Pradeep Eshwar: ನಿಮ್ಮವನು ಅಲ್ಲವೆಂಬ ಕಾರಣಕ್ಕೆ ನನ್ನನ್ನು ತಡೆಯುವ ಪ್ರಯತ್ನ : ಪ್ರದೀಪ್ ಈಶ್ವರ್ ಆರೋಪ
ಬೆಂಗಳೂರಿನಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ತಮ್ಮ ರಾಜಕೀಯ ಅನುಭವ ಹಾಗೂ ವಿವಿಧ ರಾಜಕೀಯ ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶಾಸಕ ಪ್ರದೀಪ್ ಈಶ್ವರ್ ಮತ್ತು ಬೆಂಬಲಿಗರ ಪೋಟೊ.. -
ಬೆಂಗಳೂರು: “ಕಳೆದ ಮೂರು ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾಕಷ್ಟು ನೋವು ಅನುಭವಿಸಿದ್ದೇನೆ. ಎಸ್‌ಸಿ ಸಮುದಾಯದ ಅಭ್ಯರ್ಥಿಯೊಬ್ಬರನ್ನು ಡಿಸಿಯಾಗಿ ನೇಮಿಸಬೇಕು ಎಂದು ಮೂರು ದಿನಗಳ ಕಾಲ ಉನ್ನತ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಕಾದು, ರಾತ್ರಿ 7 ಗಂಟೆಯ ವರೆಗೂ ಕಾಯ್ದು ಸುಮ್ಮನೆ ವಾಪಸ್ ಬಂದಿದ್ದೇನೆ. ಇದಕ್ಕೆ ಅಡ್ಡಗಲ್ ಶ್ರೀಧರ್ ಅವರೇ ಸಾಕ್ಷಿ. ಎಸ್‌ಸಿಗಳನ್ನು ಡಿಸಿ, ಎಸ್‌ಪಿ ಮಾಡಿ ಎಂದು ಮನವಿ ಮಾಡಿದರೂ ಮಾಡಲಿಲ್ಲ. ನಾವೇನು ಮಾಡಲು ಸಾಧ್ಯ, ನಮ್ಮ ಹಣೆಬರಹ ಅಷ್ಟೇ” ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ತಮ್ಮ ರಾಜಕೀಯ ಅನುಭವ ಹಾಗೂ ವಿವಿಧ ರಾಜಕೀಯ ಎದುರಾಳಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಕಳೆದ ಮೂರು ವರ್ಷಗಳಲ್ಲಿ ನಾನು ಯಾವುದೇ ಕೆಲಸಕ್ಕೆ ಹೋದರೂ ನನ್ನ ಪಟ್ಟಿಯಲ್ಲಿ ಅವರ ವರ್ಗದವರು ಇದ್ದರೆ ಮಾತ್ರ ಕೆಲಸವಾಗುತ್ತದೆ, ಇಲ್ಲದಿದ್ದರೆ ಎತ್ತಿ ಬಿಸಾಕುತ್ತಾರೆ ಎಂಬ ಪರಿಸ್ಥಿತಿ ಇದೆ. ಒಬಿಸಿ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರನ್ನು ಡಿವೈಎಸ್‌ಪಿಯಾಗಿ ನೇಮಿಸಲು ಪ್ರಯತ್ನಿಸಿ ನೇಮಕ ಮಾಡಿಸಿಕೊಂಡು ಬಂದಿದ್ದೆ. ಆದರೆ ಬೆಳಗ್ಗೆ ೬ ಗಂಟೆಗೆ ಪಟ್ಟಿಯನ್ನೇ ಬದಲಿಸಿ ಮತ್ತೊಬ್ಬ ಒಕ್ಕಲಿಗ ಸಮುದಾಯದವರನ್ನು ತಂದು ಕೂರಿಸಲಾಯಿತು. ಇನ್ನೆಷ್ಟು ಸಹಿಸಿಕೊಳ್ಳಬೇಕು?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: MLA Pradeep Eshwar: ಕ್ಷೇತ್ರದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ: ಶಾಸಕ ಪ್ರದೀಪ್ ಈಶ್ವರ್
‘ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಮತ ಬೇಡವೇ?’
