SL Bhyrappa: ಸಾಹಿತ್ಯ ಲೋಕದ ಮಾಣಿಕ್ಯ ಕಣ್ಮರೆ... ಭೈರಪ್ಪ ನಿಜಕ್ಕೂ ಕನ್ನಡದ ಸರಸ್ವತಿ ಪುತ್ರನೇ!
SL Bhyrappa passes away: ಕನ್ನಡದ ಸರಸ್ವತಿ ಪುತ್ರ, ಪದ್ಮ ಭೂಷಣ ಪುರಸ್ಕೃತ ಎಸ್.ಎಲ್ ಭೈರಪ್ಪನವರು ಇಂದು ವಿಧಿವಶರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

-

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಧೃವತಾರೆ ಮರೆಯಾಗಿದೆ. ಕನ್ನಡದ ಸರಸ್ವತಿ ಪುತ್ರ, ಪದ್ಮ ಭೂಷಣ ಪುರಸ್ಕೃತ ಎಸ್.ಎಲ್ ಭೈರಪ್ಪನವರು(SL Bhyrappa) ಇಂದು ವಿಧಿವಶರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ ಅವರು ತಮ್ಮ ಕೃತಿಗಳ ಮೂಲಕ ಕನ್ನಡದ ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾದಂಬರಿಗಳ ಕರ್ತೃ ಯಾರು ಅಂತ ಕೇಳಿದರೆ ನಿಸ್ಸಂಶಯವಾಗಿಯೂ ಅದು ಕನ್ನಡಿಗರಾದ ಎಸ್ ಎಲ್ ಭೈರಪ್ಪ. ಕನ್ನಡದ ಯಾವ ಕಾದಂಬರಿಕಾರರ ಕೃತಿಗಳು ಅತಿ ಹೆಚ್ಚು ಭಾಷೆಗಳು ಅನುವಾದಗೊಂಡಿವೆ ಅಂತ ಯಾರಾದರೂ ಕೇಳಿದರೆ ಅದಕ್ಕೆ ಉತ್ತರ ಭೈರಪ್ಪ. ರಷ್ಯನ್, ಜರ್ಮನ್ ದೇಶಗಳಲ್ಲೂ ಪ್ರಖ್ಯಾತರಾಗಿರುವ ಕನ್ನಡದ ಲೇಖಕರು ಯಾರು ಎಂದರೆ ಭೈರಪ್ಪ. ಬರವಣಿಗೆಯಿಂದ ಬಂದ ಹಣವನ್ನೆಲ್ಲಾ ಬಡ, ಅನಾಥ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗ ಮಾಡುತ್ತಿರುವವರು ಯಾರು ಎಂದು ಕೇಳಿದರೆ ಉತ್ತರ ಭೈರಪ್ಪ. ಕನ್ನಡದಲ್ಲಿ ಯಾರ ಕಾದಂಬರಿಗಳು ಅತಿ ಹೆಚ್ಚು ಸಿನಿಮಾ ಆಗಿವೆ ಎಂದು ಕೇಳಿದರೆ ಅವರು ಭೈರಪ್ಪ. ಹೀಗೆ ಕನ್ನಡದ ಕೀರ್ತಿಧ್ವಜವನ್ನು ಜಗತ್ತಿನ ಎಲ್ಲೆಡೆ ಕಾಣಿಸುವಂತೆ ಎತ್ತಿ ಹಿಡಿದ ಕಾದಂಬರಿಕಾರ, ಲೇಖಕ, ಚಿಂತಕ, ಸರಸ್ವತಿ ಸಮ್ಮಾನ್ ಪುರಸ್ಕೃತ, ಅವರೇ ಎಸ್‌ಎಲ್ ಭೈರಪ್ಪ.
