Chikkanayakanahalli News: ಉಪ್ಪಾರ ನಿಗಮದ ಯೋಜನೆಗಳ ಪ್ರಕಟ
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೇರಿದಂತೆ ಉನ್ನತ ವೃತ್ತಿಪರ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಶೈಕ್ಷಣಿಕ ಸಾಲ ನೀಡ ಲಾಗುತ್ತದೆ. ರೈತರ ಅನುಕೂಲಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಬೊರ್‌ವೇಲ್ ಕೊರೆಸಲು ಸಹಾಯಧನದ ನೆರವು ನೀಡಲಾಗುವುದು ಎಂದರು
-
ಚಿಕ್ಕನಾಯಕನಹಳ್ಳಿ : ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರಾದ ಭರಮಣ್ಣ ಉಪ್ಪಾರ ಮಾಜಿ ಜಿ.ಪಂ.ಸದಸ್ಯ ಕಲ್ಲೇಶ್ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉಪ್ಪಾರ ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಜಾರಿಗೆ ತಂದಿರುವ ವಿವಿಧ ಮಹತ್ವದ ಯೋಜನೆಗಳ ಕುರಿತು ಸಮಗ್ರ ಮಾಹಿತಿಯನ್ನು ಪ್ರಕಟಿಸಿದರು.
ಈ ಯೋಜನೆಗಳು ಸಮುದಾಯದ ಜನರ ಆರ್ಥಿಕ ಸಬಲೀಕರಣ, ಸ್ವಯಂ ಉದ್ಯೋಗ ಮತ್ತು ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡಲಿವೆ ಎಂದು ತಿಳಿಸಿದರು. ನಿಗಮವು ಸ್ವಯಂ ಉದ್ಯೋಗ ಮತ್ತು ಆದಾಯ ಸೃಷ್ಟಿಗೆ ವಿಶೇಷ ಗಮನ ಹರಿಸಿದೆ. ಸಣ್ಣ ಪ್ರಮಾಣದ ವ್ಯಾಪಾರ ಆರಂಭಿಸಲು ಅಥವಾ ವಿಸ್ರರಿಸಲು ಸಾಲ ಸೌಲಭ್ಯ ಒದಗಿಸಲಾಗುವುದು. ಸ್ವಾವಲಂಬಿ ಸಾರಥಿ ಯೋಜನೆಯಡಿ ಉದ್ಯೋಗದ ನಿಮಿತ್ತ ವಾಹನಗಳನ್ನು ಖರೀದಿಸಲು ಸಹಾಯಧನ ಮತ್ತು ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸೇರಿದಂತೆ ಉನ್ನತ ವೃತ್ತಿಪರ ಕೋರ್ಸ್ಗಳನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಶೈಕ್ಷಣಿಕ ಸಾಲ ನೀಡ ಲಾಗುತ್ತದೆ. ರೈತರ ಅನುಕೂಲಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಬೊರ್‌ವೇಲ್ ಕೊರೆಸಲು ಸಹಾಯಧನದ ನೆರವು ನೀಡಲಾಗುವುದು ಎಂದರು. ಈ ಎಲ್ಲಾ ಯೋಜನೆಗಳನ್ನು ನಿಗಮವು ಪಾರದರ್ಶಕವಾಗಿ ಜಾರಿಗೊಳಿಸಲಿದ್ದು, ಅರ್ಹ ಉಪ್ಪಾರ ಸಮುದಾಯದ ಜನರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣವೇ ನಿಗಮದ ಪ್ರಮುಖ ಗುರಿಯಾಗಿದೆ. ಅರ್ಹತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಉಪ್ಪಾರ ಅಭಿವೃದ್ದಿ ನಿಗಮದ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಲು ಅಥವಾ ಜಿಲ್ಲಾ ಮಟ್ಟದ ನಿಗಮದ ಕಚೇರಿಯನ್ನು ಸಂಪರ್ಕಿಸಲು ಕೋರಿದರು.
ಇದನ್ನೂ ಓದಿ: Chikkanayakanahalli News: ಅಂಬೇಡ್ಕರ್ ಆದರ್ಶ ಅಳವಡಿಕೆಗೆ ಕರೆ
ಮಾಜಿ ಜಿ.ಪಂ. ಸದಸ್ಯ ಕಲ್ಲೇಶ್ ಮಾತನಾಡಿ ಸಮುದಾಯದ ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಮಕ್ಕಳು ಐಎಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳಿಗೆ ತಯಾರಿ ನಡೆಸಲು ಅನುಕೂಲವಾಗು ವಂತೆ ಬೆಂಗಳೂರಿನಲ್ಲಿ ಬೃಹತ್ ವಿದ್ಯಾರ್ಥಿ ಭವನದ ನಿರ್ಮಾಣದ ಕಾರ್ಯಭರದಿಂದ ಸಾಗುತ್ತಿದೆ. ಈ ಮಹತ್ವದ ಕಾರ್ಯವು ಪೂಜ್ಯ ಡಾ. ಪುರುಷೋತ್ತಮಾನಂದಪುರಿ ಸ್ವಾಮಿಜಿಯವರ ನೇತೃತ್ವ ದಲ್ಲಿ ನಡೆಯುತ್ತಿದೆ.
ಇದು ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ವಸತಿ ಮತ್ತು ಅಧ್ಯಯನ ಸೌಲಭ್ಯಗಳನ್ನು ಒದಗಿಸಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನೆರವಾಗಲಿದೆ.
ಶಾಸಕ ಪುಟ್ಟರಂಗಶೆಟ್ಟಿಯವರು ಈ ಭವನ ನಿರ್ಮಾಣ ಕಾರ್ಯದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿ ಸಮುದಾಯದ ಶೈಕ್ಷಣಿಕ ಅಗತ್ಯಗಳಿಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ ಕಲ್ಲೇಶ್ ಅವರು, ಹಿಂದುಳಿದ ಉಪ್ಪಾರ ಸಮುದಾಯಕ್ಕೆ ಪ್ರಬಲ ರಾಜಕೀಯ ಧ್ವನಿ ಬೇಕಾಗಿದೆ. ಅನುಭವಿ ನಾಯಕರಾದ ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಿದಾಗ ಮಾತ್ರ ಸಮುದಾಯವು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿದರು.