ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Pavagada News: ಖೋ ಖೋ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಲಿಂಗದಹಳ್ಳಿ ಶಾಲೆಯ ಬಾಲಕಿಯರ ತಂಡ ಆಯ್ಕೆ

ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾವಗಡ ತಾಲೂಕಿನ ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಾಲಕಿಯರ ತಂಡವು ಸಾಧನೆ ಮಾಡಿದೆ. ಖೋ ಖೋ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ಖೋ ಖೋ ಸ್ಪರ್ಧೆಯಲ್ಲಿ ವಿಭಾಗ ಮಟ್ಟಕ್ಕೆ ಲಿಂಗದಹಳ್ಳಿ ಶಾಲೆ ತಂಡ ಆಯ್ಕೆ

-

Prabhakara R
Prabhakara R Oct 26, 2026 9:47 PM

ಪಾವಗಡ: ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪಾವಗಡ ತಾಲೂಕಿನ ಲಿಂಗದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಬಾಲಕಿಯರ ತಂಡವು ಖೋ ಖೋ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ವಿದ್ಯಾರ್ಥಿನಿಯರ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ಗೋವಿಂದಪ್ಪ ಆರ್. ಅವರು ಸಂತಸ ವ್ಯಕ್ತಪಡಿಸಿ, ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯ ವೃದ್ಧಿಯಾಗುವುದರ ಜೊತೆಗೆ ಆತ್ಮವಿಶ್ವಾಸ ಮತ್ತು ಶಿಸ್ತು ಬೆಳೆಯುತ್ತದೆ ಎಂದು ತಿಳಿಸಿದರು.

ದೈಹಿಕ ಶಿಕ್ಷಣ ಶಿಕ್ಷಕರಾದ ರಾಮಾಂಜಿನಪ್ಪ ಅವರು ಮಾತನಾಡಿ, ಕ್ರೀಡೆಯು ಮಕ್ಕಳ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡಾ ಚಟುವಟಿಕೆಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗುತ್ತವೆ ಎಂದು ಹೇಳಿದರು.

ಖೋ ಖೋ ಪಂದ್ಯದ ತರಬೇತುದಾರರಾದ ಹರ್ಷಿತ್ ಮತ್ತು ಮಹೇಶ್ ಅವರು ವಿದ್ಯಾರ್ಥಿನಿಯರಿಗೆ ಸೂಕ್ತ ತರಬೇತಿ ನೀಡುವುದರ ಜೊತೆಗೆ, ಆಟದ ಸಂದರ್ಭದಲ್ಲಿ ಆಗುತ್ತಿದ್ದ ತಪ್ಪುಗಳನ್ನು ಗುರುತಿಸಿ ತಿದ್ದುವಲ್ಲಿ ಹೆಚ್ಚಿನ ಆದ್ಯತೆ ನೀಡಿದರು. ಅವರ ಮಾರ್ಗದರ್ಶನ ಮತ್ತು ನಿರಂತರ ಅಭ್ಯಾಸವು ತಂಡದ ಉತ್ತಮ ಪ್ರದರ್ಶನಕ್ಕೆ ಸಹಕಾರಿಯಾಯಿತು.

ಈ ಸಂದರ್ಭದಲ್ಲಿ ಶಿಕ್ಷಕರಾದ ರವಿಕುಮಾರ್ ಸಿ.ಡಿ., ಹನುಮಂತಪ್ಪ ಈ., ಚಂದ್ರಪ್ಪ ಜಿ. ಹಾಗೂ ಗುರುಸ್ವಾಮಿ, ಗ್ರಾಮಸ್ಥರಾದ ನಾನಿ ರೆಡ್ಡಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದು, ವಿಭಾಗ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.

ಲಿಂಗದಹಳ್ಳಿ ಶಾಲೆಯ ಬಾಲಕಿಯರ ಈ ಸಾಧನೆಗೆ ಶಾಲೆಯ ಶಿಕ್ಷಕರು, ತರಬೇತಿದಾರರು, ಪೋಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಲಿಂಗದಹಳ್ಳಿ ಶಾಲೆಯ ವಿದ್ಯಾರ್ಥಿನಿ ಸೌಮ್ಯ

Pavagada News (1)

ಪಾವಗಡ: ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವತಿಯಿಂದ ಅಕ್ಟೋಬರ್ 25 ಮತ್ತು 26ರಂದು ಪಾವಗಡದಲ್ಲಿ ಆಯೋಜಿಸಲಾಗಿದ್ದ 14ರ ವಯೋಮಾನದ ವಿದ್ಯಾರ್ಥಿಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಲಿಂಗದಹಳ್ಳಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಸೌಮ್ಯ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.

ಸೌಮ್ಯಳ ಈ ಸಾಧನೆಯು ಶಾಲೆಗೆ ಹಾಗೂ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದ್ದು, ವಿದ್ಯಾರ್ಥಿನಿಯ ಕ್ರೀಡಾ ಪ್ರತಿಭೆ ಮತ್ತು ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ಕುಮಾರಿ ಸೌಮ್ಯಳಿಗೆ ಶಾಲೆಯ ಮುಖ್ಯ ಶಿಕ್ಷಕರಾದ ಗೋವಿಂದಪ್ಪ ಆರ್., ದೈಹಿಕ ಶಿಕ್ಷಕರಾದ ರಾಮಾಂಜಿನಪ್ಪ, ಶಾಲೆಯ ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಾಲೆಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.

ವಿದ್ಯಾರ್ಥಿನಿಯ ಈ ಸಾಧನೆಯು ಶಾಲೆಯ ಇತರ ವಿದ್ಯಾರ್ಥಿಗಳಿಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದು, ಗ್ರಾಮದಲ್ಲಿ ಸಂತಸ ವ್ಯಕ್ತವಾಗಿದೆ.