ತುಮಕೂರು: ತುಮಕೂರು ವಿಶ್ವವಿದ್ಯಾಲಯ ಮತ್ತು ಅಮೂಲ್ಯ ಪುಸ್ತಕ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಗೀತಾ ವಸಂತ ಅವರ “ತೆರೆದಷ್ಟೂ ಅರಿವು” ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಮರ್ಶಕ ಒಂದು ನಿಲುವನ್ನು ತಾಳಬೇಕು ಮತ್ತು ಈ ನಿಲುವಿನ ಬಗೆಗೂ ವಿಮರ್ಶೆ ಇರಬೇಕು. ಒಂದು ಸಾಹಿತ್ಯ ಕೃತಿಯನ್ನು ಅರ್ಥ ಮಾಡಿಕೊಳ್ಳುವುದು ಎನ್ನುವುದು ಇಲ್ಲ. ಅರ್ಥ ಎನ್ನುವುದು ಅನುಭವದ ಸಾವು. ಒಂದು ಸತ್ಯ ಎನ್ನುವುದು ಇದೆಯೇ, ಸತ್ಯ, ಅನುಭವ ಎಂದರೇನು, ಅನುಭವಗಳ ಮೂಲಕ ಅರಳಿ ಬೆಳೆಯುವುದೆಂದರೇನು ಇತ್ಯಾದಿ ಮಹತ್ವದ ಪ್ರಶ್ನೆಗಳನ್ನು ಹಾಕಿಕೊಳ್ಳುವ ಲೇಖಕಿ, ತಮ್ಮ ಓದನ್ನು ಕುರಿತ ಪ್ರಾಮಾಣಿಕವಾದ ವಿಮರ್ಶೆಯನ್ನು ಈ ಕೃತಿಯಲ್ಲಿ ಮಂಡಿಸಿದ್ದಾರೆ ಎಂದು ಹೇಳಿದರು.
ಕೃತಿಯನ್ನು ಕುರಿತು ಮಾತನಾಡಿದ ರಂಗನಾಥ ಕಂಟನಕುಂಟೆಯವರು, “ಕೃತಿಯ ಒಳಗಿನ ಅನುಭವ, ತಿಳಿವು ಮತ್ತು ದರ್ಶನವನ್ನು ನಾವು ನಮ್ಮದಾಗಿಸಿಕೊಳ್ಳುವುದು ಗೀತ ವಸಂತ ಅವರ ವಿಮರ್ಶೆಯ ಮಾದರಿ. ಬೇರೆ ಬೇರೆ ಸಿದ್ಧಾಂತಗಳ ಹೊರಗೆ ನಿಂತು ಕೃತಿಯ ಅನುಭವ ಲೋಕವನ್ನು ಪ್ರವೇಶಿಸಬೇಕು. ಆ ಮೂಲಕ ನಮ್ಮ ಅನುಭವದ ತಿಳುವಳಿಕೆಯ ಕ್ರಮವನ್ನು ನಾವು ರೂಪಿಸಿ ಕೊಳ್ಳಬೇಕು ಎಂಬ ಉದ್ದೇಶ ಇವರ ಬರಹಗಳಲ್ಲಿ ಕಾಣುತ್ತಿದೆ. ಇದು ವಿಶೇಷವೂ ಹೌದು, ವಿಮರ್ಶಕರ ಮಿತಿಯೂ ಹೌದು. ಲೇಖಕರು ಸಾಹಿತ್ಯ ಕೃತಿಯ ಅನನ್ಯತೆ ಯನ್ನು ಮಾನ್ಯ ಮಾಡುವ, ಸಾಹಿತ್ಯ ಕೃತಿಯ ಅನುಭವವನ್ನೇ ಪ್ರಧಾನವಾಗಿ ನೋಡುವ ಪ್ರಯತ್ನ ಮಾಡಿದ್ದಾರೆ. ಕೋಮಲ ವಾದ ಸೃಜನಶೀಲ ಕೃತಿಗಳನ್ನು ಇಲ್ಲಿನ ಲೇಖಕರು ಅಷ್ಟೇ ಕೋಮಲವಾಗಿ ಎದುರುಗೊಳ್ಳುತ್ತಾರೆ. ಆದರೆ, ವಿಮರ್ಶೆ ಎಂಬುದೇ ಒಂದು ಬಂಡುಕೋರತನ, ಚಕಮಕಿತನ. ಜಾಗತಿಕ ಮಟ್ಟದಲ್ಲಿ, ವಿಮರ್ಶೆಯ ಪ್ರಜಾಸತ್ತಾತ್ಮಕ ಸ್ಪೇಸ್ ಕಳೆದು ಹೋಗುತ್ತಿರುವ ಈ ಕಾಲದಲ್ಲಿ ನಮ್ಮ ನಿಲುವು ಏನು ಎಂಬುದು ಮುಖ್ಯ" ಎಂದು ಹೇಳಿದರು.