“ಚುನಾವಣೆಯಲ್ಲಿ ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ಮತಗಳೇ ಬೇಡ ಎಂಬಂತೆ ಮಾತನಾಡ ಲಾಗುತ್ತಿದೆ. ನಿಮ್ಮ ಸಮುದಾಯದ ಮತಗಳು 18 ಸಾವಿರವಿದ್ದು, ಅದರಲ್ಲಿ 15 ಸಾವಿರ ಮತದಾನ ವಾಗುತ್ತದೆ. 50 ಸಾವಿರ ಮತಗಳಿವೆ ಎಂದು ನಿಮಗೆ ಯಾರು ಹೇಳಿದರು? ನಾನು ಲೆಕ್ಕಾಚಾರ ಹಾಕಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ ಎಸ್‌ಸಿ, ಎಸ್‌ಟಿ ಸೇರಿ ಸುಮಾರು ಒಂದು ಲಕ್ಷ ಜನರಿದ್ದಾರೆ” ಎಂದು ಹೇಳಿದ ಅವರು, ತಮ್ಮನ್ನು ಎಸ್‌ಸಿ, ಎಸ್‌ಟಿ ಪರ ಎಂದು ಹೇಳುತ್ತೀರಿ ಎಂದು ಹೆಸರು ಹೇಳದೆ ಶಾಸಕ ಎಂ.ಸಿ. ಸುಧಾಕರ್(MLA M C Sudhakar) ವಿರುದ್ಧ ಹರಿಹಾಯ್ದರು.
‘ಅಭಿವೃದ್ಧಿ ಮಾಡಿದ್ದೇನೆ, ಒಂದು ಪೈಸೆ ಪಡೆದಿದ್ದೇನೆಂದು ತೋರಿಸಿ’
ಭಾನುವಾರ ತಮ್ಮ ವಿರುದ್ಧ ಸುದ್ದಿಗೋಷ್ಠಿ ನಡೆಸಿದವರೊಬ್ಬರು ಮಂಚೇನಹಳ್ಳಿಯಲ್ಲಿ ತಾವು ಇದ್ದಾಗ ಅಲ್ಲಿಗೆ ಬಂದು ಕಡತಕ್ಕೆ ಸಹಿ ಹಾಕಿಸಿಕೊಂಡು ಹೋಗಿದ್ದಾರೆ. ಐದು ಎಕರೆ ಭೂಮಿ ಪರಿವರ್ತನೆಗೆ ಸಂಬಂಧಿಸಿದ ಕೆಲಸ ಮಾಡಿಸಿಕೊಂಡು, ದೂರವಾಣಿ ಮೂಲಕ ಕಡತ ತೆಗೆದು ಕೊಂಡು ಹೋಗುವವರೆಗೂ ತಮ್ಮನ್ನು ಬಿಡಲಿಲ್ಲ. ಅಂತಹವರು ಬಳಿಕ ಸುದ್ದಿಗೋಷ್ಠಿ ನಡೆಸಿ ನಾನು ಏನು ಅಭಿವೃದ್ಧಿ ಮಾಡಿದ್ದೇನೆ ಎಂದು ಪ್ರಶ್ನಿಸುತ್ತಾರೆ ಎಂದು ಶಾಸಕ ಹೇಳಿದರು.
“ಇದರಲ್ಲಿ ನೀವು ಎಷ್ಟು ಹಣ ಪಡೆದಿದ್ದೀರಿ? ಅದರಲ್ಲಿ ನನಗೆ ಒಂದು ಪೈಸೆಯಾದರೂ ಕೊಟ್ಟಿದ್ದೀರಾ?” ಎಂದು ಹೆಸರು ಹೇಳದೆ ರಾಜಾಕಾಂತ್ ವಿರುದ್ಧ ಟೀಕಾಪ್ರಹಾರ ನಡೆಸಿದರು.
