ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa Passes away: ಭೈರಪ್ಪನವರ ಬೆನ್ನು ಹತ್ತಿದ ವಿವಾದಗಳ ಸಾಲು ಸಾಲು

ಪ್ರತಿ ಸಲ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದಾಗಲೂ ಭೈರಪ್ಪನವರಿಗೆ ಯಾಕೆ ಬರಲಿಲ್ಲ ಎಂದು ಕೇಳಲಾಗುತ್ತಿತ್ತು. ಅರ್ಹರೇ ಆಗಿದ್ದರೂ ಅವರು ಸದಾ ಆ ಪ್ರಶಸ್ತಿಯಿಂದ ವಂಚಿತರೇ ಆಗಿದ್ದುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸುತ್ತಿತ್ತು. ಮತಾಂತರ, ಟಿಪ್ಪು ಸುಲ್ತಾನ್‌, ಸ್ತ್ರೀವಾದಿಗಳ ಕುರಿತ ಅವರ ನಿಲುವುಗಳೆಲ್ಲ ಟೀಕೆಗೆ ಒಳಗಾಗಿದ್ದವು.

ಭೈರಪ್ಪನವರ ಬೆನ್ನು ಹತ್ತಿದ ವಿವಾದಗಳ ಸಾಲು ಸಾಲು

-

ಹರೀಶ್‌ ಕೇರ ಹರೀಶ್‌ ಕೇರ Sep 24, 2025 4:43 PM

ಬೆಂಗಳೂರು: ಇಂದು ನಿಧನರಾದ ಎಸ್‌ ಎಲ್‌ ಭೈರಪ್ಪ (SL Bhyrappa Passes away) ಅವರನ್ನು ರಾಷ್ಟ್ರೀಯ- ಅಂತಾರಾಷ್ಟ್ರೀಯ ಕೀರ್ತಿಯ ಜತೆಗೇ ವಿವಾದಗಳು ಕೂಡ ಸದಾ ಬೆನ್ನು ಹತ್ತಿದ್ದವು. ಹೆಚ್ಚಾಗಿ ಅವರ ಕಾದಂಬರಿಗಳು ವಿವಾದಕ್ಕೆ ತುತ್ತಾಗುತ್ತಿದ್ದವು. ಮಾತ್ರವಲ್ಲ ಅನೇಕ ಸಲ ಅವರ ಹೇಳಿಕೆಗಳು ಕೂಡ ವಿವಾದಕ್ಕೆ ಒಳಗಾಗುತ್ತಿದ್ದವು. ಭೈರಪ್ಪನವರನ್ನು ಶತಾಯಗತಾಯ ವಿರೋಧಿಸುತ್ತಿದ್ದ ಒಂದು ಬಳಗ, ಅವರ ಮಾತು ಹಾಗೂ ಕೃತಿಗಳನ್ನು ವಿವಾದಕ್ಕೆ ಒಳಪಡಿಸಲೆಂದೇ ಕಾಯುತ್ತಿತ್ತು. ಮತಾಂತರ, ಟಿಪ್ಪು ಸುಲ್ತಾನ್‌, ಸ್ತ್ರೀವಾದಿಗಳ ಕುರಿತ ಅವರ ನಿಲುವುಗಳೆಲ್ಲ ಟೀಕೆಗೆ ಒಳಗಾಗಿದ್ದವು.

ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾದಂಬರಿಯ ಶ್ರೇಷ್ಠ ಮಾಧ್ಯಮ ಎಂದು ಭಾವಿಸಿದ್ದ ಭೈರಪ್ಪನವರು ‘ಧರ್ಮಶ್ರೀ’ಯಿಂದ ಆರಂಭಿಸಿ 'ಉತ್ತರಕಾಂಡ'ದವರೆಗೆ ಇಪ್ಪತ್ಮೂರು ಮಹತ್ವಪೂರ್ಣ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಜೀವನದ ಬಹು ದೊಡ್ಡ ವಿವಾದ ಉಂಟಾದದ್ದು ʼಆವರಣʼ (2007) ಕಾದಂಬರಿ ಬಂದಾಗ. ಈ ಕಾದಂಬರಿಯಲ್ಲಿ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಬುದ್ಧಿಜೀವಿಯನ್ನು ಮದುವೆಯಾಗುವ ಹಾಗೂ ಮತಾಂತರವಾಗುವ ಚಿತ್ರಣವಿದೆ. ಮತಾಂತರದ ಚಿತ್ರಣ, ಜೊತೆಗೆ ಮೊಗಲ್‌ ದೊರೆ ಔರಂಗಜೇಬನ ಜೀವನ, ದೇವಾಲಯಗಳ ಮೇಲೆ ಆತ ನಡೆಸಿದ ದಾಳಿಗಳ ಉಲ್ಲೇಖಗಳಿದ್ದವು ಸಹಜವಾಗಿ ಇದು ಸೆಕ್ಯುಲರ್‌ವಾದಿಗಳನ್ನು ಕೆರಳಿಸಿತು. ಭೈರಪ್ಪನವರ ಮೇಲೆ ಟೀಕೆಗಳ ಪ್ರವಾಹವೇ ನಡೆಯಿತು. ಭೈರಪ್ಪನವರನ್ನು ಟೀಕಿಸಿ ಬರೆದ ಲೇಖನಗಳ ʼಆವರಣ- ಅನಾವರಣʼ ಎಂಬ ಕೃತಿಯೂ ಪ್ರಕಟವಾಯಿತು. ಭೈರಪ್ಪನವರು ಅದನ್ನೆಲ್ಲ ಯಶಸ್ವಿಯಾಗಿ ಎದುರಿಸಿದರು.

ಇದೇ ಹೊತ್ತಿನಲ್ಲಿ ಅವರು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಮತಾಂತರದ ಕುರಿತು ಸರಣಿ ಲೇಖನಗಳನ್ನು ಬರೆದರು. ಸ್ವತಂತ್ರ ಭಾರತದಲ್ಲಿ ಮತಾಂತರದ ಹಾವಳಿ ಎಷ್ಟು ಪ್ರಭಾವಶಾಲಿಯಾಗಿದೆ ಎಂದು ಅವರು ಅದರಲ್ಲಿ ವಿವರಿಸಿದ್ದರು. ಇದು ಕೂಡ ಜಾತ್ಯತೀತವಾದಿಗಳನ್ನು ಕೆರಳಿಸಿತು. ವಾರಗಟ್ಟೆಲೆ ಈ ಕುರಿತು ಪತ್ರಸಮರ, ಲೇಖನ ಸಮರ ನಡೆಯಿತು. ಹಳೆ ಮೈಸೂರು ವಿಭಾಗದಲ್ಲಿ ಟಿಪ್ಪು ಸುಲ್ತಾನ್‌ ಸಾಕ‌ಷ್ಟು ಹಿಂದೂ ದಮನ ಕಾರ್ಯಗಳನ್ನು ನಡೆಸಿದ್ದ ಎಂದು ಭೈರಪ್ಪ ಪ್ರತಿಪಾದಿಸುತ್ತಿದ್ದರು. ಆಗಾಗ ಈ ಕುರಿತು ಲೇಖನಗಳನ್ನೂ ಬರೆದಿದ್ದಾರೆ. ಇದು ಟಿಪ್ಪು ಅಭಿಮಾನಿಗಳಿಂದ ಟೀಕೆ ಆಕ್ರೋಶಗಳಿಗೆ ತುತ್ತಾಗಿತ್ತು.

