ಗುಬ್ಬಿ: ಕಳೆದೆರಡು ವರ್ಷದಿಂದ ಯಾವುದೇ ಅಬಿವೃದ್ದಿ ಸಾಕ್ಷಿ ಗುಡ್ಡೆ ಇಲ್ಲದ ಕಾಂಗ್ರೆಸ್ ಸರ್ಕಾರ ಕೇವಲ ಕುರ್ಚಿ ಉಳಿಸಿಕೊಳ್ಳಲು ಹಾಗೂ ಕಸಿದುಕೊಳ್ಳಲು ಸರ್ಕಸ್ ಮಾಡುತ್ತಿದೆ. ಈ ಮಧ್ಯೆ ಸ್ಥಳೀಯ ಚುನಾವಣೆ ನಡೆಸುವ ಧೈರ್ಯವಿಲ್ಲದಂತಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ( Nikhil Kumaraswamy) ವ್ಯಂಗ್ಯವಾಡಿದರು.
ತಾಲ್ಲೂಕಿನ ಕಡಬ ಹೋಬಳಿ ಬೆಲವತ್ತ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಭದ್ರಕಾಳಮ್ಮ, ಶ್ರೀ ವೀರಭದ್ರಸ್ವಾಮಿ ಮತ್ತು ಬಿಸಿಲು ಮಾರಮ್ಮದೇವಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗ್ಯಾರಂಟಿ ಯೋಜನೆ ಹೆಸರಲ್ಲಿ ಸ್ವೇಚ್ಛಾಚಾರ ಲೂಟಿ ನಡೆದಿದೆ. ಉಳಿದ ಎರಡೂವರೆ ವರ್ಷದಲ್ಲಿ ಅಭಿವೃದ್ದಿ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಜನರಲ್ಲಿ ಇಲ್ಲವಾಗಿದೆ ಎಂದು ಕುಟುಕಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರ ಉಳಿಸಿಕೊಳ್ಳಲು ಕಿತ್ತಾಟ ನಡೆಸುತ್ತಿರುವುದು ಜನರಿಗೆ ತಿಳಿದಿದೆ. ಅಭಿವೃದ್ದಿ ಎಂಬುದು ಶೂನ್ಯ. ಹತ್ತು ರೂಪಾಯಿ ಕೂಡಾ ಕ್ಷೇತ್ರಗಳಿಗೆ ನೀಡಲಾಗುತ್ತಿಲ್ಲ. ಹತ್ತು ಕೋಟಿ ಎಂದು ಹೇಳಿದ್ದಷ್ಟೇ ಇನ್ನೂ ಯಾವ ಕೆಲಸಕ್ಕೂ ಚಾಲನೆ ಸಿಕ್ಕಿಲ್ಲ. ಆದರೆ ಜನರಿಗೆ ಮಂಕು ಬೂದಿ ಎರಚಲು ಕೇವಲ ಭರವಸೆ ನೀಡುತ್ತಾ ಕಾಂಗ್ರೆಸ್ ಸರ್ಕಾರ ಘೋಷಣೆಯ ಸರ್ಕಾರ ಎಂದು ಲೇವಡಿ ಮಾಡಿದರು.
