ಗುಬ್ಬಿ: ಉರಿ ಬಿಸಿಲಿಗೆ ತಗ್ಗಿದ ಅಂತರ್ಜಲದಿಂದ ಕೃಷಿ ಚಟುವಟಿಕೆ ಮಾಡಲಾಗದೆ ಬೇಸತ್ತ ಕಡಬ ಹೋಬಳಿ ದೊಣ್ಣೆರೆ ಗ್ರಾಮಸ್ಥರು ಮಳೆರಾಯನ ಮಣ್ಣಿನ ಮೂರ್ತಿ ಸಿದ್ಧಪಡಿಸಿ ಊರಿನಲ್ಲಿ ಮೆರವಣಿಗೆ ನಡೆಸಿ ಹುಯ್ಯೋ ಹುಯ್ಯೋ ಮಳೆರಾಯ ಎಂದು ಪ್ರಾರ್ಥಿಸಿದರು.
ದೊಣ್ಣೆರೆ ಊರಿನ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಳೆರಾಯನ ಮಣ್ಣಿನ ಮೂರ್ತಿ ಸಿದ್ಧಪಡಿಸಿ ಊರಿನ ಒಟ್ಟು 90 ಮನೆಯವರು ಒಟ್ಟಾಗಿ ಸೇರಿ ಹಸಿರು ತೋರಣ ಸಿಂಗಾರ ಊರಲ್ಲಿ ನಡೆಸಿ ಹಬ್ಬದ ವಾತಾವರಣ ಸೃಷ್ಟಿ ಮಾಡಿದರು.
ವರುಣನ ಅವಕೃಪೆಗೆ ಮಳೆರಾಯ ಮೂರ್ತಿ ಹೊತ್ತು ವಾದ್ಯಗಳೊಂದಿಗೆ ಪ್ರತಿ ಮನೆಗೆ ತೆರಳಿ ಪೂಜೆ ಸ್ವೀಕರಿಸಿ ನೀರಿನ ಅಭಿಷೇಕ ಪಡೆದು ಹುಯ್ಯೋ ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ, ಬಾಳೆ ತೋಟಕ್ಕೆ ನೀರಿಲ್ಲ ಇತ್ಯಾದಿ ಘೋಷಣೆಯನ್ನು ಕೂಗುತ್ತಾ ಮಳೆರಾಯನ ಆಗಮನಕ್ಕೆ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: Gubbi News: ಸಂವಿಧಾನದ ಮೂಲಕ ನ್ಯಾಯ ಒದಗಿಸಿಕೊಟ್ಟ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್*
ಊರಿನ ಎಲ್ಲಾ ಮನೆ ತಲುಪಿ ನಂತರ ವಿಶೇಷ ಅಲಂಕಾರದಿಂದ ಸಿದ್ಧವಾದ ದೇವಾಲಯದ ಆವರಣಕ್ಕೆ ಮೆರವಣಿಗೆ ತಲುಪಿತು. ಗ್ರಾಮ ದೇವರಿಗೆ ಪೂಜೆ ಸಲ್ಲಿಸಿ ಎಲ್ಲರಿಗೂ ದಾಸೋಹ ವ್ಯವಸ್ಥೆಯನ್ನು ಗ್ರಾಮಸ್ಥರೇ ಮಾಡಿದ್ದರು. ಕಳೆದ ಎರಡು ತಿಂಗಳಿಂದ ಬೇಸಿಗೆಯ ಉಷ್ಣತೆಗೆ ಕಂಗಾಲಾದ ರೈತರು ದೇವರ ಮೊರೆ ಹೋಗಿದ್ದಾರೆ ಎಂದು ಸ್ಥಳೀಯ ಮುಖಂಡ ಭರತ್ ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಯುವಕರಾದ ಸೋಮಶೇಖರ್, ಗಿರೀಶ್, ವೀರೇಶ್, ರಂಜಿತ್, ಅಮಿತ್, ವೆಂಕಟೇಶ್, ಹೃತಿಕ್, ಪುನೀತ್, ಚೇತನ್ ಕುಮಾರ್, ಶಿವಕುಮಾರ್, ಹರೀಶ್, ಮಧು, ವಿನಯ್, ಶಾಂತರಾಜು, ನವೀನ್, ಗುರುಸ್ವಾಮಿ ಸೇರಿದಂತೆ ಎಲ್ಲಾ ಗ್ರಾಮಸ್ಥರು ಇದ್ದರು.