ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

S.L. Bhyrappa: ಎಸ್‌.ಎಲ್‌.ಭೈರಪ್ಪ ʻವಿಶ್ವವಾಣಿʼಗೆ ಕೊಟ್ಟ ಕೊನೆಯ ಸಂದರ್ಶನ ಇಲ್ಲಿದೆ

ಭೈರಪ್ಪನವರು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ಕಟ್ಟೆಗಳಿಗೆ ಸರ್ಕಾರದ ವತಿಯಿಂದ ಏತ ನೀರಾವರಿ ಯೋಜನೆಯಡಿ ನೀರು ಪೂರೈಕೆಗೆ ಶ್ರಮ ವಹಿಸಿದ್ದಾರೆ. ಯೋಜನೆ ಸಫಲಗೊಂಡು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಕಟ್ಟೆಗಳಿಗೆ ನೀರು ಪೂರೈಕೆಯಾಗಿದೆ.

ಎಸ್‌.ಎಲ್‌.ಭೈರಪ್ಪ ವಿಶ್ವವಾಣಿಗೆ ಕೊಟ್ಟ ಕೊನೆಯ ಸಂದರ್ಶನ

-

ಹರೀಶ್‌ ಕೇರ ಹರೀಶ್‌ ಕೇರ Sep 24, 2025 4:02 PM

ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಇಂದು ಕಳಚಿ ಬಿದ್ದಿದೆ. ಕನ್ನಡದ ಹಿರಿಯ ಕಾದಂಬರಿಕಾರ, ಸರಸ್ವತಿ ಸಮ್ಮಾನ್‌, ಪದ್ಮಭೂಷಣ ಪುರಸ್ಕೃತ ಎಸ್‌ಎಲ್‌ ಭೈರಪ್ಪನವರು ಇಂದು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಕೊನೆಯದಾಗಿ ಭೈರಪ್ಪನವರು ವಿಶ್ವವಾಣಿ ಟಿವಿಗೆ ಸಂದರ್ಶನ ನೀಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಭೈರಪ್ಪನವರು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ಕಟ್ಟೆಗಳಿಗೆ ಸರ್ಕಾರದ ವತಿಯಿಂದ ಏತ ನೀರಾವರಿ ಯೋಜನೆಯಡಿ ನೀರು ಪೂರೈಕೆಗೆ ಶ್ರಮ ವಹಿಸಿದ್ದಾರೆ. ಯೋಜನೆ ಸಫಲಗೊಂಡು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಕಟ್ಟೆಗಳಿಗೆ ನೀರು ಪೂರೈಕೆಯಾಗಿದೆ. ಸುತ್ತಲ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಿಂದಾಗಿ ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡು ರೈತ ಸಮುದಾಯಕ್ಕೆ ಖುಷಿ ನೆಮ್ಮದಿ ದೊರೆತಿದೆ. ಇದರಿಂದ ಹರ್ಷಗೊಂಡ ಊರಿನ ಜನ ಮಾ.9ರಂದು ಹುಟ್ಟೂರು ಸಂತೇಶಿವರದಲ್ಲಿ ಭೈರಪ್ಪನವರನ್ನು ಗೌರವಿಸಿದ್ದರು. ಈ ಹಿನ್ನೆಲೆಯಲ್ಲಿ ಭೈರಪ್ಪ ಅವರನ್ನು ʼವಿಶ್ವವಾಣಿʼ ಸಂದರ್ಶಿಸಿತ್ತು. ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.