ʼಪರ್ವʼ ಕಾದಂಬರಿ (1979) ಬರೆದಾಗ ಮಹಾಭಾರತವನ್ನು ವಾಸ್ತವಿಕ ನೆಲೆಯಲ್ಲಿ ಚಿತ್ರಿಸಿದ್ದು ಟೀಕೆಗೊಳಗಾಯಿತು. ಕೃಷ್ಣ ಮೊದಲಾದ ಎಲ್ಲ ಪಾತ್ರಗಳೂ ಸಾಮಾನ್ಯರಂತೆ ಇದ್ದುದನ್ನು ಪುರಾಣಪ್ರಿಯರು ಇಷ್ಟಪಡಲಿಲ್ಲ. ಹಾಗೆಯೇ ಮಂದ್ರ ಕಾದಂಬರಿಯಲ್ಲಿ ಅವರು ಶಾಸ್ತ್ರೀಯ ಸಂಗೀತ ಗಾಯಕನೊಬ್ಬನನ್ನು ಪ್ರಮುಖ ಪಾತ್ರವಾಗಿ ತಂದಿದ್ದಾರೆ. ಆತನನ್ನು ಸ್ತ್ರೀಲೋಲುಪನಾಗಿ ಚಿತ್ರಿಸಲಾಗಿದೆ ಎಂಬ ಟೀಕೆಯೂ ಬಂತು.

ʼಕವಲುʼ (2010) ಕಾದಂಬರಿಯಲ್ಲಿ ಅವರು ಚಿತ್ರಿಸಿದ ಸ್ತ್ರೀ ಪಾತ್ರಗಳು ಹಲವು ಲೇಖಕಿಯರಿಂದ ಟೀಕೆಗೆ ಒಳಗಾದವು. ಈ ಸ್ತ್ರೀ ಪಾತ್ರಗಳನ್ನು ಪುರುಷದ್ವೇಷಿಗಳಾದ ಸ್ತ್ರೀವಾದಿಗಳಾಗಿ ಚಿತ್ರಿಸಿದ್ದಾರೆ ಎಂದು ಹಲವು ಲೇಖಕಿಯರು ಟೀಕಿಸಿದರು. ಇದಾದ ನಂತರ ಅವರು ರಾಮಾಯಣದ ಸೀತೆಯ ಜೀವನ ಕಥನ ಆಧರಿಸಿದ ʼಉತ್ತರಕಾಂಡʼ (2017) ಕಾದಂಬರಿ ಬರೆದರು. ಈ ಕಾದಂಬರಿಯಲ್ಲಿ ಸೀತೆಯ ಚಿತ್ರಣ ಸ್ತ್ರೀವಾದಿಗಳಿಂದ ಮೆಚ್ಚುಗೆ ಪಡೆಯಿತಾದರೂ, ಶ್ರೀರಾಮನನ್ನು ಟೀಕಿಸಿ ಬರೆಯಲಾಗಿದೆ ಎಂದು ಕೆಲವರು ಕೋಪಿಸಿಕೊಂಡರು. ಹೀಗೆ ಭೈರಪ್ಪನವರು ಎರಡೂ ಕಡೆಗಳಿಂದಲೂ ಟೀಕಿಸಲ್ಪಟ್ಟರು.

ಇನ್ನು ಪ್ರತಿ ಸಲ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾದಾಗಲೂ ಭೈರಪ್ಪನವರಿಗೆ ಯಾಕೆ ಬರಲಿಲ್ಲ ಎಂದು ಕೇಳಲಾಗುತ್ತಿತ್ತು. ಸರಸ್ವತಿ ಸಮ್ಮಾನ್‌ ಮೊದಲಾದ ಪುರಸಾರಗಳನ್ನು ಪಡೆದಿದ್ದ ಅವರು ಜ್ಞಾನಪೀಠಕ್ಕೆ ಅರ್ಹರೇ ಆಗಿದ್ದರು. ಕನ್ನಡಕ್ಕೆ ಎಂಟು ಜ್ಞಾನಪೀಠ ಬಂದಿದ್ದರೂ, ಸಾಹಿತ್ಯದ ಶ್ರೇಷ್ಠತೆಯ ವಿಷಯದಲ್ಲಿ ಎಲ್ಲರನ್ನೂ ಮೀರಿಸಬಲ್ಲ ಸಾಮರ್ಥ್ಯ ಹೊಂದಿದ್ದ ಅವರು ಸದಾ ಆ ಪ್ರಶಸ್ತಿಯಿಂದ ವಂಚಿತರೇ ಆಗಿದ್ದುದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸುತ್ತಿತ್ತು. ಆದರೆ ಅವರು ಅದನ್ನೆಲ್ಲ ಮೀರಿ ನಿಂತಿದ್ದರು.

