ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dasoha Day: ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು: ಸಚಿವ ಸೋಮಣ್ಣ

Dasoha Day: ನಡೆದಾಡುವ ದೇವರು ಈ ರಾಷ್ಟ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಸೂರ್ಯ ಚಂದ್ರ ಇರೋವರೆಗೂ ಇಡೀ ಭೂಪಟದಲ್ಲಿ ಶಿವಕುಮಾರ ಶ್ರೀಗಳ ಹೆಸರು ಇರುತ್ತದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರು: ಸಚಿವ ಸೋಮಣ್ಣ

-

Prabhakara R
Prabhakara R Jan 21, 2025 5:01 PM

ತುಮಕೂರು: ತುಮಕೂರಿನ ರೈಲ್ವೆ ನಿಲ್ದಾಣಕ್ಕೆ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಶ್ರೀಗಳ ಹೆಸರಿಡಲು ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ. ಸದ್ಯದಲ್ಲೇ ಅಧಿಕೃತವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅದಕ್ಕೆ ಚಾಲನೆ ಕೊಡುತ್ತಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಡೆದಾಡುವ ದೇವರು ಈ ರಾಷ್ಟ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ದನಿ ಇಲ್ಲದವರಿಗೆ ದನಿಯಾಗಿ, ತ್ರಿವಿಧ ದಾಸೋಹ ಸೇವೆ ಮಾಡಿದ್ದಾರೆ. ಇಡೀ ವಿಶ್ವಕ್ಕೆ ಮಾದರಿಯಾಗಿ ದೇಹ ತ್ಯಾಗ ಮಾಡಿದ್ದಾರೆ. ಹೀಗಾಗಿ ಸೂರ್ಯ ಚಂದ್ರ ಇರೋವರೆಗೂ ಇಡೀ ಭೂಪಟದಲ್ಲಿ ಶಿವಕುಮಾರ ಶ್ರೀಗಳ ಹೆಸರು ಇರುತ್ತದೆ. ಕಸ್ತೂರಿ ಮಾತ್ರೆ ಮಾರುತಿದ್ದ ಈ ಸಾಮಾನ್ಯ ಸೋಮಣ್ಣ ಈ ಮಟ್ಟಕ್ಕೆ ಬೆಳೆಯಲು ಸಿದ್ದಗಂಗಾ ಮಠ ಕಾರಣ ಎಂದರು.

ದಾಸೋಹ ದಿನ ಎಂದು ನಮ್ಮ ಸರಕಾರ ಘೋಷಣೆ ಮಾಡಿತ್ತು. ಆದರೆ ಆ ಘೋಷಣೆ ಘೋಷಣೆ ಆಗಿಯೇ ಉಳಿದಿದೆ. ಆದರೆ ಈ ಸರಕಾರ ಅದನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿಲ್ಲ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ , ಜಿ.ಪರಮೇಶ್ವರ್, ಕೆ. ಎನ್. ರಾಜಣ್ಣಗೆ ಪತ್ರ ಬರೆಯುತ್ತೇನೆ. ದಾಸೋಹ ದಿನವನ್ನು ಇಡೀ ರಾಜ್ಯದಲ್ಲಿ ಆಚರಿಸುವಂತೆ ಸರಕಾರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಸದ್ಯ ಮೂರು ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ನಡೆದಾಡುವ ದೇವರ ಹೆಸರು ತುಮಕೂರು ರೈಲ್ವೆ ನಿಲ್ದಾಣಕ್ಕೆ ಇಡಲಾಗುತ್ತದೆ ಎಂದರು.

ದಾಸೋಹ ದಿನ ಅರ್ಥಪೂರ್ಣವಾಗಿ ಆಚರಣೆಯಾಗಬೇಕು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

Vijayendra

ತುಮಕೂರು: ನಡೆದಾಡುವ ದೇವರೆಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ಧರಾಗಿದ್ದ, ಲಕ್ಷಾಂತರ ಮಕ್ಕಳಿಗೆ ದಾರಿದೀಪವಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವೆಂದು ಘೋಷಣೆ ಮಾಡಲಾಗಿದ್ದು, ಸರ್ಕಾರ ಈ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದ ಸಿದ್ದಗಂಗಾ ಮಠಕ್ಕೆ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಪೇಕ್ಷೆಯಂತೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರೀಗಳ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನ ಎಂದು ಘೋಷಣೆ ಮಾಡಿದ್ದರು. ಆದರೆ ದಾಸೋಹ ದಿನ ಘೋಷಣೆಗೆ ಮಾತ್ರ ಸೀಮೀತವಾಗಿದೆ. ಇದನ್ನು ಘೋಷಣೆ ಮಾಡಿದರೆ ಮಾತ್ರ ಸಾಕಾಗಲ್ಲ, ಅರ್ಥಪೂರ್ಣವಾಗಿ ಆಚರಿಸಬೇಕು. ಈ ಕಾರ್ಯ ಆಗಬೇಕು ಎಂಬುದು ಕೋಟ್ಯಂತರ ಭಕ್ತರ ಮನದಲ್ಲಿದೆ. ಮುಂದಿನ ದಿನಗಳಲ್ಲಿ ದಾಸೋಹ ದಿನ ಆಚರಣೆಯಾಗುತ್ತದೆ ಎನ್ನುವ ವಿಶ್ವಾಸ ತಮಗಿದೆ ಎಂದರು.

ಸರ್ಕಾರದ ಬಗ್ಗೆ ಟೀಕೆ ಮಾಡಲು ನಾನು ಹೋಗುವುದಿಲ್ಲ. ಭಗವಂತ ಯಾವಾಗ ಬುದ್ಧಿ ಕೊಡುತ್ತಾನೋ ಆಗಲೇ ದಾಸೋಹ ದಿನ ಅರ್ಥಪೂರ್ಣವಾಗಿ ಆಚರಣೆ ಮಾಡಲಿ ಎಂದು ಅವರು ಹೇಳಿದರು.

ಶ್ರೀಗಳ ಪುತ್ಥಳಿ ನಿರ್ಮಾಣ ಶೀಘ್ರ ಆಗಲಿ

ಶ್ರೀಗಳ ಹುಟ್ಟೂರಾದ ವೀರಾಪುರದಲ್ಲಿ ಅವರ 111 ಅಡಿ ಎತ್ತರದ ಪ್ರತಿಮೆ ನಿರ್ಮಿಸಲು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಹಣ ನೀಡಿದ್ದರು. ಆ ಕೆಲಸ ಇನ್ನೂ ಪೂರ್ಣವಾಗದೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಗಮನ ಹರಿಸಿ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ವೀರಾಪುರದಲ್ಲಿ ಭಕ್ತರ ಒತ್ತಾಸೆಯಂತೆ ಆದಷ್ಟು ಬೇಗ ಪುತ್ಥಳಿ ನಿರ್ಮಾಣ ಕಾರ್ಯವನ್ನು ಸರ್ಕಾರ ಪೂರ್ಣಗೊಳಿಸಲಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಸಿದ್ದಗಂಗಾ ಆಸ್ಪತ್ರೆ ನಿರ್ದೇಶಕ ಡಾ. ಎಸ್. ಪರಮೇಶ್, ರುದ್ರೇಶ್, ಎಚ್.ಎನ್. ದೀಪಕ್, ಮರಿಯಣ್ಣ ಉಪಸ್ಥಿತರಿದ್ದರು.