ಭೈರಪ್ಪನರು ಹುಟ್ಟಿದ್ದು 1931ರ ಆಗಸ್ಟ್ 20ರಂದು ಚನ್ನರಾಯಪಟ್ಟಣದ ಬಳಿಯ ಸಂತೆಶಿವರ ಎಂಬ ಗ್ರಾಮದಲ್ಲಿ. ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರಗೊಂಡ ಪರಿಸರ ಈ ಎಲ್ಲಾ ಪ್ರತಿಕೂಲ ಸಂದರ್ಭಗಳ ನಡುವೆಯೂ ಸಣ್ಣವಯಸ್ಸಿನಿಂದಲೇ ತಮ್ಮ ತಾಯಿಯಲ್ಲಿದ್ದ ಧೀಮಂತಿಕೆಯನ್ನು ಮೈಗೂಡಿಸಿಕೊಂಡರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ತಾವು ಹುಟ್ಟಿದ ಹಳ್ಳಿಯಲ್ಲಿ ಹಾಗೂ ಅದರ ಸುತ್ತಮುತ್ತ ಪ್ರದೇಶಗಳಲ್ಲಿ ಭೈರಪ್ಪನವರು ಸಾಗಿಸಿದರು. ಆಗ ಅವರ ಹಳ್ಳಿಯಲ್ಲಿ ಓದಲು ಅನುಕೂಲವಿರಲಿಲ್ಲ. ಅವರ ತಾಯಿ ಅವರನ್ನು ತಮ್ಮ ಸೋದರಮಾವನ ಬಳಿ ಕಲಿಯಲು ಬಿಟ್ಟಿದ್ದರು. ಸ್ಥಳೀಯ ದೇವಾಲಯದ ಅರ್ಚಕನಾಗಿದ್ದ ಸೋದರಮಾವ, ಭೈರಪ್ಪನವರನ್ನು ಚೆನ್ನಾಗಿ ದುಡಿಸಿಕೊಳ್ಳುತ್ತ, ಅವರನ್ನು ಥಳಿಸುತ್ತ, ನೋಡಿಕೊಳ್ಳುವ ಹೆಸರಿನಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸುತ್ತಿದ್ದ. ಸೋದರ ಮಾವನ ಕ್ಷುಲ್ಲಕತನ, ಆತನ ರಾಸಲೀಲೆ, ತಮ್ಮ ಅಸಹಾಯಕತೆ, ಪ್ಲೇಗ್ ಭೀಕರತೆ ಎಲ್ಲವನ್ನೂ ಅವರು ಮುಂದೆ ತಮ್ಮ ಆತ್ಮಕಥೆ ಭಿತ್ತಿಯಲ್ಲಿ ಬಿಚ್ಚಿಟ್ಟರು.
ಈ ಸುದ್ದಿಯನ್ನೂ ಓದಿ: S.L. Bhyrappa: ನಮ್ಮ ಭೈರಪ್ಪ ನಮ್ಮ ಹೆಮ್ಮೆ; ಫೆ. 23ಕ್ಕೆ ಎಸ್.ಎಲ್.ಭೈರಪ್ಪಗೆ ಹುಟ್ಟೂರ ಅಭಿನಂದನೆ
ಅವರ ವಯಸ್ಸು 11ರ ಆಸುಪಾಸಿನಲ್ಲಿ ಅವರ ತಾಯಿಯೂ ಬಡತನ- ಪ್ಲೇಗ್‍ಗಳಿಗೆ ಜೀವವನ್ನು ಬಿಟ್ಟುಕೊಟ್ಟಾಗ, ಬದುಕಿನ ವಿಶ್ವ ವಿಶಾಲತೆಯ ಈ ರಂಗದಲ್ಲಿ ತಮ್ಮ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳತೊಡಗಿದರು. ಕೇವಲ ತಮ್ಮ ಹದಿಮೂರನೆಯ ವಯಸ್ಸಿನಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹೆಂಡದ ಲಾರಿಗಳನ್ನು ತಡೆದು ಪೋಲೀಸ್ ಸ್ಟೇಷನ್ನಿಗೆ ಹೋದರು. ಸ್ವಾತಂತ್ರ್ಯ ಹೋರಾಟದ ಭಾಷಣಗಳನ್ನು ಮಾಡಿದರು. ಕಾಲೇಜು ಕಲಿಯುತ್ತಾ ಅದರ ಫೀಸ್ ಕಟ್ಟಲು ಹಣವಿಲ್ಲದೆ ಸಿನಿಮಾ ಟೆಂಟ್‌ನಲ್ಲಿ ಬಾಗಿಲು ಕಾಯುವ ಕೆಲಸ ಮಾಡಿದರು. ಅಂಥದೇ ಹತ್ತು ಹಲವು ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡಿದರು. ಅದೇ ಸಂದರ್ಭದಲ್ಲಿಯೇ ಅವರ ತಮ್ಮನೂ ಪ್ಲೇಗ್‌ನಿಂದ ಮೃತಪಟ್ಟ. ಆತನ ಶವಸಂಸ್ಕಾರ ಮಾಡಲು ಯಾರೂ ನೆರವಾಗಲಿಲ್ಲ. ಆಗ ಭೈರಪ್ಪನವರೇ ತಮ್ಮನ ಶವವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಸಾಗಿಸಿ ಅಂತಿಮವಿಧಿಗಳನ್ನು ನೆರವೇರಿಸಿದರು.