ಧಾರ್ಮಿಕ ಕಾರ್ಯಕ್ರಮ ಪಕ್ಷಾತೀತವಾಗಿ ನಡೆದಿದೆ. ಬೆಲವತ್ತ ಗ್ರಾಮ ದೇವೇಗೌಡರು ಹಾಗೂ ಕುಮಾರಣ್ಣ ಅವರ ಅಭಿಮಾನಿಗಳ ಗ್ರಾಮವಾಗಿದೆ. ಇಲ್ಲಿನ ಅಭಿಮಾನಕ್ಕೆ ಕುಮಾರಣ್ಣ ದೆಹಲಿ ಯಲ್ಲಿ ಒತ್ತಡವಿದ್ದರೂ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ ಎಂದ ಅವರು ಜೆಡಿಎಸ್ ಪಕ್ಷದ ಕಾರ್ಯ ಕರ್ತರು ಗುಬ್ಬಿ ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟನೆ ಮಾಡುತ್ತಿದ್ದಾರೆ. ಈ ಹಿಂದೆ ನಾಗರಾಜು ಅವರಿಗೆ 40 ಸಾವಿರ ಮತ ನೀಡಿದ್ದಾರೆ. ಯಾರೋ ಒಬ್ಬರಿಂದ ಪಕ್ಷ ನಡೆಯಲ್ಲ. ಸದೃಢ ಕಾರ್ಯ ಕರ್ತರು ಇಂದಿಗೂ ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಕೆಲವು ಮಾತಿಗೆ ಉತ್ತರ ಕೊಡುವ ಸಮಯ ಸಮೀಪಿಸುತ್ತಿದೆ. ಮೈತ್ರಿ ಎಲ್ಲಡೆ ಬಲಗೊಂಡಿದೆ. ಇಲ್ಲೂ ಸಹ ನಾಗರಾಜು ಹಾಗೂ ಬಿಜೆಪಿ ಮುಖಂಡರು ಓಡಾಟ ನಡೆಸಿದ್ದಾರೆ. ಟಿಕೆಟ್ ವಿಚಾರ ವರಿಷ್ಠರು ಚುನಾವಣಾ ಸಮಯದಲ್ಲಿ ಹೇಳುತ್ತಾರೆ ಎಂದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಬೆಲವತ್ತ ಗ್ರಾಮದಲ್ಲಿ ದೇವೇಗೌಡರು ಹಾಗೂ ಕುಮಾರಣ್ಣ ಅವರ ಅಭಿಮಾನಿಗಳು ಹೆಚ್ಚಿದ್ದಾರೆ. ಈ ಹಿಂದೆ ದೇವೇಗೌಡರು ಈ ಗ್ರಾಮಕ್ಕೆ ಬಂದಿದ್ದರು. ಈ ಬಾರಿಯೂ ಅಪ್ಪಾಜಿ ಅವರನ್ನು ಕರೆತರಲು ಪ್ರಯತ್ನ ನಡೆಯಿತು. ಆರೋಗ್ಯ ಸಮಸ್ಯೆ ಹಿನ್ನಲೆ ನಿಖಿಲ್ ಅವರೇ ಆಗಮಿಸಿದ್ದಾರೆ. ಇಲ್ಲಿನ ರೈತರ ಅಭಿಮಾನಕ್ಕೆ ತಕ್ಕಂತೆ ದೇವೇಗೌಡರ ಕುಟುಂಬ ಗ್ರಾಮದ ಮೇಲೆ ಪ್ರೀತಿ ಇಟ್ಟುಕೊಂಡಿದೆ. ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಆಶೀರ್ವಾದ ಮಾಡುವ ಗ್ರಾಮಕ್ಕೆ ಕುಮಾರಣ್ಣ ಮುಂದಿನ ದಿನಗಳಲ್ಲಿ ಆಗಮಿಸುತ್ತಾರೆ ಎಂದರು.
ಗುಬ್ಬಿ ಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಪಕ್ಷದ ಕಾರ್ಯಕರ್ತರಾದ ರಘು ಶಿವಾನಂದ್, ಶಶಿ , ಕೆಂಪರಾಜು, ದಿನೇಶ್, ಸೇರಿದಂತೆ ಅವರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಬಿ.ಕೋಡಿಹಳ್ಳಿ ಮಠದ ಶ್ರೀ ಬಸವ ಬೃಂಗೇಶ್ವರ ಸ್ವಾಮೀಜಿ, ತೆವಡೇಹಳ್ಳಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ .ಸಿ.ಅಂಜಿನಪ್ಪ, ಮುಖಂಡರಾದ ಕಳ್ಳಿಪಾಳ್ಯ ಲೋಕೇಶ್, ಜಿ.ಎನ್.ಬೆಟ್ಟಸ್ವಾಮಿ, ಜಿ.ಡಿ.ಸುರೇಶಗೌಡ, ಸಿದ್ದಗಂಗಮ್ಮ, ಜಿಪಂ ಮಾಜಿ ಸದಸ್ಯೆ ಗೌರಮ್ಮ, ವೀರೇಶ್ ಇತರರು ಇದ್ದರು.