ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಕೆಪಿಎಸ್ಸಿ ಹಗರಣಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಶಾಸಕ ಎಂ.ಟಿ. ಕೃಷ್ಣಪ್ಪ

ದೇಶದ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಅನ್ವಯವಾಗಬೇಕು ಎಂದು ಪ್ರತಿಪಾದಿಸಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು ಸಂಸತ್ತಿನಲ್ಲಿ ಸತತ ಏಳು ದಿನಗಳ ಕಾಲ ಹೋರಾಟ ನಡೆಸಿತ್ತು. ಬಳಿಕ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿ ಆರೋಪಿ ಗಳನ್ನು ಬಂಧಿಸಿತ್ತು ಹಾಗೂ ಸಂಬಂಧಪಟ್ಟ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು

ಗುಬ್ಬಿ: ಕೆಪಿಎಸ್ಸಿ ಹಗರಣದ ನೈತಿಕ ಹೊಣೆಯನ್ನು ಮುಖ್ಯಮಂತ್ರಿ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ.ಕೃಷ್ಣಪ್ಪ(MLA M T Krishnappa) ಆಗ್ರಹಿಸಿದರು.

ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯ ಹುರುಳುಗೆರೆ ಗ್ರಾಮದಲ್ಲಿ ರಸ್ತೆ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗೆ ಹಾಗೂ ಸಿ.ಎಸ್.ಪುರ ಗ್ರಾಮದ ಕೆರೆ ಬಲದಂಡೆ ಕಾಲುವೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ದೇಶದ ಎಲ್ಲ ನಾಗರಿಕರಿಗೂ ಒಂದೇ ಕಾನೂನು ಅನ್ವಯವಾಗಬೇಕು ಎಂದು ಪ್ರತಿಪಾದಿಸಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷವು ಸಂಸತ್ತಿನಲ್ಲಿ ಸತತ ಏಳು ದಿನಗಳ ಕಾಲ ಹೋರಾಟ ನಡೆಸಿತ್ತು. ಬಳಿಕ ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿ ಆರೋಪಿಗಳನ್ನು ಬಂಧಿಸಿತ್ತು ಹಾಗೂ ಸಂಬಂಧಪಟ್ಟ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು ಎಂದು ನೆನಪಿಸಿದರು.

ಇದನ್ನೂ ಓದಿ: Gubbi News: ದುಡಿಮೆಯ ಒಂದಂಶ ಬಡ ಮಕ್ಕಳ ಶಿಕ್ಷಣಕ್ಕೆ : ಕಳ್ಳಿಪಾಳ್ಯ ಲೋಕೇಶ್

ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಕೆಪಿಎಸ್ಸಿ ಹಗರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಕೆಪಿಎಸ್ಸಿ ಇಲಾಖೆಯ ಹೊಣೆಗಾರಿಕೆ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಅವರು ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಭ್ರಷ್ಟಾಚಾರದ ಆರೋಪಗಳಿಂದ ಕಳಂಕಿತವಾಗಿರುವ ಕೆಪಿಎಸ್ಸಿಯನ್ನು ವಿಸರ್ಜಿಸಿ, ಪಾರದರ್ಶಕ ಹಾಗೂ ವಿಶ್ವಾಸಾರ್ಹ ರೀತಿಯಲ್ಲಿ ಹೊಸ ಆಯೋಗವನ್ನು ರಚಿಸಿ ನೇಮಕಾತಿ ಪ್ರಕ್ರಿಯೆ ನಡೆಸ ಬೇಕು. ಇದರಿಂದ ಮಾತ್ರ ಉದ್ಯೋಗಾಕಾಂಕ್ಷಿಗಳ ವಿಶ್ವಾಸವನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥ ಆಡಳಿತಗಾರರೆಂದು ಭಾವಿಸಿದ್ದೆ. ಆದರೆ ಸಚಿವ ಸಂಪುಟ ವಿಸ್ತರಣೆಯ ವಿಚಾರವಾಗಿ ಹಲವು ದಿನಗಳಿಂದ ದೆಹಲಿಯಲ್ಲಿ ಹೈಕಮಾಂಡ್ ಮನೆ ಬಾಗಿಲು ಕಾಯುತ್ತಿರುವುದು ದುರದೃಷ್ಟಕರ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣ ವಾಗಿದ್ದರೂ ಅದನ್ನು ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳುವ ಬದಲು ಆಡಳಿತಾರೂಢ ನಾಯಕರು ರಾಜಕೀಯ ಲೆಕ್ಕಾಚಾರದಲ್ಲೇ ತೊಡಗಿದ್ದಾರೆ ಎಂದು ಟೀಕಿಸಿದರು.

ತುರುವೇಕೆರೆ ತಾಲ್ಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಆಗ್ರಹಿಸಿ ಆಗಸ್ಟ್‌ 10ರಂದು ತುರುವೇಕೆರೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜೀವ್ ಕೃಷ್ಣಪ್ಪ, ನಂಜೇಗೌಡ, ಶಂಕರ್ ಲಿಂಗೇಗೌಡ, ಲೋಕೋಪಯೋಗಿ ಇಲಾಖೆ ಅಭಿಯಂತರರಾದ ಯೋಗೇಶ್ ಹಾಗೂ ಧನುಷ್, ಗುತ್ತಿಗೆದಾರರಾದ ಸಂತೋಷ್, ನರಸೇಗೌಡ, ಜೆಡಿಎಸ್ ಘಟಕದ ಹೋಬಳಿ ಅಧ್ಯಕ್ಷ ಜಗದೀಶ್, ನವೀನ್ ಕುಮಾರ್, ಗೋವಿಂದರಾಜು, ಅಣ್ಣೇಗೌಡ, ಚಂದ್ರು, ಹನುಮಂತೇಗೌಡ, ಶರತ್ ತಾಳ್ಕೆರೆ, ಸಂತೋಷ್ ಜಾಲಿಪಾಳ್ಯ, ಮಹಾಲಕ್ಷ್ಮಿ ಲಕ್ಕೇಗೌಡ, ಹರಿಣಿ ಶ್ರೀನಿವಾಸ್, ಮಾದೇವಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.