ಮುಂದೆ ಅವರು ಭಿಕ್ಷಾನ್ನ, ವಾರಾನ್ನ ಮಾಡಿಕೊಂಡು ಶಿಕ್ಷಣ ಮುಂದುವರಿಸಿದರು. ಆಗಲೂ ಅವರ ತಂದೆ ಅವರ ವಾರಾನ್ನದ ಮನೆಗಳಿಗೆ ಹೋಗಿ, ಅವನಿಗೆ ಉಪನಯನ ಆಗಿಲ್ಲ ಎಂದು ಹೇಳಿ ವಾರಾನ್ನವನ್ನು ತಪ್ಪಿಸಿದ್ದನ್ನು ಕೂಡ ಅವರು ನೆನಪಿಸಿಕೊಂಡಿದ್ದಾರೆ. ತಮ್ಮ ಗೃಹಭಂಗ, ವಂಶವೃಕ್ಷ ಮೊದಲಾದ ಕಾದಂಬರಿಗಳು ಹಾಗೂ ಭಿತ್ತಿ ಎಂಬ ಆತ್ಮಚರಿತ್ರೆಯಲ್ಲಿ ಅವರ ಬದುಕಿನ ಈ ಭಾಗಗಳನ್ನು ಓದುವುದೇ ರೋಮಾಂಚನಕಾರಿ ಅನುಭವ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಬರುವ ಕಷ್ಟಗಳನ್ನು ಅನುಭವಗಳನ್ನಾಗಿ ಪರಿವರ್ತಿಸಿಕೊಂಡು ಹೇಗೆ ಪರಿಣಾಮಕಾರಿಯಾಗಿ ಬದುಕಬಹುದು ಎಂಬುದಕ್ಕೆ ಭೈರಪ್ಪನವರ ಸಾಧನೆಗಳು ಮಹಾನ್ ನಿದರ್ಶನ.
ಮುಂದೆ ಮೈಸೂರಿನಲ್ಲಿ ಹಲವು ಹಾಸ್ಟೆಲುಗಳು ಮತ್ತು ಅಂದಿನ ಕೆಲವೊಂದು ಸಜ್ಜನರ ಕೃಪೆಗಳಲ್ಲಿ ಬದುಕು ಸಾಗಿಸಿದ ಎಸ್. ಎಲ್. ಭೈರಪ್ಪನವರು ಮೈಸೂರಿನ ಶಾರದ ವಿಲಾಸ ಪ್ರೌಢಶಾಲೆಯಲ್ಲಿ ಓದಿದ ಮೇಲೆ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ 1957ರಲ್ಲಿ ಬಿ.ಎ. ಆನರ್ಸ್ ಪದವಿ ಗಳಿಸಿದರು. 1958ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವಿಯಲ್ಲಿ ಪ್ರಥಮ ಶ್ರೇಣಿಯ ಸಾಧನೆ ಮಾಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾನಿಲಯದಿಂದ ‘ಸತ್ಯ ಮತ್ತು ಸೌಂದರ್ಯ’ ಎಂಬ ಇಂಗ್ಲಿಷಿನಲ್ಲಿ ರಚಿಸಿದ ಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿ ಗಳಿಸಿದರು. ಎಂ. ಎ. ವಿದ್ಯಾಭ್ಯಾಸದ ನಂತರ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಮತ್ತು ಮನಃಶಾಸ್ತ್ರದ ಅಧ್ಯಾಪಕರಾಗಿ, ಅನಂತರ 1960ರಿಂದ 1966ರವರೆಗೆ ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1967ರಿಂದ 1971ರ ವರೆಗೆ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸಾ ವಿಷಯದಲ್ಲಿ ಉಪಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ನಂತರ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ತತ್ವಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ 1991ರಲ್ಲಿ ನಿವೃತ್ತರಾದರು.
ಭೈರಪ್ಪನವರ ಸಾಹಿತ್ಯಸೃಷ್ಟಿಯ ಕಾರ್ಯ ಆರಂಭವಾದದ್ದು ಅವರು ಹೈಸ್ಕೂಲಿನಲ್ಲಿದ್ದಾಗ. ಹಾಸ್ಟೆಲ್ ಮ್ಯಾಗಜೈನಿಗೆ ಕೆಲವು ಕಥೆಗಳನ್ನು ಬರೆದರು. ಇಂಟರ್ ಮೀಡಿಯಟ್ ಓದುತ್ತಿದ್ದಾಗಲೇ ‘ಗತಜನ್ಮ’ ಎಂಬ ನೀಳ್ಗತೆ, ‘ಭೀಮಕಾಯ’ ಮತ್ತು ‘ಬೆಳಕು ಮೂಡಿತು’ ಎಂಬ ಎರಡು ಕಾದಂಬರಿಗಳನ್ನು ಅವರು ಬರೆದಿದ್ದರು. ಇವುಗಳಲ್ಲಿ ಅನಕೃ ಅವರ ಪ್ರಭಾವವಿತ್ತು ಎಂದು ಭೈರಪ್ಪನವರೇ ಹೇಳುತ್ತಾರೆ. 1961ರಲ್ಲಿ ಪ್ರಕಟವಾದ ‘ಧರ್ಮಶ್ರೀ’ಯನ್ನು ತಮ್ಮ ಮೊದಲ ಕಾದಂಬರಿ ಎನ್ನುತ್ತಾರೆ ಅವರು. ಬದುಕು ಮತ್ತು ಅನುಭವಗಳ ಸಂಕೀರ್ಣತೆಯನ್ನು ಗ್ರಹಿಸಲು ಮತ್ತು ಸೃಜನಾತ್ಮಕವಾಗಿ ಅಭಿವ್ಯಕ್ತಪಡಿಸಲು ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾದಂಬರಿ ಉಪಯುಕ್ತ ಮಾಧ್ಯಮ ಎಂದು ಭಾವಿಸುವ ಭೈರಪ್ಪನವರು ‘ಧರ್ಮಶ್ರೀ’ಯಿಂದ ಆರಂಭಿಸಿ 'ಉತ್ತರಕಾಂಡ'ದವರೆಗೆ ಇಪ್ಪತ್ಮೂರು ಮಹತ್ವಪೂರ್ಣ ಕಾದಂಬರಿಗಳನ್ನು ಬರೆದಿದ್ದಾರೆ.