ನರೇಂದ್ರ ಮೋದಿ ಅವರು ಪ್ರಧಾನಿಯಾಗಬೇಕು ಎಂದು ಅವರು 2008ರಲ್ಲೇ ಹೇಳಿದ್ದರು. ಅವರು ಪ್ರಧಾನಿಯಾದ ಬಳಿಕವೂ, ಮೋದಿಯವರು 20 ವರ್ಷ ಭಾರತದ ಪ್ರಧಾನಿಯಾಗಿ ಮುನ್ನಡೆಸಬೇಕು, ಆಗ ಭಾರತ ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಅವರು ಹೇಳಿಕೆ ನೀಡಿದ್ದರು. ಅವರ ಈ ಮಾತು ಮೋದಿ ವಿರೋಧಿಗಳಿಂದಲೂ ಪ್ರತಿಪಕ್ಷಗಳಿಂದಲೂ ವ್ಯಾಪಕ ಟೀಕೆಗೆ ಒಳಗಾಗಿತ್ತು. ಮೋದಿಯವರು ಗುಜರಾತ್‌ನಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳಿಗೆ ಭೈರಪ್ಪನವರು ಸದಾ ಅಭಿಮಾನಿಯಾಗಿದ್ದರು.

ಅವರ ಕಾದಂಬರಿಗಳಲ್ಲಿ ವಂಶವೃಕ್ಷ, ಗೃಹಭಂಗ, ಪರ್ವ, ನಾಯಿ ನೆರಳು, ದಾಟು, ಅನ್ವೇಷಣ, ಸಾರ್ಥ, ಮಂದ್ರ, ಆವರಣ ಹೀಗೆ ಬಹುತೇಕ ಎಲ್ಲವೂ ಹಲವು ಭಾಷೆಗಳಿಗೆ ಅನುವಾದಗೊಂಡು ಎಲ್ಲೆಡೆ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಮರಾಠಿಯಂತಹ ಹಲವು ಭಾಷಿಗರಂತೂ ಭೈರಪ್ಪನವರನ್ನು ತಮ್ಮ ಭಾಷೆಯ ಶ್ರೇಷ್ಠ ಕೃತಿಗಾರರಂತೆಯೇ ಅಭಿಮಾನಿದಿದ್ದಾರೆ. ಭೈರಪ್ಪನವರ ಕಾದಂಬರಿಗಳಾದ ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ನಾಯಿನೆರಳು’, ‘ಮತದಾನ’ ಕೃತಿಗಳು ಚಲನಚಿತ್ರಗಳಾಗಿ ಸಹಾ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಜನಪ್ರಿಯಗೊಂಡಿವೆ. ‘ಗೃಹಭಂಗ’ ದೂರದರ್ಶನದಲ್ಲಿ ಧಾರಾವಾಹಿಯಾಗಿ ಮೂಡಿಬಂದು ಸಹೃದಯರ ಹೃದಯದಲ್ಲಿ ನೆಲೆನಿಂತಿದೆ.

ಇದನ್ನೂ ಓದಿ: S.L. Bhyrappa: ಎಸ್‌.ಎಲ್‌.ಭೈರಪ್ಪ ʻವಿಶ್ವವಾಣಿʼಗೆ ಕೊಟ್ಟ ಕೊನೆಯ ಸಂದರ್ಶನ ಇಲ್ಲಿದೆ