ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ABVP Protest: ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಗ್ರಹ; ಮಧುಗಿರಿಯಲ್ಲಿ ಎಬಿವಿಪಿ ಪ್ರತಿಭಟನೆ

Madhugiri News: ಮಧುಗಿರಿಯಲ್ಲಿ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು, ಮಧುಗಿರಿ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕಾತಿಗೆ ಆಗ್ರಹ; ಮಧುಗಿರಿಯಲ್ಲಿ ಎಬಿವಿಪಿ ಪ್ರತಿಭಟನೆ

-

Prabhakara R Prabhakara R Sep 26, 2025 7:57 PM

ಮಧುಗಿರಿ: 2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ಸಂಬ೦ಧಿಸಿದ೦ತೆ ಉಚ್ಚನ್ಯಾಯಾಲಯದ ಮಧ್ಯಂತರ ಆದೇಶದ ಅನ್ವಯ ಕ್ರಮ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಎಬಿವಿಪಿಯಿಂದ ಮಧುಗಿರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ವಿದ್ಯಾರ್ಥಿಗಳು ರಾಜ್ಯದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು, ಮಧುಗಿರಿ ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಮನವಿ ಪತ್ರದಲ್ಲಿ ಏನಿದೆ?

ಕರ್ನಾಟಕ ರಾಜ್ಯದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ 432 ಪದವಿ ಕಾಲೇಜುಗಳಲ್ಲಿ 6,000 ಕಾಯಂ ಉಪನ್ಯಾಸಕರಲ್ಲಿ 3000 ಕ್ಕಿಂತ ಹೆಚ್ಚು ಉಪನ್ಯಾಸಕರು ಈಗಾಗಲೇ ನಿವೃತ್ತಿ ಪಡೆದಿದ್ದು, ಇನ್ನು ಕೇವಲ 3000 ಕಾಯಂ ಉಪನ್ಯಾಸಕರೊಂದಿಗೆ 12,000 ಅತಿಥಿ ಉಪನ್ಯಾಸಕರ ಸೇವಾ ನೆರವಿನಿಂದ ಪದವಿ ತರಗತಿಗಳು ಜರುಗುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಕರ್ನಾಟಕದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕು ಮುಂದುವರೆದು ಗುಣಮಟ್ಟದ ಶಿಕ್ಷಣ ನೀಡುವಿಕೆಯ ಖಾತರಿಪಡಿಸಿಕೊಳ್ಳುವುದು ಘನ ಸರ್ಕಾರದ ಕರ್ತವ್ಯ. ಆದರೆ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮರೆತಂತಿರುವ ಘನ ಸರ್ಕಾರಗಳು ಪದವಿ ಹಂತದಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಯಂ ಉಪನ್ಯಾಸಕರ/ಅರ್ಹ ಉಪನ್ಯಾಸಕರ ನೇಮಕಾತಿಯಲ್ಲಿ ದೃಢವಾದ ನಿಲುವು ತೆಗೆದುಕೊಳ್ಳದಿರುವುದು ಕಳವಳಕಾರಿಯಾದ ಸ೦ಗತಿ.

2025-26 ನೇ ಸಾಲಿನಲ್ಲಿ ಖಾಲಿ ಇರುವ 12,000 ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು 55,000 ಅರ್ಜಿಗಳು ಸಲ್ಲಿಕೆ ಆಗಿರುತ್ತವೆ. ಈಗಾಗಲೇ ನಮ್ಮ ಎಲ್ಲಾ ವಿಶ್ವವಿದ್ಯಾಲಯಗಳ ತರಗತಿಗಳು ಪ್ರಾರಂಭವಾಗಿ 2 ತಿಂಗಳು ಕಳೆದರೂ ಸಹಿತ ಇಲ್ಲಿಯವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ಆಗದೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯ ತರಗತಿಗಳು ನಡೆಯುತ್ತಿಲ್ಲ, ರಾಜ್ಯದ ಪದವಿ ಕಾಲೇಜುಗಳಿಗೆ ಕಾಯಂ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುವಷ್ಟು ಯೋಗ್ಯತೆ ರಾಜ್ಯ ಸರ್ಕಾರಕ್ಕೆ ಇಲ್ಲದಿದ್ದರೂ ಕನಿಷ್ಠಪಕ್ಷ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಅರ್ಹ ಅತಿಥಿ ಉಪನ್ಯಾಸಕರ ನೇಮಕಾತಿಗೆ ತಕ್ಷಣ ಕ್ರಮ ವಹಿಸಬೇಕೆಂದು ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.