ಕೃತಿಗಳು
‘ಧರ್ಮಶ್ರೀ’, ‘ದೂರ ಸರಿದರು’, ‘ಮತದಾನ’, ವಂಶವೃಕ್ಷ’, ‘ಜಲಪಾತ’, ‘ನಾಯಿ ನೆರಳು’, ‘ತಬ್ಬಲಿಯು ನೀನಾದೆ ಮಗನೆ’, ‘ಗೃಹಭಂಗ’, ‘ನಿರಾಕರಣ’, ‘ಗ್ರಹಣ’, ‘ದಾಟು’, ‘ಅನ್ವೇಷಣ’, ‘ಪರ್ವ’, ‘ನೆಲೆ’, ‘ಸಾಕ್ಷಿ’, ‘ಅಂಚು’, ‘ತಂತು’, ‘ಸಾರ್ಥ’, ‘ಮಂದ್ರ’, ‘ಆವರಣ’, ‘ಕವಲು’ , 'ಯಾನ', 'ಉತ್ತರಕಾಂಡ' ಇವು ಡಾ. ಎಸ್. ಎಲ್. ಭೈರಪ್ಪನವರ ಇದುವರೆಗಿನ ಪ್ರಕಟಿತ ಕಾದಂಬರಿಗಳು. ಭೈರಪ್ಪನವರ ಬಹುತೇಕ ಕೃತಿಗಳು ಇತರ ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಮರಾಠಿಯಂತಹ ಹಲವು ಭಾಷಿಗರಂತೂ ಭೈರಪ್ಪನವರನ್ನು ತಮ್ಮ ಭಾಷೆಯ ಶ್ರೇಷ್ಠ ಕೃತಿಗಾರರಂತೆಯೇ ಅಭಿಮಾನಿಸುತ್ತಾರೆ. ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ಸಹಾ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಎಲ್ಲಾ ಸಹೃದಯರ ಹೃದಯದಲ್ಲಿ ನೆಲೆನಿಂತಿದೆ.
ಡಾ. ಎಸ್. ಎಲ್. ಭೈರಪ್ಪನವರು ಕನ್ನಡದಲ್ಲಿ ಇತರ ಗ್ರಂಥಗಳನ್ನೂ ಬರೆದಿದ್ದಾರೆ. ಸಾಹಿತ್ಯ ಮೀಮಾಂಸೆಗೆ ಸೇರಿದ ‘ಸಾಹಿತ್ಯ ಮತ್ತು ಪ್ರತೀಕ’, ‘ಕಥೆ ಮತ್ತು ಕಥಾವಸ್ತು’, ‘ನಾನೇಕೆ ಬರೆಯುತ್ತೇನೆ’ ಎಂಬ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳ ಸಂಗ್ರಹ; ಪ್ರೌಢ ಪ್ರಬಂಧವಾದ ಸೌಂದರ್ಯ ಮತ್ತು ಮೀಮಾಂಸೆಗೆ ಸಂಬಂಧಿಸಿದ ‘ಸತ್ಯ ಮತ್ತು ಸೌಂದರ್ಯ’ ಕೃತಿ, ಆತ್ಮವೃತ್ತಾಂತವಾದ ‘ಭಿತ್ತಿ’. ಬಹಳಷ್ಟು ಸಂಶೋಧನಾ ಲೇಖನಗಳನ್ನೂ ಭೈರಪ್ಪನವರು ಬರೆದಿರುವುದಲ್ಲದೆ ‘ವಿದ್ಯಾಭ್ಯಾಸದಲ್ಲಿ ಸಮಾನಾವಕಾಶ’, ‘ಭಾರತೀಯ ಶಿಕ್ಷಣದಲ್ಲಿ ಮೌಲ್ಯಗಳ ಸ್ಥಾನ ಮತ್ತು ವ್ಯಕ್ತಿತ್ವ’, ‘ಚಾರಿತ್ರಿಕ ವಿಕಾಸದಲ್ಲಿ ತತ್ವಶಾಸ್ತ್ರ’ ಎಂಬ ಗ್ರಂಥಗಳನ್ನೂ ರಚಿಸಿದ್ದಾರೆ. ‘ಸಾಕ್ಷೀಭಾವ’ ಎಂಬುದು ಭೈರಪ್ಪನವರು ಅಂಕಣಗಳಲ್ಲಿ ಮೂಡಿಸಿದ ನಮ್ಮ ಕಾಲದ ರಾಜಕೀಯ, ಆರ್ಥಿಕ, ಸಾಮಾಜಿಕ, ಚಾರಿತ್ರಿಕ ಚಿಂತನೆಗಳು.
