Karnataka CM Row: ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡವೇ ಬೇಡ ಎಂದ ಕೆ.ಎನ್. ರಾಜಣ್ಣ!
KN Rajanna: ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿದ್ದ ಚರ್ಚೆ, ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸ್ಪಲ್ಪ ತಣ್ಣಗಾಗಿದೆ. ಈ ನಡುವೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಕೆ.ಎನ್.ರಾಜಣ್ಣ (ಸಂಗ್ರಹ ಚಿತ್ರ) -
ತುಮಕೂರು, ಡಿ.6: ರಾಜ್ಯದಲ್ಲಿ ಸಿಎಂ ಬದಲಾವಣೆ (Karnataka CM Row) ಚರ್ಚೆ ಸ್ವಲ್ಪ ತಣ್ಣಗಾಗಿರುವ ವೇಳೆ ಕೆ.ಎನ್. ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗುವುದಿಲ್ಲ. ಡಿಕೆಶಿ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ. ನನಗೆ ಸಾಕು, ಇನ್ನೊಬ್ಬರಿಗೆ ಅವಕಾಶ ಕೊಡಲಿ. ನಾನು 2028ರ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಕೆ.ಎನ್.ರಾಜಣ್ಣ ಅವರು, ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಅಂತ ಸಂಪೂರ್ಣ ಅಪೇಕ್ಷೆ ಪಡೋನೂ ಅಲ್ಲ. ಅಧಿಕಾರ ಬಂದರೆ ಏನೆಲ್ಲಾ ಮಾಡಬಹುದು ಎಂದು ತೋರಿಸಿ ಕೊಟ್ಟಿದ್ದೇನೆ. ನಾನು ಸಚಿವನಾಗಿದ್ದಾಗ ಜಾರಿ ಮಾಡಿದ್ದ ತಿದ್ದುಪಡಿ (ಅಮೆಂಟ್‌ಮೆಂಟ್) ಜಾರಿಯಾದರೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ. ಸೊಸೈಟಿಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿ ಮಾಡಿದ್ದೇನೆ ಎಂದು ತಾವು ತಂದ ಕ್ರಾಂತಿಕಾರಿ ಬದಲಾವಣೆಗಳನ್ನು ಸ್ಮರಿಸಿದರು.
ಸಿಎಂ ಮತ್ತು ಡಿಸಿಎಂ ದುಬಾರಿ ವಾಚ್‌ಗಳ ಕುರಿತು ವಿರೋಧ ಪಕ್ಷದ ಟೀಕೆಯ ಬಗ್ಗೆ ಮಾತನಾಡಿದ ರಾಜಣ್ಣ, ವಿರೋಧ ಪಕ್ಷದವರಿಗೆ ವಿರೋಧ ಮಾಡೋಕೆ ಬೇರೆ ವಿಚಾರ ಇಲ್ಲ. ವಾಚ್, ಊಟದ ಬಗ್ಗೆ ಆರೋಪ ಮಾಡುತ್ತಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಅಂತ ಮನವಿ ಮಾಡುತ್ತೇನೆ ಎಂದು ಸಲಹೆ ನೀಡಿದರು.
ಇದೇ ವೇಳೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಕೆ ಬ್ರದರ್ಸ್‌ಗೆ ನೋಟಿಸ್ ಬಂದಿರುವ ಬಗ್ಗೆ ಕೇಳಿದಾಗ, ಆ ವಿಚಾರ ನನಗೂ ಗೊತ್ತಾಗಿದೆ. ಆದರೆ ಏನಕ್ಕೆ ಕೊಟ್ಟಿದ್ದಾರೆ ಅನ್ನೋ ಮಾಹಿತಿ ನನಗೂ ಇಲ್ಲ. ಅವರದ್ದು 128 ಕೇಸ್‌ಗಳು ಇವೆ. ಅದರಲ್ಲಿ ಯಾವುದಕ್ಕೆ ಕೊಟ್ಟಿದ್ದಾರೆ ಯಾರಿಗೆ ಗೊತ್ತು ಎಂದು ಪ್ರತಿಕ್ರಿಯಿಸಿದರು.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆಯ ಕುರಿತು ಮಾತನಾಡಿದ ಅವರು, ಹಿಂಸೆ ಯಾವಾಗಲೂ ಕಠಿಣವಾದುದು. ಇಂತಹ ದಾಳಿಗಳು ಯಾವುದೇ ಪಕ್ಷದ ಮೇಲೆ ನಡೆಯಬಾರದು. ಇಂತಹ ಕೃತ್ಯಗಳು ಒಪ್ಪುವಂತದಲ್ಲ ಎಂದು ಖಂಡಿಸಿದರು.
ನ್ಯಾಷನಲ್ ಹೆರಾಲ್ಡ್ ಕೇಸ್; ಡಿಕೆಗೆ ದಿಲ್ಲಿ ಪೊಲೀಸ್ ನೋಟಿಸ್
ಇಂಡಿಗೋ ಸ್ಥಗಿತಕ್ಕೆ ಮೋದಿ ಒಬ್ಬರನ್ನೇ ದೂಷಿಸಬೇಡಿ
ಇಂಡಿಗೋ ವಿಮಾನ ಹಾರಾಟ ಸ್ಥಗಿತ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಇಂಡಿಗೋ ವಿಚಾರವಾಗಿ ಮೋದಿಯವರನ್ನು ಮಾತ್ರ ಬ್ಲೇಮ್ ಮಾಡಬಾರದು. ಬೇರೆ ಆಡಳಿತ ವರ್ಗದವರನ್ನು ಮಾಡಬೇಕು. 8 ಗಂಟೆ ಕೆಲಸದ ಬದಲು 12 ಗಂಟೆ ಕೆಲಸ ಮಾಡಿಸಿದ್ದಾರೆ. 200 ಜನ ಪೈಲೆಟ್ಸ್ ಕೊರತೆ ಇದೆ. ಹಾಗಾಗಿ ಸಮಸ್ಯೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟರು.