ಗುಬ್ಬಿ: ತಾಲ್ಲೂಕಿಗೆ 7 ಏತ ನೀರಾವರಿ ಯೋಜನೆ ಮಂಜೂರು ಮಾಡಿಸಿ 38 ಕೆರೆಗೆ ಹೇಮಾವತಿ ಹರಿಸಿ 118 ಹಳ್ಳಿಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪ ಅವರ 50 ವರ್ಷದ ರಾಜಕೀಯ ಸಾಧನ ಸಮಾವೇಶ ಅಭಿಮಾನೋತ್ಸವಕ್ಕೆ ಗುಬ್ಬಿ ತಾಲ್ಲೂಕಿನ ಹತ್ತು ಸಾವಿರಕ್ಕೂ ಅಧಿಕ ಅಭಿಮಾನಿಗಳು ಇದೇ ತಿಂಗಳ 9 ರಂದು ಚಿತ್ರದುರ್ಗ ತಲುಪಿ ನೀರಾವರಿ ಯೋಜನೆಯ ಋಣ ತೀರಿಸಲು ಸಜ್ಜಾಗಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಮ್ಮ ತಾಲ್ಲೂಕಿಗೆ ನೀರಾವರಿ ಹರಿಕಾರ ಎನಿಸಿದ ಯಡಿಯೂರಪ್ಪ ಅವರ ಸರ್ವರಿಗೂ ಸಮಪಾಲು ಸಮಬಾಳು ತತ್ವ ಎಂದಿಗೂ ಉತ್ತಮ ಆಳ್ವಿಕೆ ತೋರುತ್ತದೆ. ಇಂತಹ ಗಣ್ಯರ ಸಾಧನೆಗೆ ಎಲ್ಲರೂ ಪಕ್ಷಾತೀತ ಜಾತ್ಯತೀತವಾಗಿ ಸೇರಿ ಸಮಾವೇಶ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಇದನ್ನೂ ಓದಿ: Gubbi News: ಮಡೇನಹಳ್ಳಿ ದೇವಾಲಯಕ್ಕೆ 2.50 ಲಕ್ಷ ದೇಣಿಗೆ ನೀಡಿದ ಧರ್ಮಸ್ಥಳ ಸಂಸ್ಥೆ
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಲರಾಮಯ್ಯ ಮಾತನಾಡಿ, ರಾಜಕೀಯದಲ್ಲಿ ಬಿಎಸ್ ವೈ ಒಂದು ಶಕ್ತಿ ಎನ್ನಬಹುದಾಗಿದೆ. 50 ವರ್ಷದ ರಾಜಕೀಯ ಸಾಧನೆ ಸಾಮಾನ್ಯವಲ್ಲ. ರೈತರಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ ಮೊದಲ ಸಿಎಂ ಆಗಿ ಮಕ್ಕಳಿಗೆ ಸೈಕಲ್, ಬಿಸಿಯೂಟ, ವಿಧವಾ ವೇತನ, ವೃದ್ದಾಪ್ಯ ವೇತನ ಹೀಗೆ ಅನೇಕ ಯೋಜನೆ ಇಂದಿಗೂ ಪ್ರಚಲಿತವಾಗಿದೆ. ಸಣ್ಣ ಸಮುದಾಯವನ್ನು ಕೈಹಿಡಿದ ಇವರು ಅಗ್ನಿವಂಶ ಕ್ಷತ್ರಿಯಕ್ಕೆ ನಿಗಮ ಸ್ಥಾಪನೆ ಮಾಡಿದರು. ಅಗ್ನಿಬನ್ನಿರಾಯ ಜಯಂತಿ ಸರ್ಕಾರಿ ಕಾರ್ಯಕ್ರಮ ಮಾಡಿದರು. ಹಿಂದುಳಿದ ವರ್ಗಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತಂದರು. ಇಂತಹ ಮಹನೀಯರ ಸಾಧನೆಗೆ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟಾಗಿ ಸೇರಿ ಚಿತ್ರದುರ್ಗದಲ್ಲಿ ನಡೆಸುವ ಅಭಿಮಾನೋತ್ಸವ ಯಶಸ್ವಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಲು ನೂರು ಬಸ್ಸುಗಳ ವ್ಯವಸ್ಥೆ ಆಯಾ ಗ್ರಾಮ ಪಂಚಾಯಿತಿಯಲ್ಲಿ ಮಾಡಲಾಗಿದೆ. ಬೆಳಿಗ್ಗೆ 7 ಗಂಟೆಗೆ ನಿಮ್ಮ ಪಂಚಾಯಿತಿ ಕೇಂದ್ರದಲ್ಲಿ ಸೇರುವಂತೆ ಮನವಿ ಮಾಡಿದರು.
ಬಿಜೆಪಿ ಮುಖಂಡ ಸಾಗರನಹಳ್ಳಿ ವಿಜಯ್ ಕುಮಾರ್ ಮಾತನಾಡಿ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಒದಗಿಸಿದ್ದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಅತೀ ಸಣ್ಣ ಸಮುದಾಯವನ್ನು ಗುರುತಿಸಿ ಸಂಬಂಧಪಟ್ಟ ಧಾರ್ಮಿಕ ಕೇಂದ್ರಗಳಿಗೆ ಅನುದಾನ ನೀಡಿದ್ದಾರೆ. ಈ ಜೊತೆಗೆ ಸರ್ಕಾರ ದಿಂದ ಹೊಸ ಕಾರ್ಯಕ್ರಮ ಅನುಷ್ಠಾನಗೊಳಿಸಿ ಸಣ್ಣ ಸಮುದಾಯದ ಕೈ ಹಿಡಿದು ಮೇಲೆತ್ತಿದ್ದಾರೆ.
ಅವರಿಂದ ಸಹಕಾರ ಪಡೆದ ಸಣ್ಣ ಸಮುದಾಯಗಳೇ ಇಂದು ಅಭಿಮಾನೋತ್ಸವ ಆಯೋಜನೆ ಮಾಡಿದೆ. ಜಾತಿ ಪಕ್ಷ ಇಲ್ಲದ ಈ ಕಾರ್ಯಕ್ರಮಕ್ಕೆ ಬಿಜೆಪಿ ಸಹ ಅವರನ್ನು ಅಭಿನಂದಿಸಲು ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಭಾಗವಹಿಸಲಿದೆ. ತಾಲ್ಲೂಕಿನಿಂದ ಬಿಎಸ್ ವೈ ಅಭಿಮಾನಿಗಳು ಆಗಮಿಸಿ ಸಮಾವೇಶ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗುಬ್ಬಿ ಮಂಡಲ ಉಸ್ತುವಾರಿ ಎಚ್.ಎಂ.ರವೀಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಾಗರನಹಳ್ಳಿ ನಂಜೇಗೌಡ, ಮಾಜಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ಜಿಲ್ಲಾ ಕಾರ್ಯದರ್ಶಿ ಬಸವರಾಜು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವಿದ್ಯಾ ಸಾಗರ್, ಮುಖಂಡ ಕೃಷ್ಣಮೂರ್ತಿ ಇತರರು ಇದ್ದರು.