ಇಂಥ ಮಹಾನ್ ಲೇಖಕನಿಗೆ ಪದ್ಮಶ್ರೀ ಪ್ರಶಸ್ತಿ, ಸರಸ್ವತಿ ಸಂಮಾನ್, ಕೇಂದ್ರ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ರೀತಿಯ ಮನ್ನಣೆಗಳು ದೊರೆತಿವೆ. ಆದರೆ ಅವರು ಎಲ್ಲ ಪ್ರಶಸ್ತಿಗಳಿಗಿಂತ ಮೇಲ್ಮಟ್ಟದಲ್ಲಿದ್ದೇನೆ ಎಂದು ತೋರಿಸಿಕೊಟ್ಟಿದ್ದಾರೆ. ಪ್ರಶಸ್ತಿಗಳು ಕೇವಲ ಒಂದೆರಡು ದಿನದ ಉತ್ಸವಗಳು. ಆದರೆ ಓದುಗರ ಹೃದಯಾಂತರಾಳವನ್ನು ಅಪಾರವಾಗಿ ಆಕ್ರಮಿಸಿಕೊಂಡಿರುವ ಮತ್ತೊಬ್ಬ ಬರಹಗಾರರು ಕನ್ನಡದಲ್ಲಿ ಮಾತ್ರವಲ್ಲ ಭಾರತದದಲ್ಲಿ ಬೇರೆಲ್ಲೂ ಇಲ್ಲ. ಭೈರಪ್ಪನವರು ತಮ್ಮ ಪ್ರತಿಯೊಂದೂ ಕಾದಂಬರಿ ಬರೆಯುವುದಕ್ಕೆ ಮಾಡುವ ಪೂರ್ವಭಾವಿ ತಯಾರಿ, ನಡೆಸುವ ಅಧ್ಯಯನ, ವ್ಯಾಪಕ ಸಂಚಾರ, ಕಂಡುಕೊಳ್ಳುವ ಅನುಭವ ಇದೆಲ್ಲವೂ ಬಹಳ ವಿಶಿಷ್ಟವಾದವು. ಮಹಾಭಾರತದ ಬಗೆಗಿನ ಪರ್ವ ಕಾದಂಬರಿ ಬರೆಯುವಾಗ ಹಿಮಾಲಯವನ್ನೂ ಸೇರಿದಂತೆ ಇಡೀ ಭಾರತ ಸಂಚರಿಸಿದ್ದಾರೆ. ಸಂಗೀತದ ಕುರಿತ ಮಂದ್ರ ಕಾದಂಬರಿ ಬರೆಯುವ ಮೊದಲು ಸಂಗೀತದ ಸಾಕಷ್ಟು ಅಭ್ಯಾಸವನ್ನೂ ಮಾಡಿದರು. ಆವರಣ ಬರೆಯುವ ಮೊದಲು ಮುಸ್ಲಿಮರೊಬ್ಬರ ಮನೆಯಲ್ಲಿ ಕೆಲವು ತಿಂಗಳ ಕಾಲ ತಂಗಿ ಅಲ್ಲಿನ ನಡವಳಿಕೆಗಳನ್ನು ಅಭ್ಯಾಸ ಮಾಡಿದರು. ಇನ್ನು ಪ್ರವಾಸಪ್ರಿಯರಾದ ಅವರು ಅಂಟಾರ್ಕ್‌ಟಿಕಾ ಪ್ರದೇಶಕ್ಕೂ ಪ್ರವಾಸ ಮಾಡಿ ಬಂದಿದ್ದಾರೆ.