‘ಬಚ್ಚೇಗೌಡರು ಹೇಳಿದ ಕೆಲಸ ಮಾಡಿಕೊಟ್ಟಿದ್ದೇನೆ’
ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಅವರು ನಂದಿ ಸಬ್‌ಇನ್‌ಸ್ಪೆಕ್ಟರ್ ಹುದ್ದೆಯನ್ನು ತಮ್ಮವ ರೊಬ್ಬರಿಗೆ ನೀಡುವಂತೆ ಕೇಳಿಕೊಂಡಿದ್ದರು. ಅದನ್ನು ಮಾಡಿಕೊಟ್ಟಿದ್ದೇನೆ. ಮಂಚೇನಹಳ್ಳಿ ತಹಶೀಲ್ದಾರ್ ದೀಪ್ತಿ ಮೇಡಂ ಅವರನ್ನು ತಮ್ಮ ಅಣ್ಣನ ಮಗಳೆಂದು ಹೇಳಿ ಪೋಸ್ಟಿಂಗ್ ನೀಡುವಂತೆ ಕೇಳಿಕೊಂಡಿದ್ದರು. ಅದನ್ನೂ ಮಾಡಿಕೊಟ್ಟಿದ್ದೇನೆ. ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿಯೂ ಅವರು ಹೇಳಿದ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
“ಸರ್, ನಿಮ್ಮ ಮಕ್ಕಳು ನಿಮ್ಮ ಕಾಲಿಗೆ ಬಿದ್ದಿದ್ದಾರೋ ಇಲ್ಲವೋ ಗೊತ್ತಿಲ್ಲ. ನಾನು ನಿಮ್ಮ ಕಾಲಿಗೆ ಬಿದ್ದಿದ್ದೇನೆ. ನಾನೇನು ಮಾಡಿದೆ ನಿಮಗೆ? ಡೈರಿ ಚುನಾವಣೆಯಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದೀರಿ ಎಂಬ ಕಾರಣಕ್ಕಷ್ಟೇ ನಮ್ಮಿಬ್ಬರಿಗೂ ಬೇಸರವಿದೆ. ಬಚ್ಚೇಗೌಡರು ನನ್ನಿಂದ ಯಾವುದೇ ಲಾಭ ಪಡೆದಿಲ್ಲ, ಈ ಮೂರು ಅಂಶಗಳಲ್ಲಿ ಕೆಲಸ ಆಗಿಲ್ಲ ಎಂದು ಹೇಳಲು ಹೇಳಿ” ಎಂದು ಸವಾಲು ಹಾಕಿದರು.
‘ಸಹಾಯ ಕೇಳಿದವರಿಗೆ ನೆರವು ನೀಡಿದ್ದೇನೆ’
ದೊಡ್ಡಮರಳಿ ಮುಖಂಡ ಆವುಲರೆಡ್ಡಿ ಅವರು ತಮ್ಮ ಮಗನ ಮದುವೆಗೆ 10 ಲಕ್ಷ ರೂಪಾಯಿ ನೀಡುವಂತೆ ಕೇಳಿದ್ದರು. ನುಗಿತಹಳ್ಳಿ ರವಿ ಅವರು ತಮ್ಮ ಸಹೋದರನ ಚೆಕ್‌ಬೌನ್ಸ್ ಪ್ರಕರಣ ವಾಗಿದ್ದು, ಬಳ್ಳಾರಿ ಜೈಲಿಗೆ ಹಾಕುತ್ತಾರೆ ಎಂದು ಸಹಾಯಕ್ಕಾಗಿ ಮನವಿ ಮಾಡಿದ್ದರು. ಪರಿಶ್ರಮ ಟ್ರಸ್ಟ್ನಿಂದ 25 ಲಕ್ಷ ರೂಪಾಯಿ ಹಾಗೂ ನಂತರ 10 ಲಕ್ಷ ರೂಪಾಯಿ ನೀಡಿದ್ದೇನೆ. ಈ ಎಲ್ಲದಕ್ಕೂ ದಾಖಲೆಗಳಿವೆ. ಇಲ್ಲ ಎಂದು ಹೇಳಲಿ ಎಂದು ಸವಾಲು ಹಾಕಿದರು.