ಸಂದರ್ಶನಕಾರ: ಭಾನುವಾರ ನಿಮ್ಮ ಹುಟ್ಟೂರಿನವರು ನಿಮಗೊಂದು ಕೃತಜ್ಞತಾ ಸಮರ್ಪಣೆ ಹಾಗೂ ಅಭಿನಂದನಾ ಸಮಾರಂಭ ಇಟ್ಟುಕೊಂಡಿದ್ದಾರೆ. ಹುಟ್ಟೂರಿನ ಕುರಿತ ನಿಮ್ಮ ಗಾಢವಾದ ನೆನಪುಗಳನ್ನು ನಿಮ್ಮ ಆತ್ಮಕತೆ ʼಭಿತ್ತಿʼಯಲ್ಲೂ ಕಟ್ಟಿಕೊಟ್ಟಿದ್ದೀರಿ. ಹಿಂದಿರುಗಿ ನೋಡಿದರೆ ಏನನಿಸುತ್ತದೆ?

ಭೈರಪ್ಪ: ಹುಟ್ಟೂರು ಅಂದರೆ ಎಲ್ಲರಿಗೂ ಪ್ರೀತಿಯೇ. ಆದರೆ ನನಗೆ ಸಂತೇಶಿವರದ ಬದುಕು ಸುಖಕರವಾಗೇನೂ ಇರಲಿಲ್ಲ. ಅದು ಸಂಕಟವಾಗಿಯೇ ಇತ್ತು. ಕಾರಣ ಮನೆಯಲ್ಲಿದ್ದ ಬಡತ, ಎಷ್ಟೋ ದಿವಸ ಒಂದಿಷ್ಟು ಊಟ ಮಾಡುವುದಕ್ಕೆ ರಾಗಿ ಕೂಡ ಇರುತ್ತಿರಲಿಲ್ಲ. ಅದಕ್ಕೆ ಕಾರಣ ನನ್ನ ಅಜ್ಜಿ ಮತ್ತು ತಂದೆ. ಚಿಕ್ಕಂದಿನಲ್ಲಿ ನಾನು ಸಾಹಸಿಯಾಗಿದ್ದೆ. ಮುಖ್ಯವಾಗಿ ಈಜು. ನನ್ನಮ್ಮನಿಗೆ ಅದರ ಬಗ್ಗೆ ಹೆದರಿಕೆ ಇತ್ತು. ಈಜಕೂಡದು ಎನ್ನುತ್ತಿದ್ದರು. ಆದರೆ ನಾನು ಕೇಳುತ್ತಿರಲಿಲ್ಲ. ಆಮೇಲೆ ನಾಟಕಗಳು ಆಗ ಬಹಳ. ಗುಬ್ಬಿ ವೀರಣ್ಣನವರ ಕಂಪನಿಯ ಪ್ರದರ್ಶನಗಳು ಆಗುತ್ತಿದ್ದವು. ನಾಟಕದ ಹಾಡುಗಳು ಬಾಯಿಪಾಠ ಬರುತ್ತಿದ್ದವು. ಮನೆಯಲ್ಲಿ ತಾಯಿಗೆ ಹೇಳದೆ ನಾಟಕ ಕಂಪನಿ ಹಿಂದೆ ಹೊರಟುಬಿಡುತ್ತಿದ್ದೆ. ಒಮ್ಮೆ ಹೀಗೆ ಬೇರೆ ಹಳ್ಳಿಗೆ ಹೋಗಿ ರಾತ್ರಿಯಿಡೀ ಅಲ್ಲಿದ್ದು ಮರುದಿನ ಮಧ್ಯಾಹ್ನ ಮನೆಗೆ ಬಂದೆ. ಅಷ್ಟರಲ್ಲಾಗಲೇ ಮನೆಯಲ್ಲಿ ತಾಯಿ ಭಯದಿಂದ ಊರೆಲ್ಲಾ ನನ್ನನ್ನು ಹುಡುಕಿಸಿ, ಕೆರೆಯಲ್ಲೂ ಹುಡುಕಿಸಿದ್ದರು.

ಸಂದರ್ಶನಕಾರ: ನಿಮ್ಮ ಮಾವನ ಜೊತೆಗೆ ನೀವಿದ್ದ ದಿನಗಳು ಇನ್ನಷ್ಟು ಯಾತನಾದಾಯಕವಾಗಿದ್ದವು?

