Janaushadhi Kendra: ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ
Janaushadhi Kendra: ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಆದೇಶ ಹೊರಡಿಸಿತ್ತು. ಈ ನಿರ್ಧಾರವು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸರ್ಕಾರದ ಆದೇಶಕ್ಕೆ ಉಚ್ಚ ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದೆ.


ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳನ್ನು (Janaushadhi Kendra) ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿರುವ ಕೋರ್ಟ್, ಮುಂದಿನ ವಿಚಾರಣೆವರೆಗೂ ಕೇಂದ್ರಗಳನ್ನು ಸ್ಥಗಿತಗೊಳಿಸದಂತೆ ಮಧ್ಯಂತರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಆದೇಶ ಹೊರಡಿಸಿತ್ತು. ಈ ನಿರ್ಧಾರವು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುತ್ತಿದ್ದ ಈ ಕೇಂದ್ರಗಳು ಸ್ಥಗಿತಗೊಂಡರೆ, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.
ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಂಸದ ತೇಜಸ್ವಿ ಸೂರ್ಯ ಮತ್ತು ಹಲವು ಜನೌಷಧಿ ಕೇಂದ್ರಗಳ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯದ ಕ್ರಮವನ್ನು ಸ್ವಾಗತಿಸಿರುವ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸರ್ಕಾರದ ಜನಪರ ಕಾರ್ಯಗಳನ್ನು ವಿರೋಧಿಸುವ ಏಕೈಕ ಉದ್ದೇಶದಿಂದ ರಾಜ್ಯದ ಸಾರ್ವಜನಿಕರಿಗೆ ಸಂಕಷ್ಟ ನೀಗಿಸುವುದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ವ್ಯತಿರಿಕ್ತ ಅಭಿಪ್ರಾಯ ರೂಪಿಸುವ ಕಾರಣದಿಂದ ಕಾಂಗ್ರೆಸ್ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದ್ದು, ಅದರ ಜನವಿರೋಧಿ ನೀತಿಯನ್ನು ವ್ಯಕ್ತಪಡಿಸುತ್ತದೆ. ನ್ಯಾಯಾಲಯದ ಕ್ರಮವು ರಾಜ್ಯ ಸರ್ಕಾರಕ್ಕೆ ದೊಡ್ಡ ಮುಖಭಂಗವಾಗಿದ್ದು, ಜನವಿರೋಧಿ ಕ್ರಮಗಳಿಗೆ ತಡೆ ನೀಡುವ ವಿಕೃತ ಮನೋಭಾವಕ್ಕೆ ಚಾಟಿ ಏಟು ಕೊಟ್ಟಂತಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Heart Attack: ಹೃದಯಾಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಸೇರಿ ಮೂವರು ಬಲಿ