ಇದೇ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಡ-ಮಾಧ್ಯಮ ವರ್ಗದ ಅಥವಾ ಕೂಲಿ ಕಾರ್ಮಿಕರ ಮಕ್ಕಳು, ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಸುಧಾರಣೆಗೆ ಸರಕಾರಿ ಪದವಿ ಕ್ಯಾಂಪಸ್ ಗಳಲ್ಲಿ ಸಮರ್ಪಕ ಗುಣಮಟ್ಟದ ಶಿಕ್ಷಣ ನೀಡುವುದು ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಗಳ ಜವಾಬ್ದಾರಿ ಆಗಿರುತ್ತದೆ.

ಒಟ್ಟಾರೆಯಾಗಿ ಗಮನಿಸುವುದಾದರೆ, ರಾಜ್ಯದ ಪದವಿ ಕಾಲೇಜುಗಳಲ್ಲಿ ಖಾಯಂ ಪ್ರಾಂಶುಪಾಲರ ನೇಮಕಾತಿವಿಲ್ಲದೆ, ಕಾಯಂ ಉಪನ್ಯಾಸಕರ ನೇಮಕಾತಿವಿಲ್ಲದೆ, ಕನಿಷ್ಠಪಕ್ಷ ಅರ್ಹ ಅತಿಥಿ ಉಪನ್ಯಾಸಕರು ಇಲ್ಲದೆ ಸಂಪೂರ್ಣ ಶೈಕ್ಷಣಿಕ ವ್ಯವಸ್ಥೆಯೇ ಬುಡ ಮೇಲಾಗಿರುವ ಸ೦ದರ್ಭದಲ್ಲಿ, ವಿಶ್ವವಿದ್ಯಾಲಯಗಳಿಂದ ಹೊರ ಬರುತ್ತಿರುವ ಪದವೀಧರರ ಭವಿಷ್ಯ ಅತಂತ್ರವಾಗಿದೆ ಹಾಗೂ ಇನ್ನು ಕೆಲವೇ ವರ್ಷಗಳಲ್ಲಿ ಸರ್ಕಾರಿ ಪದವಿ ಕಾಲೇಜುಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸರ್ಕಾರ ಪಣ ತೊಟ್ಟಂತಿರುವುದು ಈ ನಾಡಿನ ಶೈಕ್ಷಣಿಕ ವ್ಯವಸ್ಥೆಗೆ ಒದಗಿದ ದುರ್ದೈವ ಪರಿಸ್ಥಿತಿ. ಆದ್ದರಿಂದ ಪದವಿ ಶಿಕ್ಷಣವನ್ನು ಬಲಪಡಿಸಿ, ಶೈಕ್ಷಣಿಕ ಕ್ಷೇತ್ರವನ್ನು ಆದ್ಯತಾ ವಲಯವೆಂದು ಪರಿಗಣಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು ರಾಜ್ಯದ ವಿದ್ಯಾರ್ಥಿಗಳ ಹಿತ ಕಾಯಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಗ್ರಹಿಸುತ್ತದೆ ಎಂದು ಮನವಿ ಪತ್ರದಲ್ಲಿ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್‌ ಎಚ್‌ಕೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | SSC Recruitment 2025: ದ್ವಿತೀಯ ಪಿಯುಸಿ ಪಾಸಾದವರಿಗೆ ಗುಡ್‌ನ್ಯೂಸ್‌; 7,565 ಕಾನ್‌ಸ್ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಬೇಡಿಕೆಗಳು:

  • ಈಗಾಗಲೇ 20,000 ಕ್ಕಿಂತ ಹೆಚ್ಚು ಅರ್ಹ ಅಭ್ಯರ್ಥಿಗಳು ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದು ಸರ್ಕಾರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ತಯಾರಿದ್ದಾರೆ, ಆದ್ದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲಾ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.
  • ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಹಲವಾರು ಕಾರಣಗಳಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ, ಈ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
  • ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದನ್ನು ಖಾತರಿಪಡಿಸಿಕೊಳ್ಳುವ ದೃಷ್ಟಿಯಿಂದ ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರ ಆಸಕ್ತಿ ವಹಿಸಬೇಕು.