ಭೈರಪ್ಪ: ನಮ್ಮ ತಂದೆ ಲಿಂಗಣ್ಣಯ್ಯ ಅಂತ. ನಮ್ಮ ಕುಟುಂಬಕ್ಕೆ ಶಾನುಭೋಗಿಕೆ ಇತ್ತು. ಆದರೆ ನಮ್ಮ ತಂದೆಯ ಬೇಜವಾಬ್ದಾರಿಯಿಂದಾಗಿ ಅದನ್ನೆಲ್ಲಾ ಕಳೆದುಕೊಂಡಿದ್ದರು. ನನ್ನನ್ನು ನನ್ನ ತಾಯಿ ಅವಳ ಅಣ್ಣನ ಹತ್ತಿರ ಕಳಿಸಿದರು. ಮಾವ ಗುಡ್ಡಪ್ಪ ಅಂತ, ಒಂದು ದೇವಸ್ಥಾನದಲ್ಲಿ ಪೂಜೆ, ಶಾಸ್ತ್ರ ಹೇಳೋದು ಎಲ್ಲ ಮಾಡುತ್ತಿದ್ದ. ಒಂದು ಪಲ್ಲ ರಾಗಿ, ಹುರುಳಿಕಾಳು, ಹರಳೆಣ್ಣೆ ಹೊರಿಸಿ ತಾಯಿ ನನ್ನನ್ನು ಅಲ್ಲಿಗೆ ಕಳಿಸಿದರು. ಎರಡು ವರ್ಷ ಇಟ್ಟುಕೊಂಡು ಲೋಯರ್‌ ಸೆಕೆಂಡರಿ ಓದಿಸು ಅಂತ ಹೇಳಿದರು. ತಾಯಿ ಇರುವಾಗ ಬಹಳ ಪ್ರೀತಿಯಿಂದ ನೋಡಿಕೊಂಡ. ಮರುದಿನ ಮುಂಜಾನೆಯಿಂದಲೇ ಆತನ ಶಿಕ್ಷೆ ಶುರುವಾಯಿತು. ಆತ ನನ್ನ ಜುಟ್ಟು ಬಗ್ಗಿಸಿ ಹೊಡೆಯುತ್ತಿದ್ದ. ಇನ್ನೂ ಕತ್ತಲಿರುವಾಗಲೇ ಎದ್ದು ದನದ ಕೊಟ್ಟಿಗೆ ಕೆಲಸ ಮಾಡುತ್ತಿದ್ದೆ. ಇಷ್ಟೆಲ್ಲ ಮಾಡಿದರೂ ಮಾವನಿಂದ ಹೊಡೆತ ಅಂದ್ರೆ ಹೊಡೆತ. ಸುತ್ತಲಿನ ಮನೆಗಳಲ್ಲಿ ಧಾನ್ಯ ಕದಿಯುತ್ತಿದ್ದ. ನನಗೂ ಕದಿಯಲು ಪ್ರೇರೇಪಿಸುತ್ತಿದ್ದ. ನಾನು ಕದಿಯುತ್ತಿರಲಿಲ್ಲ. ಹೊಡೆಯುತ್ತಿದ್ದ.

ಸಂದರ್ಶನಕಾರ: ಪ್ಲೇಗ್‌ನ ದಾರುಣತೆ ನಿಮ್ಮ ಜೀವನದ ಘಟನೆಗಳಲ್ಲಿ ಹಾಸುಹೊಕ್ಕಾಗಿದೆ...