‘ಕಂದವಾರ ರಸ್ತೆ ಕಾಮಗಾರಿಗೆ ತಡೆ ತಂದರು’
“ಮಂಚೇನಹಳ್ಳಿ ಪ್ರಕಾಶ್ ಅವರು 9 ಕೋಟಿ ರೂಪಾಯಿ ಮೊತ್ತದ ಕಾಮಗಾರಿಯನ್ನು ಒಬ್ಬರೇ ಮಾಡಿದ್ದಾರೆ. ಇದನ್ನು ಭರಣಿ ವೆಂಕಟೇಶ್ ಮಾಡಿಸಿಕೊಟ್ಟಿದ್ದಾರೆ. ಕಂದವಾರ ರಸ್ತೆಗೆ 8 ಕೋಟಿ ರೂಪಾಯಿ ಹಾಕಿದ್ದೇನೆ. ಒಬ್ಬ ಗುತ್ತಿಗೆದಾರರನ್ನು ಕರೆದುಕೊಂಡು ಬಂದು ಚಿಕ್ಕಬಳ್ಳಾಪುರ ಟೌನ್ ಕೂಡ ನನಗೆ ಬೇಕು ಎಂದು ಕೇಳಿದರು. ನಗರ ಕಾಮಗಾರಿಗಳ ಟೆಂಡರ್ ನೀಡಲು ಮುಂದಾದಾಗ ಪ್ರಕಾಶ್ ಅವರ ಸ್ನೇಹಿತರ ಮೂಲಕ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಲಾಯಿತು” ಎಂದು ಆರೋಪಿಸಿದರು.
ನಗರಸಭೆ ಸದಸ್ಯರಾದ ರಫೀಕ್, ಕಣಿತಹಳ್ಳಿ ವೆಂಕಟೇಶ್ ಮತ್ತಿತರರು ಜಿಲ್ಲಾಧಿಕಾರಿಗಳ ಬಳಿ ತೆರಳಿ, ಕಂದವಾರ ಕೆರೆ ರಸ್ತೆಗೆ 8.5 ಕೋಟಿ ರೂಪಾಯಿ ನೀಡುವ ಬದಲು ಪ್ರತಿ ವಾರ್ಡ್ಗೆ ತಲಾ ಒಂದು ಕೋಟಿ ರೂಪಾಯಿ ನೀಡುವಂತೆ ದೂರು ನೀಡಿದ್ದರು. ಅವರ ಮಾತು ಕೇಳದಿದ್ದಾಗ ಮಂಚೇನಹಳ್ಳಿ ಪ್ರಕಾಶ್ ಮೂಲಕ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿ ಎರಡು ವರ್ಷಗಳ ಕಾಲ ಕಾಮಗಾರಿ ಯನ್ನು ಮುಂದೂಡಲಾಯಿತು. ಎರಡು ದಿನಗಳ ಹಿಂದೆ ಆ ಪ್ರಕರಣದಲ್ಲಿ ತಮಗೆ ಗೆಲುವಾಗಿದೆ ಎಂದು ಪ್ರದೀಪ್ ಈಶ್ವರ್ ಹೇಳಿದರು.
“ಕಂದವಾರ ರಸ್ತೆ ಸರಿಯಾದರೆ ನನಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ದುರುದ್ದೇಶದಿಂದ ಎರಡು ವರ್ಷಗಳ ಕಾಲ ಪ್ರಕರಣವನ್ನು ಮುಂದೂಡಿದ್ದಾರೆ. ಇದಕ್ಕೆ ಕುಮ್ಮಕ್ಕು ನೀಡಿದವರು ನಮ್ಮ ಪಕ್ಷದಲ್ಲೇ ಇರುವ ಕೆಲವರು. ಕಾರಣ ನಾನು ನಿಮ್ಮ ಸಮುದಾಯದ ಹುಡುಗನಲ್ಲವೇ?” ಎಂದು ಪ್ರಶ್ನಿಸಿದರು.
“ನಿಮ್ಮವನು ಆಗಿದ್ದರೆ ನಗರಸಭೆ ಅಧ್ಯಕ್ಷ ಮೋಸ ಮಾಡಿ ಓಡಿ ಹೋಗಬಹುದು. ನಾನು ರೆಕ್ಕೆ ಬಡಿದಿದ್ದಕ್ಕಾಗಿ ೧೦ ಸಾವಿರ ಮತ ಓಡಿ ಹೋಯಿತಂತೆ. ಅಯ್ಯೋ, ಇವರೆಲ್ಲ ಎಲ್ಲಿದ್ದಾರೋ ತಿಳಿಯದು” ಎಂದು ವ್ಯಂಗ್ಯವಾಡಿದರು.
