Chikkanayakanahalli News: ತಹಸೀಲ್ದಾರ್ ಕಚೇರಿಗೆ ಕಳಂಕ ! ನೂರಾರು ನಕಲಿ ಸಾಗುವಳಿ ಚೀಟಿ ವಿತರಣೆ ಜನರಲ್ಲಿ ಆತಂಕ
ಸಾಗುವಳಿ ಪತ್ರಗಳನ್ನು ಸಾರ್ವಜನಿಕವಾಗಿ ಅರ್ಹ ರೈತರಿಗೆ ವಿತರಿಸದೆ, ನಿರ್ದಿಷ್ಟ ಗುಂಪಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹುಳಿಯಾರು ಹೋಬಳಿಯ ದಸೂಡಿ, ಮರೆನಡು ಗ್ರಾಮದವರು ದಸೂಡಿ ಗ್ರಾಮದ ಸರ್ವೆ ನಂ 6 ರ ಸರಕಾರಿ ಜಾಗಕ್ಕೆ ಸಾಗುವಳಿ ಚೀಟಿ ಪಡೆದು ಆ ಜಮೀನಿನ ಮಾಲಿಕತ್ವಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.
-
ಧನಂಜಯ್
ಚಿಕ್ಕನಾಯಕನಹಳ್ಳಿ: ರಾಜ್ಯದ ಕಂದಾಯ ಇಲಾಖೆಯ ವಿಶ್ವಾಸಾರ್ಹತೆಗೆ ಸವಾಲೆಸೆ ಯುವಂತಹ ಒಂದು ಬೃಹತ್ ವಂಚನೆ ಪ್ರಕರಣ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಮಾಜಿ ತಹಸೀಲ್ದಾರ್ ಅವರ ನಕಲಿ ಸಹಿ ಮತ್ತು ಕಚೇರಿ ಸೀಲ್ ಬಳಸಿ ನೂರಾರು ನಕಲಿ ಸಾಗುವಳಿ ಚೀಟಿಗಳನ್ನು ವಿತರಿಸಿರುವ ಅಘಾತಕಾರಿ ಹಗರಣ ನಡೆದಿದ್ದು ಇದು ತಾಲ್ಲೂಕಿನಾದ್ಯಂತ ಸಾರ್ವಜನಿಕರನ್ನು ಕಾಡುತ್ತಿದೆ. ಇದರ ಹಿಂದೆ ಸಂಘಟಿತ ಅಪರಾಧ ಜಾಲದ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ತಾಲ್ಲೂಕು ಕಚೇರಿಯ ಕೆಲ ಸಿಬ್ಬಂದಿ ಶಾಮೀಲಾಗಿರುವ ಬಲವಾದ ಆರೋಪ ಕೇಳಿ ಬಂದಿದೆ.
ಹಗರಣ ಬಯಲಾಗಿದ್ದು ಹೇಗೆ ?
ಸಾಗುವಳಿ ಪತ್ರಗಳನ್ನು ಸಾರ್ವಜನಿಕವಾಗಿ ಅರ್ಹ ರೈತರಿಗೆ ವಿತರಿಸದೆ, ನಿರ್ದಿಷ್ಟ ಗುಂಪಿಗೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹುಳಿಯಾರು ಹೋಬಳಿಯ ದಸೂಡಿ, ಮರೆನಡು ಗ್ರಾಮದವರು ದಸೂಡಿ ಗ್ರಾಮದ ಸರ್ವೆ ನಂ 6 ರ ಸರಕಾರಿ ಜಾಗಕ್ಕೆ ಸಾಗುವಳಿ ಚೀಟಿ ಪಡೆದು ಆ ಜಮೀನಿನ ಮಾಲಿಕತ್ವಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ದಾಖಲೆಗಳ ಪರಿಶೀಲನೆ ವೇಳೆ ವಿತರಣೆಯಾಗಿರುವ ಚೀಟಿಗಳ ನಮೂನೆ, ಸೀರಿಯಲ್ ಸಂಖ್ಯೆ ಮತ್ತು ವಿಶೇಷವಾಗಿ ತಹಸೀಲ್ದಾರ್ ಅವರ ಸಹಿ ಮತ್ತು ಸೀಲ್ ಸಂಪೂರ್ಣವಾಗಿ ನಕಲಿಯಾಗಿರುವುದು ಧೃಡಪಟ್ಟಿದೆ.
