ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾವೇರಿ ವಿವಾದದಲ್ಲಿ ಕರ್ನಾಟಕಕ್ಕೆ ಬಿಗ್‌ ರಿಲೀಫ್‌; ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ಹಿನ್ನಡೆಯಾಗಿದ್ದು, ಕರ್ನಾಟಕದ ವಿರುದ್ಧ ಸಲ್ಲಿಸಿದ್ದ ಹೆಚ್ಚುವರಿ ನೀರು ಬಿಡುಗಡೆ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಯಾವುದೇ ಆದೇಶ ನೀಡದಿರುವಾಗ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂಬ ಕರ್ನಾಟಕದ ವಾದವನ್ನು ಪುರಸ್ಕರಿಸಿರುವ ಪೀಠವು, ತಮಿಳುನಾಡಿನ ಬೇಡಿಕೆಯನ್ನು ತಳ್ಳಿಹಾಕಿದೆ.

ಕಾವೇರಿ ವಿವಾದ: ತಮಿಳುನಾಡಿನ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್!

ಕಾವೇರಿ ನದಿ ವಿವಾದದಕ್ಕೆ ತಮಿಳುನಾಡಿಗೆ ಹಿನ್ನೆಡೆ -

Profile
Jyoti S Nov 20, 2026 12:40 PM

ನವದೆಹಲಿ: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ನೆರೆಯ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಶುಕ್ರವಾರ ಭಾರಿ ಹಿನ್ನಡೆಯಾಗಿದೆ. ಬಿಳಿಗುಂಡ್ಲು ಮಾಪನ ಕೇಂದ್ರದ ಪ್ರಕಾರ (Cauvery Water Dispute) ತನಗೆ ಸುಮಾರು 11.719 ಟಿಎಂಸಿ ಬಾಕಿ ನೀರು ಬರಬೇಕಿದ್ದು, ತಕ್ಷಣವೇ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಎರಡು ಅರ್ಜಿಗಳನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು ವಜಾಗೊಳಿಸಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಯು ಪ್ರತಿ 15 ದಿನಗಳಿಗೊಮ್ಮೆ ಸಭೆ ಸೇರಿ ಪರಿಸ್ಥಿತಿ ಅವಲೋಕಿಸಿ ಆದೇಶ ನೀಡುತ್ತಿರುವಾಗ, ನ್ಯಾಯಾಲಯ ಇದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂಬ ಕರ್ನಾಟಕದ ಪ್ರಬಲ ವಾದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ. ಅಲ್ಲದೆ, ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದ್ದು, ನೀರಾವರಿಗೂ ಕಡಿತ ಮಾಡಲಾಗಿದೆ ಹಾಗೂ ಮುಂಬರುವ ಈಶಾನ್ಯ ಮುಂಗಾರಿನಿಂದ ತಮಿಳುನಾಡಿಗೆ ಲಾಭವಿದೆಯೇ ಹೊರತು ಕರ್ನಾಟಕಕ್ಕಲ್ಲ ಎಂದು ವಾದ ಮಾಡಲಾಯಿತು.

ತಮಿಳುನಾಡಿನ ವಾದ ಏನಾಗಿತ್ತು?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ಆರೋಪಿಸಿ ನೀರು ಬಿಡುಗಡೆ ನಿರ್ದೇಶನ ನೀಡುವಂತೆ ತಮಿಳುನಾಡು ಕೋರಿತ್ತು. ಆದರೆ, ನ್ಯಾಯಾಲಯವು ಕರ್ನಾಟಕಕ್ಕೆ ಯಾವುದೇ ನಿರ್ದೇಶನ ನೀಡಲು ನಿರಾಕರಿಸಿ, ಅರ್ಜಿಗಳನ್ನು ವಜಾಗೊಳಿಸಿದೆ. ಕಾವೇರಿ ನೀರು ವಿವಾದ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ತಮಿಳುನಾಡಿಗೆ ವಾರ್ಷಿಕ 64 ಟಿಎಂಸಿ ನೀರು ಹಂಚಿಕೆಯಾಗಬೇಕಿದೆ.

ಇದೇ ವೇಳೆ, ತಮಿಳುನಾಡು ಸರ್ಕಾರ ಇಂದು ಮತ್ತೊಂದು ಹೊಸ ಅರ್ಜಿಯನ್ನು ಸಲ್ಲಿಸಿದ್ದು, ಇದರಲ್ಲಿ ಕರ್ನಾಟಕದ ಜೊತೆಗೆ ಕೇರಳ ಮತ್ತು ಪುದುಚೇರಿ ರಾಜ್ಯಗಳನ್ನೂ ಪ್ರತಿವಾದಿಗಳನ್ನಾಗಿ ಸೇರಿಸಿದೆ. ಈ ಅರ್ಜಿ ಸಲ್ಲಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ಪೀಠವು, “ಇನ್ನು ಎಷ್ಟು ಅರ್ಜಿಗಳನ್ನು ಸಲ್ಲಿಸುತ್ತೀರಿ?” ಎಂದು ತಮಿಳುನಾಡು ಪರ ವಕೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಡಿಕೆಶಿ-ವಿಜಯ್ ದೆಹಲಿ ಭೇಟಿ: 'ಮೇಕೆದಾಟು ಸಿನಿಮಾವಲ್ಲ' ಎಂದು ಸಿಎಂ ವಿರುದ್ಧ ಡಿಎಂಕೆ ವಾಗ್ದಾಳಿ

ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಪರ ವಕೀಲರು, “ಇದು ಪ್ರತ್ಯೇಕ ಅರ್ಜಿಯಾಗಿದ್ದು, ಇದರಲ್ಲಿ ಕೇರಳ ಮತ್ತು ಪುದುಚೇರಿಯನ್ನು ಹೊಸದಾಗಿ ಸೇರಿಸಲಾಗಿದೆ” ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಬಳಿಕ ನ್ಯಾಯಾಲಯವು ಈ ಹೊಸ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ನಡೆಸುವುದಾಗಿ ತಿಳಿಸಿದೆ.