ಪಾವಗಡ: ತಾಲ್ಲೂಕಿನ ವಳ್ಳೂರು ಗ್ರಾಮದ ಎಸ್.ಸಿ. ಕಾಲೋನಿ ವ್ಯಾಪ್ತಿಯಲ್ಲಿ ನರಿ ದಾಳಿ ನಡೆಸಿದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಗ್ರಾಮದ ಹೊರವಲಯದಲ್ಲಿ ಬಹಿರ್ದೆಸೆಗೆ ತೆರಳಿದ್ದ ಮುತ್ಯಲಮ್ಮ (52) ಹಾಗೂ ಮುತ್ಯಾಲಕ್ಕೆ (48) ಎಂಬ ಮಹಿಳೆಯರ ಮೇಲೆ ನರಿ ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ.
ಮಹಿಳೆಯರ ಮೇಲೆ ನರಿ ದಾಳಿ ನಡೆಸುತ್ತಿದ್ದುದನ್ನು ಗಮನಿಸಿ ಅವರನ್ನು ರಕ್ಷಿಸಲು ಮುಂದಾದ ರಾಮಣ್ಣ (56) ಹಾಗೂ ರಾಮಕ್ಕೆ (50) ಅವರ ಮೇಲೂ ನರಿ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Pavagada News: ಖೋ ಖೋ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಲಿಂಗದಹಳ್ಳಿ ಶಾಲೆಯ ಬಾಲಕಿಯರ ತಂಡ ಆಯ್ಕೆ
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಗಾಯಾಳುಗಳನ್ನು ತಿರುಮಣಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಗ್ರಾಮದ ಜನವಸತಿ ಪ್ರದೇಶದ ಸಮೀಪವೇ ನರಿ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.