ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಲನಚಿತ್ರವಾಗಿ ತೆರೆಮೇಲೆ ಮೂಡಿಬಂದ ಎಸ್‌.ಎಲ್‌. ಭೈರಪ್ಪ ಕಾದಂಬರಿಗಳು ಇವು

ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಪ್ರಧಾನ ಕೊಂಡಿ ಕಳಚಿದೆ. ಕನ್ನಡದ ಸರಸ್ವತಿ ಪುತ್ರ, ಪದ್ಮ ಭೂಷಣ ಪುರಸ್ಕೃತ ಎಸ್‌.ಎಲ್‌. ಭೈರಪ್ಪ ಸೆಪ್ಟೆಂಬರ್‌ 24ರಂದು ವಿಧಿವಶರಾಗಿದ್ದಾರೆ. ಭೈರಪ್ಪ ಅವರ ಹಲವು ಕೃತಿಗಳು ಚಲನಚಿತ್ರವಾಗಿಯೂ ಮೂಡಿ ಬಂದಿವೆ. ಆ ಕುರಿತಾದ ವಿವರ ಇಲ್ಲಿದೆ.

ಚಲನಚಿತ್ರವಾಗಿ ತೆರೆಮೇಲೆ ಮೂಡಿದ ಭೈರಪ್ಪ ಕಾದಂಬರಿಗಳು ಇವು

-

Ramesh B Ramesh B Sep 24, 2025 4:02 PM

ಬೆಂಗಳೂರು: ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಪ್ರಧಾನ ಕೊಂಡಿ ಕಳಚಿದೆ. ಕನ್ನಡದ ಸರಸ್ವತಿ ಪುತ್ರ, ಪದ್ಮ ಭೂಷಣ ಪುರಸ್ಕೃತ ಎಸ್‌.ಎಲ್‌. ಭೈರಪ್ಪ (S.L. Bhyrappa) ಸೆಪ್ಟೆಂಬರ್‌ 24ರಂದು ವಿಧಿವಶರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಭೈರಪ್ಪ ಅವರ ಹಲವು ಕೃತಿಗಳು ಚಲನಚಿತ್ರವಾಗಿಯೂ ಮೂಡಿ ಬಂದಿವೆ. ಆ ಕುರಿತಾದ ವಿವರ ಇಲ್ಲಿದೆ.

ʼವಂಶವೃಕ್ಷʼ

ಎಸ್‌.ಎಲ್‌. ಭೈರಪ್ಪ ಅವರ ಜನಪ್ರಿಯ ಕಾದಂಬರಿ ʼವೃಂಶವೃಕ್ಷʼ ಅದೇ ಹೆಸರಿನಲ್ಲಿ ಸಿನಿಮಾವಾಗಿ 1972ರಲ್ಲಿ ತೆರೆಕಂಡಿತು. ಬಿ.ವಿ. ಕಾರಂತ ಮತ್ತು ಗಿರೀಶ್‌ ಕಾರ್ನಾಡ್‌ ನಿರ್ದೇಶನದ ಈ ಚಿತ್ರದಲ್ಲಿ ವೆಂಕಟರಾವ್‌ ತಾಳೆಗಿರಿ, ಎಲ್‌.ವಿ. ಶಾರದಾ, ಬಿ.ವಿ. ಕಾರಂತ, ಗಿರೀಶ್‌ ಕಾರ್ನಾಡ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.



ಈ ಸುದ್ದಿಯನ್ನೂ ಓದಿ: SL Bhyrappa: ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಪ್ರವೇಶ ಹೇಗಾಯ್ತು? ಟಾಪ್‌ ಟೆನ್‌ ಕಾದಂಬರಿಗಳು ಯಾವುವು ಗೊತ್ತಾ?

