ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gubbi News: ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಅವಶ್ಯ ಸಲಕರಣೆ ವಿತರಣೆ

ಸರ್ಕಾರ ಗ್ರಾಮೀಣ ಶಾಲೆಗಳ ಉಳಿಸುವ ಕೆಲಸಕ್ಕೆ ಪೂರಕವಾಗಿ ಎಲ್ಲಾ ಸವಲತ್ತು ಒದಗಿಸಿದೆ. ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ ಜೊತೆಗೆ ಪೌಷ್ಟಿಕ ಆಹಾರ, ರಾಗಿ ಅಂಬಲಿ ಹೀಗೆ ಅನೇಕ ರೀತಿ ಮಕ್ಕಳಿಗೆ ಯಾವ ಕೊರತೆ ಬಾರದಂತೆ ಕ್ರಮ ಕೈಗೊಂಡಿದೆ. ಆದರೆ ದಾಖಲಾತಿ ಪ್ರಕ್ರಿಯೆ ಇಳಿಮುಖ ಆಗದಂತೆ ಶಿಕ್ಷಣ ಇಲಾಖೆ ಮಾಡುವ ಎಲ್ಲಾ ಕಾರ್ಯಕ್ಕೆ ಸ್ಥಳೀಯ ಸಮುದಾಯ ಸಹಕಾರ ಅತ್ಯಗತ್ಯ

ಗುಬ್ಬಿ: ಪೀಠೋಪಕರಣ, ಆಧುನಿಕತೆಗೆ ತಕ್ಕಂತೆ ಸಲಕರಣೆ ಜೊತೆಗೆ ಸಮವಸ್ತ್ರ ವಿತರಣೆ ಮಾಡಿ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಕೆಲಸ ತಾಲ್ಲೂಕಿನ ಬಿದರೆ ಗ್ರಾಮಸ್ಥರಿಂದ ನಡೆಯಿತು.

ಚೇಳೂರು ಹೋಬಳಿ ಬಿದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ರೈತಸಂಘ ಗ್ರಾಮ ಘಟಕ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂವಾದನಾತ್ಮಕ ದೂರದರ್ಶನ, ಸಿಸಿ ಕ್ಯಾಮರಾ ಹಾಗೂ ಎಲ್ ಕೆಜಿ ಯುಕೆಜಿ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಲಾಯಿತು.

ಸಮೂಹ ಸಂಪನ್ಮೂಲ ವ್ಯಕ್ತಿ ಚನ್ನಬಸವೇಶ್ವರ ಮಾತನಾಡಿ, ಸರ್ಕಾರ ಗ್ರಾಮೀಣ ಶಾಲೆಗಳ ಉಳಿಸುವ ಕೆಲಸಕ್ಕೆ ಪೂರಕವಾಗಿ ಎಲ್ಲಾ ಸವಲತ್ತು ಒದಗಿಸಿದೆ. ಬಿಸಿಯೂಟ, ಪಠ್ಯಪುಸ್ತಕ, ಸಮ ವಸ್ತ್ರ ಜೊತೆಗೆ ಪೌಷ್ಟಿಕ ಆಹಾರ, ರಾಗಿ ಅಂಬಲಿ ಹೀಗೆ ಅನೇಕ ರೀತಿ ಮಕ್ಕಳಿಗೆ ಯಾವ ಕೊರತೆ ಬಾರದಂತೆ ಕ್ರಮ ಕೈಗೊಂಡಿದೆ. ಆದರೆ ದಾಖಲಾತಿ ಪ್ರಕ್ರಿಯೆ ಇಳಿಮುಖ ಆಗದಂತೆ ಶಿಕ್ಷಣ ಇಲಾಖೆ ಮಾಡುವ ಎಲ್ಲಾ ಕಾರ್ಯಕ್ಕೆ ಸ್ಥಳೀಯ ಸಮುದಾಯ ಸಹಕಾರ ಅತ್ಯಗತ್ಯ. ಇಂತಹ ಸತ್ಕಾರ್ಯಕ್ಕೆ ಬಿದರೆ ಗ್ರಾಮಸ್ಥರು ಸರ್ಕಾರಿ ಶಾಲೆ ಬೆಳೆಸಲು ಒಗ್ಗೂಡಿ ಸಹಕಾರ ನೀಡಿದ್ದಾರೆ ಎಂದರು.

ಇದನ್ನೂ ಓದಿ: Gubbi News: ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡಲ್ಲ, ಯಾರು ಬರಲಿ ಬಿಡಲಿ ಹೋರಾಟಕ್ಕೆ ಸಿದ್ಧ ಎಂದ ರೈತರು..!!

ಶಿಕ್ಷಣ ಸಂಯೋಜಕ ದೀಪಕ್ ಕುಮಾರ್ ಮಾತನಾಡಿ ಖಾಸಗಿ ಶಾಲೆಗಳ ವ್ಯಾಮೋಹದಿಂದ ಪೋಷಕರು ಹೊರಬರಬೇಕು. ಸರ್ಕಾರಿ ಶಾಲೆಯಲ್ಲಿ ಎಲ್ಲಾ ಅನುಕೂಲದ ಜೊತೆ ಗುಣಮಟ್ಟದ ಶಿಕ್ಷಣ ನೀಡುವ ಅರ್ಹ ಶಿಕ್ಷಕ ವೃಂದವಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗೆ ತನ್ನದೇ ವಿಶೇಷ ಸ್ಥಾನಮಾನವಿದೆ. ಇದನ್ನು ಉಳಿಸಿ ಬೆಳೆಸಲು ಗ್ರಾಮಸ್ಥರ ಕಾಳಜಿ ಅಗತ್ಯ ಎಂದರು.

ಮಾಜಿ ಸೈನಿಕರ ಸಂಘದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಮಾತನಾಡಿ ಗ್ರಾಮದ ಈ ಶಾಲೆಯಲ್ಲಿ ವಿದ್ಯಾರ್ಜನೆ ಪಡೆದ ಅನೇಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ಎಲ್ಲಡೆ ಸರ್ಕಾರಿ ಶಾಲೆ ಮುಚ್ಚುವ ಆತಂಕ ಮನೆ ಮಾಡಿದೆ. ಈ ನಿಟ್ಟಿನಲ್ಲಿ ನಮ್ಮೂರ ಶಾಲೆಗೆ ವಿಶೇಷ ಗಮನಹರಿಸಿ ಮತ್ತಷ್ಟು ಸಾಕಾರ ಗೊಳಿಸಲು ಯುವಕರ ತಂಡ ಸಜ್ಜಾಗಿದೆ. ಹಳೇ ವಿದ್ಯಾರ್ಥಿಗಳ ಸಂಘ ಕಟ್ಟಿ ಶಾಲೆಯ ಅಭಿವೃದ್ದಿಗೆ ಪಣ ತೊಡುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಎಲ್ ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಟ್ರ್ಯಾಕ್ ಸೂಟ್ ವಿತರಣೆ ಮಾಡಲಾ ಯಿತು. ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಬಿ.ಎಂ.ಗಿರಿಯಪ್ಪ, ಮುಖ್ಯ ಶಿಕ್ಷಕ ಡಿ.ರಾಜಶೇಖರಯ್ಯ ಸೇರಿದಂತೆ ಎಸ್ ಡಿಎಂಸಿ ಸದಸ್ಯರು, ಸ್ಥಳೀಯ ಮುಖಂಡರು, ರೈತಸಂಘದ ಸದಸ್ಯರು ಇದ್ದರು.