‘ಪಕ್ಷದ ಕೆಲಸಕ್ಕೆ ಹಣ ಕೇಳಿ, ವೈಯಕ್ತಿಕ ಕೆಲಸಕ್ಕೆ ಬೇಡ’
“ಪಕ್ಷದ ಫಂಡ್ ಬೇಕಾದರೆ ಕೇಳಿ, ವೈಯಕ್ತಿಕ ಸಮಸ್ಯೆಗಳಿಗೆ ಹಣ ಕೇಳಬೇಡಿ. ಕ್ಷೇತ್ರದ 30 ಲೀಡರ್ ಗಳಿಗೆ ಕೋಟಿ ಕೋಟಿ ರೂಪಾಯಿ ಕೊಟ್ಟು ಸಾಕಾಗಿದೆ. ಮಂಚೇನಹಳ್ಳಿ ಪ್ರಕಾಶ್ ಶಿರಡಿಗೆ ಹೋದರೆ ವಿಮಾನ ಟಿಕೆಟ್, ರೂಂ ಸೇರಿದಂತೆ ಎಲ್ಲ ಖರ್ಚನ್ನೂ ನಾನೇ ಕೊಡಬೇಕು. ಎರಡನೇ ಬಾರಿ ಫೋನ್ ತೆಗೆದರೆ 10 ಲಕ್ಷ ರೂಪಾಯಿ ಕೊಡಬೇಕು. ಹಣ ಎಲ್ಲಿಂದ ತರಲಿ?” ಎಂದು ಪ್ರಶ್ನಿಸಿದರು.
“ನಗರಸಭೆ ಚುನಾವಣೆಗೆಂದು ಹಣ ಕಳುಹಿಸಿದರೆ 28 ಸಾವಿರ ರೂಪಾಯಿ ಬೆಲೆಯ ನೈಟ್ ಪ್ಯಾಂಟ್ ಖರೀದಿಸಬೇಕೇ? ಯಾರೋ ಒಬ್ಬ ಕುಳ್ಳ ಇದ್ದಾನೆ, 28 ಸಾವಿರ ರೂಪಾಯಿಯ ಪ್ಯಾಂಟ್ ಬೇಕಂತೆ, ರಾಯಲ್ ಸೆಲ್ಯೂಟ್ ಬೇಕಂತೆ. ಅವರನ್ನು ಮಾರಿದರೆ ೧೦ ಸಾವಿರ ರೂಪಾಯಿ ಬರಲ್ಲ. 28 ಸಾವಿರ ರೂಪಾಯಿ ಪ್ಯಾಂಟ್ ಕೊಂಡಿದ್ದಾರೆ” ಎಂದು ಹೆಸರು ಹೇಳದೆ ಮಿಲ್ಟನ್ ವೆಂಕಟೇಶ್ ಅವರನ್ನು ಟೀಕಿಸಿದರು.
‘ಚುನಾವಣೆಯಲ್ಲಿ ಬೆಂಬಲಿಸಿದವರನ್ನು ಮರೆಯುವುದಿಲ್ಲ’
“೨೦೨೩ರ ಚುನಾವಣೆಯಲ್ಲಿ ಕಣಿತಹಳ್ಳಿ ವೆಂಕಟೇಶ್ ಅವರ ಮನೆ ಬಳಿ ಮೂರು ಬಾರಿ ತೆರಳಿ ಪ್ರಚಾರಕ್ಕೆ ಬರುವಂತೆ ಕೇಳಿದ್ದೇನೆ. ಅವರು ಹೊರಗೆ ಬರಲಿಲ್ಲ. ಒಂದೇ ಒಂದು ಕಡೆ ಚುನಾವಣಾ ಪ್ರಚಾರ ಮಾಡಿರುವುದನ್ನು ತೋರಿಸಲಿ. ಆದರೆ ಆ ಸಂದರ್ಭದಲ್ಲಿ ಶಿವಾನಂದ್ ಮತ್ತು ಸಂದೀಪ್ ಚಕ್ರವರ್ತಿ ನನ್ನೊಂದಿಗೆ ಬಂದಿದ್ದರು. ಅವರಿಗೆ ಸದಾ ನನ್ನ ಬೆಂಬಲ ಇರಲಿದೆ” ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.