ʼತಬ್ಬಲಿಯು ನೀನಾದೆ ಮಗನೆʼ

ಭೈರಪ್ಪ ಅವರ ಮತ್ತೊಂದು ಕಾದಂಬರಿ ʼತಬ್ಬಲಿಯು ನೀನಾದೆ ಮಗನೆʼ ಸಿನಿಮಾವಾಗಿ 1977ರಲ್ಲಿ ಬಿಡುಗಡೆಯಾಯಿತು. ಗಿರೀಶ್‌ ಕಾರ್ನಾಡ್‌ ಮತ್ತು ಬಿ.ವಿ. ಕಾರಂತ ನಿರ್ದೇಶನದ ಈ ಸಿನಿಮಾ ಕನ್ನಡ ಮತ್ತು ಹಿಂದಿಯಲ್ಲಿ ತೆರೆಕಂಡಿದೆ. ಹಿಂದಿಯಲ್ಲಿ ಕುಲಭೂಷನ್‌ ಖರಬಂದ, ಓಂಪುರಿ ಮತ್ತಿತರರು ನಟಿಸಿದರೆ ಕನ್ನಡದಲ್ಲಿ ಮಾನು, ಸುಂದರ್‌ ರಾಜ್‌, ಟಿ.ಎಸ್‌. ನಾಗಾಭರಣ ಮತ್ತಿತರರು ಅಭಿನಯಿಸಿದ್ದಾರೆ. ಹಿಂದಿಯಲ್ಲಿ ಈ ಚಿತ್ರಕ್ಕೆ ʼಗೋಧೂಳಿʼ ಎಂಬ ಹೆಸರಿನಲ್ಲಿ ರಿಲೀಸ್‌ ಆಗಿದೆ. ಈ ಚಿತ್ರವೂ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.

ʼಮತದಾನʼ

2001ರಲ್ಲಿ ತೆರೆಕಂಡ ಕನ್ನಡ ಚಿತ್ರ ʼಮತದಾನʼ ಭೈರಪ್ಪ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಟಿ.ಎಸ್‌. ಸೀತಾರಾಮ್‌ ನಿರ್ದೇಶನದ ಈ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅನಂತ್‌ ನಾಗ್‌, ತಾರಾ, ದೇವರಾಜ್‌, ಅವಿನಾಶ್‌, ಸುಂದರ್‌ ರಾಜ್‌, ಸುಧಾ ಬೆಳವಾಡಿ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಈ ಚಿತ್ರ ರಾಷ್ಟ್ರ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿ ಸಂದಿದೆ.

ʼನಾಯಿ ನೆರಳುʼ

ಸಿನಿಮಾ ರೂಪ ಪಡೆದ ಭೈರಪ್ಪ ಅವರ ಮತ್ತೊಂದು ಕಾದಂಬರಿ ʼನಾಯಿ ನೆರಳುʼ. ಗಿರೀಶ್‌ ಕಾಸರವಳ್ಳಿ ಆ್ಯಕ್ಷನ್ ಕಟ್‌ ಹೇಳಿರುವ ಈ ಚಿತ್ರದಲ್ಲಿ ಪವಿತ್ರಾ ಲೋಕೇಶ್‌, ರಾಮೇಶ್ವರಿ ವರ್ಮಾ, ಶೃಂಗೇರಿ ರಾಮಣ್ಣ, ಅನನ್ಯಾ ಕಾಸರವಳ್ಳಿ ಮತ್ತಿತರರು ನಟಿಸಿದ್ದಾರೆ. ಈ ಚಿತ್ರ 2006ರಲ್ಲಿ ತೆರೆಕಂಡಿತು.

ʼಗೃಹಭಂಗʼ (ಧಾರಾವಾಹಿ)

ಭೈರಪ್ಪ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟ ಕೃತಿ ʼಗೃಹಭಂಗʼ. ಈ ಕೃತಿ 14 ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ ಎನ್ನುವುದು ವಿಶೇಷ. 2003ರಲ್ಲಿ ಈ ಕಾದಂಬರಿಯನ್ನು ಟಿವಿ ಸೀರಿಸ್‌ ಆಗಿ ಗಿರೀಶ್‌ ಕಾಸರವಳ್ಳಿ ಹೊರತಂದರು. ಮಾಳವಿಕಾ ಅವಿನಾಶ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ ಭೈರಪ್ಪ ಅವರ ʼದಾಟುʼ ಕಾದಂಬರಿ ಹಿಂದಿ ಧಾರಾವಾಹಿಯಾಗಿಯೂ ಜನಮನ್ನಣೆ ಗಳಿಸಿದೆ.