ಇದನ್ನೂ ಓದಿ: Tumkur News: ‘ನಿಸ್ವಾರ್ಥ ಸೇವೆ ಮಾಡಿದರೆ ಕೀರ್ತಿ, ಪ್ರಶಸ್ತಿ ಹುಡುಕಿ ಬರುತ್ತವೆ’ : ಎಸ್.ಪಿ.ಚಿದಾನಂದ್ ಅಭಿಮತ
ಲೇಖಕಿ ಗೀತಾ ವಸಂತ ಮಾತನಾಡುತ್ತಾ, ಭಿನ್ನ-ಭಿನ್ನ ಆಲೋಚನಾ ಕ್ರಮಗಳ ಹಿನ್ನೆಲೆಯಿಂದ ಬಂದವರ ಅಭಿಪ್ರಾಯಗಳನ್ನು ಪಡೆಯುವ ಮೂಲಕ ಹೊಸ ಅರಿವನ್ನು ಕಾಣುವುದು ಕಾಣಿಸು ವುದು ಆ ಮೂಲಕ ನಮ್ಮನ್ನ ನಾವು ಹಿಗ್ಗಿಸಿಕೊಳ್ಳುವುದು ಸಾಧ್ಯ ಇದನ್ನು ಇಂದಿನ ಕಾರ್ಯಕ್ರಮ ಆಗುಮಾಡಿದೆ. ಕೋಮಲವಾಗಿರುವುದು ದುರ್ಭಲವಲ್ಲ ಎನ್ನುವುದು ನನ್ನ ಅನುಭವದಲ್ಲಿ ಮೂಡಿದ ಲೋಕದೃಷ್ಟಿ. ಎಲ್ಲವನ್ನೂ ಸಾವಧಾನದಿಂದ, ಸೂಕ್ಷ್ಮತೆಯಿಂದ, ಅಂತಃಕರಣದಿಂದ ಒಳಗೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಸಾಹಿತ್ಯಿಕ ಒಳನೋಟಗಳನ್ನು ಕಾಣಿಸುವ ಪ್ರಯತ್ನ ಈ ಕೃತಿಯಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ, ಪರೀಕ್ಷಾಂಗ ಕುಲಸಚಿವರಾದ ಪ್ರೊ.ಮೋಹನ್ ಎಚ್.ಎಸ್., ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಪ್ರೊ.ನಿತ್ಯಾನಂದ ಬಿ. ಶೆಟ್ಟಿ, ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್.ಎಸ್.ಗುಂಡೂರ, ಪ್ರಾಧ್ಯಾಪಕರಾದ ನಾಗಭೂಷಣ ಬಗ್ಗನಡು, ವಿದ್ವಾಂಸರಾದ ಎಸ್. ಪಿ. ಪದ್ಮಪ್ರಸಾದ್, ಸಾಹಿತಿ ರಂಗಮ್ಮ ಹೊದೆಕಲ್, ಕತೆಗಾರರಾದ ಮಿರ್ಜ ಬಷೀರ್, ಗುರುಪ್ರಸಾದ್ ಕಂಟಲಗೆರೆ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಹಾಜರಿದ್ದು ಅರ್ಥಪೂರ್ಣ ಸಂವಾದಕ್ಕೆ ಸಾಕ್ಷಿಯಾದರು.