ಭೈರಪ್ಪ: ಆಗೆಲ್ಲ ಪ್ಲೇಗ್‌ ಸಾಕಷ್ಟು ಇತ್ತು. ಒಂದ್ಸಲ ನನ್ನ ಅಕ್ಕ, ಅಣ್ಣ, ನಾನು ಮೂವರಿಗೂ ಪ್ಲೇಗ್‌ ಬಂತು. ಒಂದೇ ದಿನ ಅಣ್ಣ ಮತ್ತು ಅಕ್ಕ ಇಬ್ಬರೂ ಸತ್ತುಹೋದರು. ನನಗೆ ಜೋರು ಕಾಯಿಲೆ. ನನ್ನಮ್ಮ ನನ್ನನ್ನು ಎತ್ತಿಕೊಂಡು ಹೋಗಿ ರಂಗಮ್ಮ ಎಂಬವರಿದ್ದರು, ಅವರ ಮಡಿಲಿನಲ್ಲಿ ಹಾಕಿ, ಈ ಮಗು ನನ್ನದಲ್ಲ, ನಿನ್ನ ಅದೃಷ್ಟ ಚೆನ್ನಾಗಿದ್ದರೆ ಬದುಕಿಕೊಳ್ಳಲಿ ಎಂದು ಅವರ ಮಡಿಲಿಗೆ ಹಾಕಿಬಿಟ್ಟರು. ನಾನು ಹೇಗೋ ಬದುಕಿದೆ. ಆಮೇಲೆ ನಾನು ಮಾವನ ಜತೆಗಿದ್ದಾಗ, ಪ್ಲೇಗ್‌ನಿಂದ ತಾಯಿ ತೀರಿಹೋಗಿಬಿಟ್ಟರು. ಅಪ್ಪ ಯಾವ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತಿರಲಿಲ್ಲ. ನಾನೇ ಊರಿಗೆ ಹೋಗಿ ತಾಯಿಯ ಅಂತ್ಯಕ್ರಿಯೆ ಮುಗಿಸಿ ಬಂದೆ. ಅದರ ಮರುದಿನವೂ ಬೆಳಗ್ಗೆ ಬೇಗ ಎದ್ದು ದದು ಸಗಣಿ ಬಾಚಲಿಲ್ಲ ಎಂದು ಮಾವ ಹೊಡೆದ. ನನ್ನ ತಮ್ಮ ಪ್ಲೇಗ್‌ನಿಂದ ತೀರಿಕೊಂಡಾಗ ನನಗೆ ಹದಿನಾರು ವರ್ಷ. ಅಂತ್ಯಸಂಸ್ಕಾರಕ್ಕೆ ಯಾರೂ ಬರಲಿಲ್ಲ. ಯಾಕೆಂದರೆ ಕುಟುಂಬದ ಬಡತನ, ದಾರಿದ್ರ್ಯ, ಅಪ್ಪನ ಬೇಜವಾಬ್ದಾರಿತನ, ಮೈತುಂಬ ಮಾಡಿಕೊಂಡ ಸಾಲ. ಆರು ವರ್ಷದ ಮಗುವಿನ ಹೆಣ ಹೆಗಲ ಮೇಲೆ ಹಾಕಿಕೊಂಡು ಹೋಗಿ ನಾನೇ ಸುಟ್ಟುಹಾಕಿದೆ.

ಸಂದರ್ಶನಕಾರ: ತತ್ವಶಾಸ್ತ್ರ ಹಾಗೂ ಕಾದಂಬರಿ ಸೃಷ್ಟಿ ಎರಡೂ ನಿಮ್ಮಲ್ಲಿ ಹಾಸುಹೊಕ್ಕಾಗಿವೆ. ಅದು ಹೇಗೆ?

