ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

10-hour workday Policy: ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ; ವಾರದಲ್ಲಿ ಎರಡು ದಿನ ರಜೆ?

10-hour workday Policy: ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ದಿನಕ್ಕೆ ಒಂಬತ್ತರಿಂದ 10 ಗಂಟೆಗೆ ಹೆಚ್ಚಿಸುವುದು ಮತ್ತು 10 ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ಚಿಂತನೆ ನಡೆಸಿದೆ.

ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ; ವಾರದಲ್ಲಿ ಎರಡು ದಿನ ರಜೆ?

Profile Prabhakara R Jun 18, 2025 6:02 PM

ಬೆಂಗಳೂರು: ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ದಿನಕ್ಕೆ 9 ರಿಂದ 10 ಗಂಟೆಗೆ ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಸದ್ಯ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ 1961ರ ಸೆಕ್ಷನ್ 7ರ ಪ್ರಕಾರ ಕೆಲಸದ ಅವಧಿ (10-hour workday Policy) ದಿನಕ್ಕೆ ಒಂಬತ್ತು ಗಂಟೆ ಮೀರಬಾರದು ಮತ್ತು ಗರಿಷ್ಠ ಒಟಿ 10 ಗಂಟೆಗಳನ್ನು ಮೀರಬಾರದು ಎಂಬ ನಿಯಮವಿದೆ. ಸದ್ಯ ಈ ಕಾನೂನಿಗೆ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 10 ಗಂಟೆ ಮತ್ತು ಹೆಚ್ಚುವರಿ ಕೆಲಸದ ಅವಧಿಯನ್ನು ದಿನಕ್ಕೆ ಗರಿಷ್ಠ 12 ಗಂಟೆಗಳಿಗೆ ವಿಸ್ತರಿಸಲು ಚಿಂತನೆ ನಡೆಸಿದೆ. ಕಾನೂನು ತಿದ್ದುಪಡಿ ವಿಚಾರ ಈಗ ಚರ್ಚಾ ಹಂತದಲ್ಲಿದ್ದು ಈ ಸಂಬಂಧ ರಾಜ್ಯ ಸರ್ಕಾರ ವಿಕಾಸ ಸೌಧದಲ್ಲಿ ಕೈಗಾರಿಕಾ ಮತ್ತು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳ ಜತೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು, ಕಾರ್ಖಾನೆಗಳ ಮಾಲೀಕರು, ಕಾರ್ಮಿಕ ಸಂಘಟನೆಗಳು ಸದಸ್ಯರು ಭಾಗಿಯಾಗಿದ್ದಾರೆ.

ಕಾರ್ಮಿಕರ ಕೆಲಸದ ಅವಧಿಯ ಗರಿಷ್ಠ ಮಿತಿಯನ್ನು ದಿನಕ್ಕೆ ಒಂಬತ್ತರಿಂದ 10 ಗಂಟೆಗೆ ಹೆಚ್ಚಿಸುವುದು ಮತ್ತು 10 ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಅಂಗಡಿಗಳು, ವಾಣಿಜ್ಯ ಸಂಸ್ಥೆಗಳನ್ನು ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಕೇಂದ್ರ ಹಾಗೂ ಖಾಸಗಿ ಉದ್ಯೋಗಿಗಳ ಸಂಘದಿಂದಲೂ ಪ್ರಸ್ತಾವನೆ ಬಂದಿದೆ. ನಿತ್ಯ 10 ಗಂಟೆ ಕೆಲಸ ಮಾಡಿದರೆ ಶನಿವಾರ ಭಾನುವಾರ ಎರಡು ದಿನದ ರಜೆ ನೀಡಲಾಗುತ್ತದೆ.

ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಸರ್ಕಾರ ಕೆಲ ದಿನಗಳ ಹಿಂದೆ ನಡೆಸಿದ ಸಂಪುಟ ಸಭೆಯಲ್ಲಿ ಕಾರ್ಮಿಕರ ಕೆಲಸದ ಅವಧಿಯನ್ನು 10 ಗಂಟೆಗೆ ಹೆಚ್ಚಿಸುವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿತ್ತು. ಅದೇ ರೀತಿ ಛತ್ತೀಸ್‌ಗಡ, ಗುಜರಾತ್‌, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ್‌ ರಾಜ್ಯಗಳು ಈಗಾಗಲೇ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಿವೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ನಡೆಗೆ ವಿವಿಧ ಸಂಘಟನೆಗಳ ವಿರೋಧ

ಕೆಲಸದ ಅವಧಿ ಹೆಚ್ಚಳ ಪ್ರಸ್ತಾವಣೆಗೆ ಕಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕರ್ನಾಟಕ ಸರ್ಕಾರದ ಈ ಕಾರ್ಮಿಕ ಕಾನೂನು ತಿದ್ದುಪಡಿ ಪ್ರಸ್ತಾಪವನ್ನು ಐಟಿ ಉದ್ಯೋಗಿಗಳ ಒಕ್ಕೂಟವಾದ ಕೆಐಟಿಯು ಬಲವಾಗಿ ವಿರೋಧಿಸಿದೆ. ಐಟಿ ಕ್ಷೇತ್ರಕ್ಕೆ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆಗೊಂಡರೆ ದಿನದಲ್ಲಿ ಇರುವ ಮೂರು ಶಿಫ್ಟ್​ಗಳ ಸಂಖ್ಯೆ ಎರಡಕ್ಕೆ ಇಳಿಯಬಹುದು. ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳಬಹುದು ಎಂದು ಕೆಐಟಿಯು ಆತಂಕ ವ್ಯಕ್ತಪಡಿಸಿದೆ.

ಕಾರ್ಪೊರೇಟ್ ಸೆಕ್ಟರ್​​ನಲ್ಲಿರುವ 25 ವರ್ಷದೊಳಗಿನ ವಯಸ್ಸಿನ ಶೇ. 90ರಷ್ಟು ಉದ್ಯೋಗಿಗಳು ದೀರ್ಘ ಕೆಲಸದ ಅವಧಿಯಿಂದಾಗಿ ಆತಂಕದ ಮನಸ್ಥಿತಿಯಲ್ಲಿದ್ದಾರೆ ಎನ್ನುವ ವರದಿಯೊಂದನ್ನು ಉಲ್ಲೇಖಿಸಿ ಕೆಐಟಿಯು ವಾದಿಸಿದೆ.

ಈ ಸುದ್ದಿಯನ್ನೂ ಓದಿ | KPTCL Recruitment: ಕೆಪಿಟಿಸಿಎಲ್‌ನಲ್ಲಿ 35 ಸಾವಿರ ಖಾಲಿ ಹುದ್ದೆಗಳ ಭರ್ತಿ ಶೀಘ್ರ: ಸಿಎಂ ಘೋಷಣೆ

ಹೋಟೆಲ್ ಮಾಲೀಕರ ಸಂಘದ ಬೆಂಬಲ

ಕಾರ್ಮಿಕರ ಕೆಲಸ ಅವಧಿಯನ್ನು ಏರಿಸುವ ಸರ್ಕಾರದ ಪ್ರಸ್ತಾಪಕ್ಕೆ ಹೋಟೆಲ್ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಐಟಿ ಕಂಪನಿಗಳಲ್ಲಿ ವಾರಕ್ಕೆ 48 ಗಂಟೆ ಮಾತ್ರ ಕೆಲಸ ಮಾಡಿಸಲಾಗುತ್ತಿದೆ. ದಿನದ ಕೆಲಸದ ಅವಧಿಯನ್ನು 10 ಗಂಟೆಗೆ ಏರಿಸಿದರೆ ಅಷ್ಟು ವ್ಯತ್ಯಾಸ ಆಗಲ್ಲ. ವಾರದಲ್ಲಿ ಎರಡು ದಿನ ರಜೆಯೂ ಉಳಿಯುತ್ತದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.