ತುಮಕೂರು: ನಗರದ ಬಟವಾಡಿಯ ನಿರ್ಗತಿಕ, ಅನಾಥ ಹಾಗೂ ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳ ರಕ್ಷಣೆ ಮತ್ತು ಪುನರ್ವಸತಿಗಾಗಿ ಶ್ರಮಿಸುತ್ತಿರುವ 'ದಾರಿದೀಪ' ಅಂಧ ಹೆಣ್ಣುಮಕ್ಕಳ ಆಶ್ರಮಕ್ಕೆ ಆರ್ಥಿಕ ಬಲ ತುಂಬುವ ಮಹತ್ವದ ಘಟನೆ ನಡೆಯಿತು.
ಸಮಾಜಮುಖಿ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಕಾಪ್ರಾಡ್ ಇಂಡಸ್ಟ್ರೀಸ್ ವತಿಯಿಂದ ದಾರಿದೀಪ ಆಶ್ರಮದ ಕಟ್ಟಡ ಖರೀದಿಗೆ 20 ಲಕ್ಷ ಸಹಾಯಧನ ಘೋಷಿಸಿ, ಚೆಕ್ ಅನ್ನು ವಿತರಿಸಿದೆ.
ಇದನ್ನೂ ಓದಿ: Tumkur News: ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿ ಶೀಘ್ರದಲ್ಲೇ ಫುಡ್ ಸ್ಟ್ರೀಟ್ ಆರಂಭ
ಕಾಪ್ರಾಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ, ಉದ್ಯಮಿ ಎಚ್.ಜಿ.ಚಂದ್ರಶೇಖರ್ ಅವರು ಆಶ್ರಮಕ್ಕೆ ಖುದ್ದು ಭೇಟಿ ನೀಡಿ, ಮಕ್ಕಳ ಯೋಗಕ್ಷೇಮ ವಿಚಾರಿಸಿ 20 ಲಕ್ಷ ಸಹಾಯಧನದ ಚೆಕ್ ವಿತರಿಸಿ ಮಾತನಾಡಿ, "ಸಮಾಜದಲ್ಲಿ ತಂತ್ರಜ್ಞಾನ ಮತ್ತು ಆರ್ಥಿಕತೆ ಎಷ್ಟೇ ಬೆಳೆದರೂ, ನಿರ್ಗತಿಕ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪುಗೊಳಿಸುವ ಸತ್ಕಾರ್ಯಕ್ಕೆ ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ. ದಾರಿದೀಪ ಆಶ್ರಮ ಮಾಡುತ್ತಿರುವ ಸೇವೆ ಅನನ್ಯವಾದದ್ದು, ಈ ಸಂಸ್ಥೆಯೊಂದಿಗೆ ನಮ್ಮ ಕಾಪ್ರಾಡ್ ಸಂಸ್ಥೆ ಸದಾ ನಿಲ್ಲಲಿದೆ" ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಶ್ರಮದ ಮುಖ್ಯಸ್ಥ ಶಿವಕುಮಾರ್, ಸಿಬ್ಬಂದಿ ಹಾಗೂ ಅಂಧ ಹೆಣ್ಣುಮಕ್ಕಳು ಉಪಸ್ಥಿತರಿದ್ದು, ಕಾಪ್ರಾಡ್ ಸಂಸ್ಥೆಯ ಮುಖ್ಯಸ್ಥರಾದ ಚಂದ್ರಶೇಖರ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ವೇಳೆ ಕಾಪ್ರಾಡ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ರೋಹಿತ್ ಚಂದ್ರಶೇಖರ್, ಮುಖಂಡ ನರಸೇಗೌಡ ಇದ್ದರು.