Bengaluru stampede: ಕಾಲ್ತುಳಿತ ದುರಂತ; ಕುಣಿಗಲ್ನ ಮನೋಜ್ ಕುಟುಂಬಕ್ಕೆ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದ ಡಿಸಿ
Bengaluru stampede: ನಮಗೆ ಆದಂತೆ ಮುಂದೆ ಬೇರೆ ಯಾರಿಗೂ ಆಗುವುದು ಬೇಡ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನನ್ನ ಮಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಎಂದು ಪರಿಹಾರ ಹಣ ಸ್ವೀಕರಿಸಿದ ವೇಳೆ ಮನೋಜ್ ತಂದೆ ದೇವರಾಜು ದುಃಖ ತೋಡಿಕೊಂಡಿದ್ದಾರೆ.


ತುಮಕೂರು: ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ (Bengaluru stampede) ಮೃತಪಟ್ಟಿದ್ದ ಕುಣಿಗಲ್ ತಾಲೂಕಿನ ನಾಗಸಂದ್ರದ ವಿದ್ಯಾರ್ಥಿ ಮನೋಜ್ ಕುಮಾರ್ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ 25 ಲಕ್ಷ ಪರಿಹಾರ ನೀಡಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನೋಜ್ ತಂದೆ ದೇವರಾಜು ಅವರಿಗೆ ಪರಿಹಾರದ ಚೆಕ್ ಅನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಹಸ್ತಾಂತರಿಸಿದರು.
ಜಿಲ್ಲಾಧಿಕಾರಿಗಳ ಪಿಡಿ ಖಾತೆಯಿಂದ ತಕ್ಷಣ 25 ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದಿಂದ ಆದೇಶ ಬಂದಿದ್ದು, ಅದರಂತೆ ನಾವು ಪರಿಹಾರದ ಚೆಕ್ ನೀಡಿದ್ದೇವೆ ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದ್ದಾರೆ.
ಮನೋಜ್ ತಂದೆ ದೇವರಾಜು ಅವರು ಮಾತನಾಡಿ, ಸರ್ಕಾರ ಹಣ ನೀಡಿದೆ, ಆದರೆ ನಮ್ಮ ಮಗ ಬದುಕಿ ಬರಲಿಲ್ಲ. ನಮಗೆ ಆದಂತೆ ಮುಂದೆ ಬೇರೆ ಯಾರಿಗೂ ಈ ರೀತಿ ಆಗುವುದು ಬೇಡ. ಸರ್ಕಾರ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನನ್ನ ಮಗ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಇನ್ನು ಎರಡು ವರ್ಷ ಹೋಗಿದ್ದರೆ ಉತ್ತಮ ಉದ್ಯೋಗ ಸಂಪಾದಿಸಿ ಇದಕ್ಕಿಂತ ಎರಡರಷ್ಟು ಸಂಪಾದನೆ ಮಾಡುತ್ತಿದ್ದ. ಪರಿಹಾರದ ಹಣವನ್ನು ಅವನ ತಂಗಿ ಹಾಗೂ ತಾಯಿ ಖಾತೆಗೆ ಹಾಕುತ್ತೇವೆ. ಅವರಿಗೆ ಮುಂದಿನ ದಿನಗಳಲ್ಲಿ ಅನುಕೂಲವಾಗುತ್ತದೆ. ಮಗಳಿದ್ದಾಳೆ, ಅವಳಿಗಾದರೂ ಉತ್ತಮ ಭವಿಷ್ಯ ರೂಪಿಸಿ ಕೊಡುತ್ತೇನೆ ಎಂದು ತಮ್ಮ ಮನದ ದುಖಃವನ್ನು ತೋಡಿಕೊಂಡರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಹಾಗೂ ಕುಣಿಗಲ್ ತಹಸೀಲ್ದಾರ್ ರಶ್ಮಿ ಇದ್ದರು.
