆದೇಶವನ್ನು ಕೂಡಲೇ ಹಿಂಪಡೆಯಬೇಕೆAದು ಒತ್ತಾಯಿಸಿದರು.
ಮುಖಂಡ ಆಂಜಿನಪ್ಪ ಮಾತನಾಡಿ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆಗಳು ಬರದಂತೆ ತಡೆಯಲು ರಿಯಲ್ ಎಸ್ಟೇಟ್ ಕುಳಗಳು, ದಲ್ಲಾಳಿಗಳು ಹುನ್ನಾರ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿಹೆಚ್ಚು ಲೇಔಟ್ ಸ್ಥಾಪನೆಯಾಗಿರುವ ಹೋಬಳಿ ಎಂದರೆ ಅದು ಜಂಗಮ ಕೋಟೆ ಮಾತ್ರವಾಗಿದೆ.ರೈತರ ಮಕ್ಕಳಿಗೆ ಉದ್ಯೋಗ ನೀಡಲು ನೆರವಾಗುವ ಕೈಗಾರಿಕೆ ಸ್ಥಾಪಿಸಲು ಮುಂದಾಗಿರುವ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಕ್ರಮ ಶ್ಲಾಘನೀಯ. ಕೆಐಎಡಿಬಿ ಈ ಕೂಡಲೇ ಫೈನಲ್ ನೋಟಿಫಿಕೇಷನ್ ಮಾಡಿ ಭೂಮಿ ಕೊಡುವ ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ರೈತಸಂಘದ ಮುಖಂಡರಾದ ಮುನೇಗೌಡ, ಪ್ರದೀಪ್, ಕದಿರೇಗೌಡ, ಚನ್ನಪ್ಪ, ಸುಬ್ರಮಣಿ, ಆಂಜನಪ್ಪ, ನಾಗವೇಣಿ ಇದ್ದರು.