ಭೈರಪ್ಪ: ನನಗೆ ಮೊದಲಿನಿಂದಲೂ ಬದುಕಿನಲ್ಲಿ ಸಾವುಗಳು, ಪ್ಲೇಗು ಇದನ್ನೆಲ್ಲ ನೋಡಿ ನೋಡಿ ಇದೆಲ್ಲ ಯಾಕೆ ಹೀಗೆ ಎಂಬ ಪ್ರಶ್ನೆ ಮೂಡುತ್ತಿತ್ತು. ಮನುಷ್ಯರು ಯಾಕೆ ಸಾಯ್ತಾರೆ ಎಂಬ ಪ್ರಶ್ನೆ ಮೂಡಿತ್ತು. ಯಾಮುನಾಚಾರ್ಯರು ಅಂತ ಫಿಲಾಸಫಿ ಪ್ರೊಫೆಸರ್‌ ಇದ್ದರು. ಅವರ ಬಳಿ ಹೋಗಿ ಕೇಳಿದೆ. ಆಗ ನಾನಿನ್ನೂ ಮಿಡ್ಲ್‌ಸ್ಕೂಲ್‌ ಹುಡುಗ. ಅವರು ʼಕಠೋಪನಿಷತ್ತಿನಲ್ಲಿ ಇದಕ್ಕೆ ಉತ್ತರವಿದೆ, ಓದುʼ ಅಂತ ಹೇಳಿದರು. ಓದಿದೆ. ನಚಿಕೇತನ ಕಥೆ, ಕಥೆ ಚೆನ್ನಾಗಿತ್ತು. ಆದರೆ ಅರ್ಥವಾಗಲಿಲ್ಲ. ಮತ್ತೆ ಅವರ ಬಳಿಗೆ ಹೋದೆ. ಫಿಸಾಸಫಿಯನ್ನು ಕ್ರಮಬದ್ಧವಾಗಿ ಓದಿದರೆ ಮಾತ್ರ ಲಾಭ, ಹೈಸ್ಕೂಲ್‌ ಮುಗಿದ ಮೇಲೆ ಓದು ಎಂದರು. ಆಗ ಮಹಾರಾಜ ಕಾಲೇಜಿನಲ್ಲಿ ಮೂರು ವರ್ಷ ಫಿಲಾಸಫಿ ಆನರ್ಸ್‌ ಇತ್ತು, ಓದಿದೆ. ಎಂಎಯಲ್ಲಿ ಫಸ್ಟ್‌ ಕ್ಲಾಸ್‌ ಬಂದೆ. ಹುಬ್ಬಳ್ಳಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಬಳಿಕ ಅಲ್ಲಿದ್ದ ಡೈರಿ ಎಲ್ಲಾ ನೋಡಿದೆ. ನಮ್ಮೂರಲ್ಲೂ ಹೈನುಗಾರಿಕೆಯ ಅನುಭವ ಇತ್ತಲ್ಲ. ಅದರ ಮೇಲೆ ʼತಬ್ಬಲಿಯು ನೀನಾದೆʼ ಮಗನೆ ಬರೆದೆ. ಅದಕ್ಕೂ ಮೊದಲೇ ʼಗತಜನ್ಮʼ ಅಂತ ಒಂದೆರಡು ಕತೆಗಳನ್ನು ಬರೆದಿದ್ದೆ. ಅಲ್ಲೇ ನನ್ನ ಸತ್ಯ ಮತ್ತು ಸೌಂದರ್ಯ ಪಿಎಚ್‌ಡಿ ಥೀಸಿಸ್‌ ಕೂಡ ಬರೆದೆ. ಅದಕ್ಕೆ ಎರಡುವರೆ ವರ್ಷ ಕಳೆದೆ. ಅದನ್ನೇ ಇನ್ನಷ್ಟು ಮುಂದುವರಿಸಿ ರಾಧಾಕೃಷ್ಣನ್‌ ಹಾಗೆ ಫಿಸಾಸಫಿ ಪ್ರೊಫೆಸರ್‌ ಆಗಬೇಕು ಎಂದು ಹಿರಿಯರು ಪ್ರೋತ್ಸಾಹಿಸಿದರು. ಆದರೆ ಅಷ್ಟರಲ್ಲಿ ನಾನು ಹುಬ್ಬಳ್ಳಿಯ ಪ್ರಕಾಶಕ ಗೋವಿಂದರಾಯರಿಗೆ ಕೊಟ್ಟಿದ್ದ ʼವಂಶವೃಕ್ಷʼ ಕಾದಂಬರಿಯನ್ನು ತಿದ್ದಕೊಡಿ ಎಂದು ಅವರು ಬೆನ್ನು ಬಿದ್ದಿದ್ದರು. ಅಷ್ಟರಲ್ಲಾಗಲೇ ನನ್ನ ಭೀಮಕಾಯ ಮತ್ತು ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳು ಹೆಸರು ತಂದುಕೊಟ್ಟಿದ್ದವು. ಮುಂದಿನ ಕಾದಂಬರಿಗೆ ಜನ ಕಾಯುತ್ತಿದ್ದರು. ವಂಶವೃಕ್ಷ ತಿದ್ದಿ ಬರೆಯುವಾಗ, ನನ್ನ ದಾರಿ ಸಾಹಿತ್ಯವೇ ಹೊರತು ತತ್ವಶಾಸ್ತ್ರವಲ್ಲ ಎಂದು ನನಗೆ ಮನದಟ್ಟಾಯಿತು.