ಕಬ್ಬನ್ ಪಾರ್ಕ್ನ ಗಿಡ-ಮರಗಳಿಗೆ ಹಾನಿ; ಆರ್ಸಿಬಿ, ಕೆಎಸ್ಸಿಎ ವಿರುದ್ಧ ದೂರು ದಾಖಲು
ಬೆಂಗಳೂರು: ಹನ್ನೊಂದು ಮಂದಿ ಆರ್ಸಿಬಿ(RCB victory parade stampede) ಅಭಿಮಾನಿಗಳನ್ನು(Bengaluru Stampede) ಬಲಿ ಪಡೆದ, ಚಿನ್ನಸ್ವಾಮಿ ಕ್ರೀಡಾಂಗಣ(m chinnaswamy stadium) ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಹಲವರ ತಲೆದಂಡವಾಗಿದೆ. ಪ್ರಕರಣದಲ್ಲಿ ಕೆಎಸ್ಸಿಎ ಆಡಳಿತ ಮಂಡಳಿ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಬಂಧನ ಭೀತಿಯಿಂದ ಪಾರಾಗಿರುವ ಕೆಎಸ್ಸಿಎಗೆ ಸಿಐಡಿ ತನಿಖೆ ಬಿಸಿ ಮುಟ್ಟಿಸಲು ಮುಂದಾಗಿದೆ. ಇದರ ಬೆನ್ನಲ್ಲೇ ವಿಜಯೋತ್ಸವದ ವೇಳೆ ಕಬ್ಬನ್ ಪಾರ್ಕಿನ(cubbon park) ಗಿಡ ಮರಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ವಾಕರ್ಸ್ ಅಸೋಸಿಯೇಷನ್ ಭಾನುವಾರ(ಜೂ.8) ಕಮಿಷನರ್ಗೆ ದೂರು ನೀಡಿದೆ.
ಜನರ ಕಾಲ್ತುಳಿತದಿಂದ ಕಬ್ಬನ್ ಪಾರ್ಕ್ನ ಗಿಡ, ಮರಗಳಿಗೂ ಹಾನಿ ಉಂಟಾಗಿದೆ. ಹೀಗಾಗಿ ವಾಕರ್ಸ್ ಅಸೋಸಿಯೇಷನ್ನಿಂದ ಆರ್ಸಿಬಿ, ಡಿಎನ್ಎ ಕಂಪನಿ, ಕೆಎಸ್ಸಿಎ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈಗಾಗಲೇ ಪ್ರಕರಣದಲ್ಲಿ ಆರ್ಸಿಬಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ ಹಾಗೂ ಡಿಎನ್ಎ ಕಂಪನಿ ವ್ಯವಸ್ಥಾಪಕ ಕಿರಣ್ ಸೇರಿ ನಾಲ್ವರ ಬಂಧನವಾಗಿದೆ.
ಶನಿವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ)ಯ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ ನೀಡಿದ್ದರು. ಕಾರ್ಯದರ್ಶಿ ಹುದ್ದೆಯನ್ನು ಎ. ಶಂಕರ್, ಖಜಾಂಚಿ ಹುದ್ದೆಯನ್ನು ಇ.ಎಸ್.ಜಯರಾಂ ತೊರೆದಿದ್ದು, ‘ಕಾಲ್ತುಳಿತ ಘಟನೆಯಲ್ಲಿ ನಮ್ಮ ಪಾತ್ರ ಇಲ್ಲದಿದ್ದರೂ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದೇವೆ’ ಎಂದು ಕೆಎಸ್ಸಿಎ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್ ಸ್ಟಾರ್ಕ್!
ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿರುವ ನಾಲ್ವರು ಆರೋಪಿಗಳನ್ನು ಹೆಚ್ಚಿನ ತನಿಖೆ ಸಲುವಾಗಿ ಸೋಮವಾರ ಸಿಐಡಿ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ. ಈ ಸಂಬಂಧ ನ್ಯಾಯಾಲಯದಿಂದ ಬಾಡಿ ವಾರೆಂಟ್ಗೆ ಸಿಐಡಿ ಅರ್ಜಿ ಸಲ್ಲಿಸಲಿದೆ.