ನಕಲಿ ಪತ್ರಗಳು ಬೇಕೆಂತಲೇ ಹಳೆಯ ದಿನಾಂಕವನ್ನು ಹೊಂದಿರುವುದು ಮತ್ತು ಕಂದಾಯ ಇಲಾಖೆಯ ಯಾವುದೇ ಮೂಲ ದಾಖಲೆ ಅಥವಾ ರಿಜಿಸ್ಟರ್‌ನಲ್ಲಿ ಅವುಗಳ ನಮೂದು ಇಲ್ಲದಿರುವುದು ಧೃಡಪಟ್ಟಿದೆ. ನಮೂನೆ 50 ಮತ್ತು 53 ರ ಅಡಿಯಲ್ಲಿ ಬಗರ್ ಹುಕುಂಗೆ ಅರ್ಜಿ ಸಲ್ಲಿಸಿದ ರೈತರನ್ನು ಗುರಿಯಾಗಿಸಲಾಗಿದೆ. ಆದರೆ ಈ ರೈತರು ನಿಜವಾಗಿಯೂ ವಂಚನೆಯ ಜಾಲಕ್ಕೆ ಬಿದ್ದಿದ್ದಾರೆಯೇ ಅಥವಾ ಅವರೇ ಈ ಅಕ್ರಮದಲ್ಲಿ ಭಾಗಿಯಾಗಿದ್ದಾ ರೆಯೇ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.
ಇದನ್ನೂ ಓದಿ: Chikkanayakanahalli News: ಮಹಿಳಾ ದಿನಾಚರಣೆ ಅನುದಾನ ದುರ್ಬಳಕೆ; ಪುರಸಭಾ ಸದಸ್ಯರಿಂದಲೇ ಮೈಸೂರು ಪ್ರವಾಸ!
ಅಧಿಕಾರಿಗಳೇ ಶಾಮಿಲು ?
ನಕಲಿ ಸಾಗುವಳಿ ಚೀಟಿಗಳ ಸೃಷ್ಟಿಗಾಗಿ 2018 ರಲ್ಲಿ ತಹಸೀಲ್ದಾರ್ ಆಗಿದ್ದ ಶಿವಲಿಂಗ ಮೂರ್ತಿ ಅವರ ನಕಲಿ ಸಹಿ ಮತ್ತು ಕಚೇರಿ ಸೀಲ್ ಬಳಸಲಾಗಿದೆ. ಈ ಕೃತ್ಯದಲ್ಲಿ ನೇರವಾಗಿ ರಿಯಲ್ ಎಸ್ಟೇಟ್ ಏಜೆಂಟರು, ಕೆಲವು ಮಾಜಿ ಕಂದಾಯ ಇಲಾಖೆ ತಾತ್ಕಾಲಿಕ ಸಿಬ್ಬಂದಿ ಗಳು ಮತ್ತು ಅವರ ಜೊತೆ ಪ್ರಸ್ತುತ ಕಚೇರಿಯಲ್ಲಿರುವ ಕೆಲವೇ ಕೆಲವು ಸರಕಾರಿ ನೌಕರರು ಶಾಮೀಲಾಗಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಸಾಮಾಜಿಕ ಹೋರಾಟಗಾರ ನಿರುವ ಗಲ್ ಗೋಪಿಕೃಷ್ಣ ಪ್ರತಿಕ್ರಿಯಿಸಿ ತಹಸೀಲ್ದಾರ್ ಕಚೇರಿಯೊಳಗಿನವರ ನೆರವಿಲ್ಲದೆ ಈ ಹಗರಣ ಮಾಡಲು ಸಾಧ್ಯವಿಲ್ಲ. ನಕಲಿ ಸಾಗುವಳಿ ಚೀಟಿ ಪಡೆದವರು ಸಹ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಹಲವು ದಾಖಲೆಗಳನ್ನು ಚಿಕ್ಕನಾಯಕನಹಳ್ಳಿ ಪೊಲೀಸರು ಪರಿಶೀಲಿಸಿದ್ದು ಅಂತರಿಕ ತನಿಖೆ ನಡೆಯುತ್ತಿದೆ. ಈ ಗಂಭೀರ ಪ್ರಕರಣವು ಕಂದಾಯ ಇಲಾಖೆಯಲ್ಲಿನ ವಿಶ್ವಾಸಾರ್ಹತೆಯನ್ನು ಕುಗ್ಗಿಸಿದ್ದ ಸಾರ್ವಜನಿಕರಲ್ಲಿ ದೊಡ್ಡ ಆತಂಕವನ್ನು ಸೃಷ್ಟಿಸಿದೆ. ನಕಲಿ ಪತ್ರಗಳ ಜಾಲವನ್ನು ಬೇಧಿಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಮತ್ತು ಸರಕಾರಿ ಭೂಮಿಯನ್ನು ರಕ್ಷಿಸಲು ಸಮಗ್ರ ಪರಿಶೀಲನೆ ಅನಿವಾರ್ಯವಾಗಿದೆ.