ಕ್ರಿಯೇಟಿವಿಟಿ ನನಗೆ ತಾಯಿಯಿಂದ ಬಂದದ್ದು. ತಾಯಿ ರಾಗಿ ಬೀಸುವಾಗ ಕುಮಾರವ್ಯಾಸ ಭಾರತದ ಕತೆಗಳನ್ನು ಹೇಳುತ್ತಿದ್ದರು. ನೀನು ಇದನ್ನೆಲ್ಲ ಬರೀಬೇಕು ಕಣೋ ಎನ್ನುತ್ತಿದ್ದರು. ಹಾಗೆ ಕೇಳಿಸಿಕೊಂಡ ಮಹಾಭಾರತದ ಭೀಮ, ದ್ರೌಪದಿ, ಕೃಷ್ಣ ಮುಂತಾದ ಪಾತ್ರಗಳಿಂದಲೇ ಪ್ರಭಾವಿತನಾಗಿ ಪರ್ವ ಬರೆದೆ. ಅದು ಲಕ್ಷಾಂತರ ಪ್ರತಿಗಳು ಖರ್ಚಾದವು. ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ರಷ್ಯನ್‌ಗೆ ಅನುವಾದ ಮಾಡಿಸಿದರು. ಆ ಬಳಿಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದೆ, ನೂರಾರು ಕಛೇರಿ ಕೇಳಿದೆ, ಅದರ ಬಗ್ಗೆ ಓದಿದೆ. ಅದರಿಂದ ಮಂದ್ರ ಬರೆದೆ. ಅದು ಚೀನೀ ಭಾಷೆಗೆ ಅನುವಾದವಾಗಿದೆ. ರಾಮಾಯಣದ ಬಗ್ಗೆ ಏನೂ ಬರೆದೇ ಇಲ್ಲವಲ್ಲಾ ಅನಿಸುತ್ತಿತ್ತು. ರಾಮನ ಬಗ್ಗೆ ತುಂಬಾ ಬರೆದಿದ್ದಾರೆ. ಆದರೆ ಸೀತೆಯ ದೃಷ್ಟಿಯಿಂದ ರಾಮಾಯಣವನ್ನು ಬರೆದರೆ ಹೇಗಿರುತ್ತದೆ ಎಂದು ಯೋಚಿಸಿದೆ. ಉತ್ತರಕಾಂಡ ಮೂಡಿದ್ದು ಹಾಗೆ.

ಸಂದರ್ಶನಕಾರ: ಹುಟ್ಟಿ ಬೆಳೆದ ಊರಿನಲ್ಲಿ ಕೃತಜ್ಞತಾ ಸಮರ್ಪಣೆ ನಡೆಯುವ ಹೊತ್ತಿನಲ್ಲಿ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತಿರುವ ಭಾವನೆಗಳೇನು?