ಒಬ್ಬ ಲೇಖಕನ ವ್ಯಕ್ತಿತ್ವವನ್ನು ಬರಿಯ ಆತನ ಬರಹದಿಂದ ತೂಕ ಹಾಕಿದರೆ ಸಾಲದು, ನಡವಳಿಕೆಯಿಂದಲೂ ನೋಡಬೇಕು ಎಂದು ಹೇಳುವುದಾದರೆ ಕನ್ನಡದ ಹಲವಾರು ಲೇಖಕರು ಆ ವಿಷಯದಲ್ಲಿ ಸೋಲುತ್ತಾರೆ. ಆದರೆ ಭೈರಪ್ಪನವರು ಆ ವಿಚಾರದಲ್ಲೂ ಗೆದ್ದು ಎತ್ತರದಲ್ಲಿ ನಿಲ್ಲುತ್ತಾರೆ. ಅವರು ತಮ್ಮ ಕಾದಂಬರಿಗಳು, ಪುಸ್ತಕಗಳಿಂದ ಪ್ರತಿವರ್ಷ ಸಾಕಷ್ಟು ಹಣವನ್ನು ಗೌರವಧನವಾಗಿ ಪಡೆಯುತ್ತಾರೆ. ಅದನ್ನೆಲ್ಲ ತನಗಾಗಿ ಅವರು ಉಪಯೋಗಿಸುವುದೇ ಇಲ್ಲ. ಬದಲಾಗಿ ಅದಕ್ಕಾಗಿಯೇ ಒಂದು ಟ್ರಸ್ಟ್ ರಚಿಸಿದ್ದು, ಅದರ ಮೂಲಕ ಆ ಹಣವನ್ನು ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ತನಗೆ ಬಾಲ್ಯದಲ್ಲಿ ಒದಗಿದ ಕಷ್ಟ ಬೇರೆ ಮಕ್ಕಳಿಗೆ ಬರದಿರಲಿ ಎಂಬುದು ಅವರ ಆಶಯ. ಇಂಥ ಉದಾತ್ತ ಆಶಯ ಹಾಗೂ ನಡವಳಿಕೆ ಕನ್ನಡದ ಇತರ ಲೇಖಕರಲ್ಲಿ ಕಾಣಲಾರೆವು.
ಭೈರಪ್ಪನವರು ಎಂದಿಗೂ ತಮ್ಮ ಸುಖದ ಬಗ್ಗೆ ಯೋಚಿಸಿದವರಲ್ಲ, ಅವರು ಸದಾ ಸಮಾಜದ ಒಳಿತಿಗಾಗಿ ಯೋಚಿಸಿದವರು. ಕೆಲವು ವರ್ಷಗಳ ಹಿಂದೆ ಅವರು ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರ ಮೂಲಕ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ತಮ್ಮ ಹುಟ್ಟೂರು ಸಂತೇಶಿವರದಲ್ಲಿನ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹಾರ ಒದಗಿಸಲು, ನೀರು ಪೂರೈಸಲು ಕೇಳಿಕೊಂಡರು. ಅಲ್ಲಿಂದ ಮುಂದೆ ತಮ್ಮೂರಿನ ಕೆರೆ ತುಂಬುವವರೆಗೂ ಭೈರಪ್ಪನವರು ವಿರಮಿಸಲಿಲ್ಲ. ಇವರ ಮೂಲಕ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆ ಕಟ್ಟೆಗಳಿಗೆ ಸರ್ಕಾರದ ವತಿಯಿಂದ ಏತ ನೀರಾವರಿ ಯೋಜನೆಯಡಿ ನೀರು ಪೂರೈಕೆಯಾಯಿತು. ಹತ್ತಾರು ವರ್ಷಗಳಿಂದ ಇದಕ್ಕಾಗಿ ಅವರು ಪ್ರಯತ್ನಿಸಿದರು. ಅವರ ಪ್ರಯತ್ನದ ಫಲವಾಗಿ ಯೋಜನೆ ಸಫಲಗೊಂಡು ಸಂತೇಶಿವರ ಮತ್ತು ಅಗ್ರಹಾರ ಬೆಳಗುಲಿ ಗ್ರಾಮಗಳ ಕೆರೆಕಟ್ಟೆಗಳಿಗೆ ನೀರು ಪೂರೈಕೆಯಾಗಿ ಸುತ್ತಲ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಿಂದಾಗಿ ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡು ರೈತರಿಗೆ ಖುಷಿ ನೆಮ್ಮದಿ ದೊರೆಯಿತು. ಇದರಿಂದ ಹರ್ಷಗೊಂಡ ಊರಿನ ಜನ ಭೈರಪ್ಪನವರನ್ನು ದೊಡ್ಡ ಕಾರ್ಯಕ್ರಮ ಮಾಡಿ ಸನ್ಮಾನಿಸಿದರು. ಬಹುಶಃ ತಮ್ಮೂರಿನ ಸಾಮಾನ್ಯ ಜನಸಮುದಾಯದಿಂದ ಹೀಗೆ ಮನ್ನಣೆ ಪಡೆದ ಲೇಖಕ ಎಂದರೆ ಭೈರಪ್ಪನವರು ಮಾತ್ರವೇ ಇರಬಹುದು.