ಭೈರಪ್ಪ: ರಾಮಾಯಣದಲ್ಲಿ ಒಂದು ಪ್ರಸಂಗವಿದೆ. ರಾವಣನ್ನು ಕೊಂದ ಬಳಿಕ, ಲಂಕೆ ಚೆನ್ನಾಗಿದೆ, ಇಲ್ಲೇ ಇರೋಣ ಎಂದು ಲಕ್ಷ್ಮಣ ಹೇಳುವಾಗ ರಾಮ ಹೇಳುತ್ತಾನೆ- ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ- ನನ್ನ ಜನ್ಮಭೂಮಿ ಅಯೋಧ್ಯೆಯೇ ನನಗೆ ಸ್ವರ್ಗಕ್ಕಿಂತ ಮಿಗಿಲು ಅಂತ. ಇಂಥ ಜನ್ಮಭೂಮಿಗಾಗಿ ಯಾವ ರೀತಿ ಸಹಾಯ ಮಾಡಬೇಕು ಅಂತ ಯೋಚನೆ ಮಾಡಿದೆ. ಅಲ್ಲೊಂದು ಶಾಲೆಯಿದೆ. ಅಲ್ಲಿ ಕಲಿಯುತ್ತಿರುವವರು ಸುತ್ತಮುತ್ತಲಿನ ಹಳ್ಳಿಯ ಮಕ್ಕಳು. ಸಂತೇಶಿವರದ ಲೈಬ್ರರಿಗೆ ಪುಸ್ತಕಗಳನ್ನು ಕೊಟ್ಟು ಶಾಲೆಯ ಮಕ್ಕಳಿಗೆ ಓದಿಸಲು ಮುಂದಾದೆವು. ಅದಕ್ಕಿಂತ ಮುಖ್ಯವಾದ್ದು ಅಲ್ಲಿನ ಕೆರೆಯ ಹೂಳು ತೆಗೆಸಿ ಏತ ನೀರಾವರಿ ನೀರು ಬರುವಂತೆ ಶ್ರಮವಹಿಸಿದೆವು. ನಲುವತ್ತು ವರ್ಷಗಳಿಂದ ಅದರ ಹೂಳು ತೆಗೆದೇ ಇರಲಿಲ್ಲ. ಅದಕ್ಕೆ ತುಂಬಾ ಪ್ರಯತ್ನ ಮಾಡಬೇಕಾಯಿತು. ಹಲವಾರು ವರ್ಷ ರಾಜಕಾರಣಿಗಳ ಹಿಂದೆ ಬೀಳಬೇಕಾಯಿತು. ಈ ಪ್ರಯತ್ನದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್‌ ನನಗೆ ತುಂಬಾ ಸಹಾಯ ಮಾಡಿದರು. ಮೊದಲು ಆಗ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪವರಲ್ಲಿಗೆ ನನ್ನನ್ನು ಕರೆದೊಯ್ದು, ಊರಿನ ಕೆರೆ ತುಂಬಿಸುವ ತೆಗೆಸುವ ಕುರಿತು ಮಾತನಾಡಿದರು. ಅವರು ಆ ಕಾರ್ಯಕ್ಕೆ ಸರಕಾರದ ವತಿಯಿಂದ ಚಾಲನೆ ನೀಡಿದರು. ಆದರೆ ಅಷ್ಟರಲ್ಲಿ ಕೊರೊನಾ ಕಾಯಿಲೆಯ ಪರಿಣಾಮ ಅದು ನಿಂತುಹೋಯಿತು. ನಂತರ ಬಸವರಾಜ ಬೊಮ್ಮಾಯಿ ಅವರು ಬಂದರು. ಅವರ ಬಳಿಗೂ ಭಟ್ಟರು ನನ್ನನ್ನು ಕರೆದೊಯ್ದರು. ಅವರು ನನ್ನ ಕಾದಂಬರಿಗಳನ್ನು ಓದಿದ್ದಾರೆ. ನನ್ನನ್ನು ನೋಡಿ ಬೊಮ್ಮಾಯಿಯವರು ಆತ್ಮೀಯತೆಯಿಂದ ಮಾತನಾಡಿಸಿದರು. ಅವರ ಅವಧಿಯಲ್ಲಿ ಕೆರೆ ಹೂಳು ತೆಗೆಸಿ ನೀರು ತರಿಸುವ ಕಾರ್ಯ ಪೂರ್ತಿ ಮಾಡಲಾಯಿತು. ಅವರಲ್ಲದೇ ಇನ್ನೂ ಎಷ್ಟೋ ಮಂದಿ ಇದರಲ್ಲಿ ಸಹಾಯ ಮಾಡಿದ್ದಾರೆ.

ಸಂದರ್ಶನಕಾರ: ಮುಂದಿನ ಯೋಜನೆಗಳೇನು?

ಭೈರಪ್ಪ: ಊರಿನಲ್ಲಿ ನಡೆಯುವ ಕಾರ್ಯಕ್ರಮ ಚೆನ್ನಾಗಿ ಆಗಲಿ ಎಂಬುದು ನನ್ನ ಆಸೆ. ನನ್ನಲ್ಲಿ ಊರಿಗಾಗಿ ಇನ್ನೂ ಏನೇನೋ ಯೋಚನೆಗಳಿವೆ. ನಾನು ಬಹಳ ಕಷ್ಟಪಟ್ಟು, ಅನ್ನ ಬಟ್ಟೆ ಇಲ್ಲದೆ ಹೇಗೋ ಮೇಲೆ ಬಂದವನು. ಈಗ ಆ ಥರದ ಅನುಭವಗಳು ಬೇರೆ ಯಾರಿಗೂ ಆಗದಿರಲಿ ಅಂತ ಇದೆ. ಅಂಥವರಿಗೆ ಸಹಾಯ ಮಾಡಬೇಕು ಎಂದಿದೆ. ಪಿಯುಸಿಯಲ್ಲಿ ಒಳ್ಳೇ ಅಂಕ ಬಂದ ಬಡ ಮಕ್ಕಳಿಗೆ ಇಂಜಿನಿಯರಿಂಗ್‌ ಓದಲು ದುಡ್ಡಿಲ್ಲದಿದ್ದರೆ ಅಂಥವರಿಗೆ ನೆರವಾಗಬೇಕು. ಎಲ್ಲ ಜಾತಿಯಲ್ಲೂ ಅಂಥವರಿದ್ದಾರೆ. ಅಂಥವರನ್ನು ಹುಡುಕಿ ಪ್ರತಿವರ್ಷವೂ ಸ್ಕಾಲರ್‌ಶಿಪ್‌ ಕೊಡಬೇಕಿದೆ. ಇದಕ್ಕಾಗಿ ಒಂದು ಟ್ರಸ್ಟ್‌ ಮಾಡಿಕೊಂಡು, ಅದಕ್ಕೆ ನಾನೇ ಅಧ್ಯಕ್ಷನಾಗಿ ಮುನ್ನಡೆಸಬೇಕು ಎಂಬ ಆಸೆಯಿದೆ. ನಾನು ಬದುಕಿರುವವರೆಗೆ ನನ್ನ ಪುಸ್ತಕಗಳ ರಾಯಲ್ಟಿ ಬರುತ್ತೆ, ಅದನ್ನು ಮಕ್ಕಳ ವಿದ್ಯೆಗಾಗಿಯೇ ಖರ್ಚು ಮಾಡಬೇಕು ಅನಿಸಿದೆ. ನನಗೆ ಹಣದ ಮೇಲೆ ಆಸೆ ಇಲ್ಲ. ಇರುವುದನ್ನು ದಾನ ಮಾಡಿ ಹೊರಟುಬಿಡಬೇಕು. ಪಾಪ- ಪುಣ್ಯ ಇಂಥದರಲ್ಲೆಲ್ಲ ನನಗೆ ನಂಬಿಕೆಯಿಲ್ಲ.

ಸಂದರ್ಶನ: ಹರೀಶ್‌ ಕೇರ

ನೆರವು: ಸಹನಾ ವಿಜಯಕುಮಾರ್