Koratagere News: ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್; 15 ಕೇಸ್‌ಗಳ ಆರೋಪಿ, ಹಿಂದೂ ಕಾರ್ಯಕರ್ತ ಉತ್ತರಾಖಂಡ್‌ನಲ್ಲಿ ಅರೆಸ್ಟ್
Koratagere News: ತುಮಕೂರು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತನಾಗಿ ಕೆಲಸ ಮಾಡಿರುವ ವ್ಯಕ್ತಿಯನ್ನು ಕೊರಟಗೆರೆ ಪೊಲೀಸರು, ಉತ್ತರಾಖಂಡ್‌ನಲ್ಲಿ ಬಂಧಿಸಿದ್ದಾರೆ. ಆರೋಪಿ ವಿರುದ್ಧ 10 ಜಿಲ್ಲೆಗಳಲ್ಲಿ 15 ಪ್ರಕರಣ ದಾಖಲು ದಾಖಲಾಗಿದ್ದವು.
Prabhakara R
Dec 4, 2024 10:22 PM
ಕೊರಟಗೆರೆ: ಸಿಎಂ, ಡಿಸಿಎಂ, ಗೃಹ ಸಚಿವ, ಸಣ್ಣ ನೀರಾವರಿ ಸಚಿವ ಸೇರಿ 15ಕ್ಕೂ ಹೆಚ್ಚು ಸಚಿವರ ವಿರುದ್ಧ ಅವಾಚ್ಯವಾಗಿ ನಿಂದಿಸಿ, ವೈಯಕ್ತಿಕ ತೇಜೋವಧೆಯ ವಿಡಿಯೊವನ್ನು (Derogatory Post) ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸರು (Koratagere News), ಉತ್ತರಾಖಂಡ್ ರಾಜ್ಯದ ಹಳ್ಳಿಯೊಂದರಲ್ಲಿ ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತನಾಗಿ ಕೆಲಸ ಮಾಡಿರುವ ಮೋಹಿತ್ ನರಸಿಂಹಮೂರ್ತಿ ಬಂಧಿತ ಆರೋಪಿ. ಕೊರಟಗೆರೆ ಪಿಎಎಸ್‌ಐ ಚೇತನ್‌ಗೌಡ ನೇತೃತ್ವದ ತಂಡ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದೆ.
ಆರೋಪಿಯು ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಗೃಹಸಚಿವ ಡಾ.ಜಿ.ಪರಮೇಶ್ವರ, ವಸತಿ ಸಚಿವ ಜಮೀರ್ ಅಹಮ್ಮದ್, ಇಂಧನ ಸಚಿವ ಕೆ.ಜೆ.ಜಾರ್ಜ್ ಸೇರಿ ಹಲವರ ವಿರುದ್ದ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟು, ಘನತೆಗೆ ಧಕ್ಕೆ ತಂದಿರುವ ಬಗ್ಗೆ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ದೂರಿನ ಅನ್ವಯ ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಸ್ತುತ ಉತ್ತರಕಾಂಡದ ಉಕ್ಕಿಮಠದಲ್ಲಿ ಆರೋಪಿಯು, ಬಿಜೆಪಿ ಸಂಘಟಕನಾಗಿ ಕೆಲಸ ಮಾಡುತ್ತಾ ಜೀವನಕ್ಕಾಗಿ ಟೀ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ರಾಜ್ಯ ಸರ್ಕಾರ ಮತ್ತು ಸಚಿವರ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದ ಪರಿಣಾಮ ಕಾಂಗ್ರೆಸ್ ಕಾರ್ಯಕರ್ತರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಹಿತ್ ನರಸಿಂಹಮೂರ್ತಿ ವಿರುದ್ದ ದೂರು ದಾಖಲಾಗಿತ್ತು. ಹೀಗಾಗಿ ಈತನ ವಿರುದ್ಧ 10 ಜಿಲ್ಲೆಗಳ 15 ಠಾಣೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರ ಲೋಕಾಸಭೆಗೆ ಸ್ಪರ್ಧೆದಾಬಸ್‌ಪೇಟೆ ತಾಲೂಕಿನ ನಲ್ಲೂರಿನ ಲೇ.ನರಸಿಂಹಮೂರ್ತಿಯ ಮಗನಾದ ಆರೋಪಿ ಮೋಹಿತ್ ನರಸಿಂಹಮೂರ್ತಿ 202ರ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕೊಳಲು ಚಿಹ್ನೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದ. ಪ್ರಸ್ತುತ ಉತ್ತರಾಖಂಡ್‌ನಲ್ಲಿ ಪಕ್ಷವೊಂದರ ಸಂಘಟಕನಾಗಿ ಗುರ್ತಿಸಿಕೊಂಡು ಪ್ರಚಾರದಲ್ಲಿ ನಿರತನಾಗಿದ್ದ ಎಂದು ತಿಳಿದುಬಂದಿದೆ.
10 ಜಿಲ್ಲೆಗಳಲ್ಲಿ 15 ಪ್ರಕರಣ ದಾಖಲುಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೊರಟಗೆರೆ, ಮೈಸೂರು, ಕಲಬುರಗಿ, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಆರೋಪಿ ಮೋಹಿತ್ ನರಸಿಂಹಮೂರ್ತಿ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ಒಟ್ಟು 12 ಪ್ರಕರಣ ದಾಖಲಾಗಿವೆ. ಇದಲ್ಲದೇ ಉತ್ತರಾಖಂಡ್‌ನ ಚಾರ್‌ಧಾಮ್ ಯಾತ್ರೆ ಮಾಡಿಸುವ ಆಮಿಷವೊಡ್ಡಿ ಕರ್ನಾಟಕದ 10 ಭಕ್ತರಿಗೆ ಪಂಗನಾಮ ಹಾಕಿರುವ ಆರೋಪದಲ್ಲಿ 3 ಠಾಣೆಗಳಲ್ಲಿ ಮೋಸದ ಪ್ರಕರಣಗಳು ದಾಖಲಾಗಿವೆ.
ಉತ್ತರಾಖಂಡ್ ರಾಜ್ಯದಲ್ಲಿ ಬಂಧನತುಮಕೂರು ಎಸ್‌ಪಿ ಅಶೋಕ್ ವೆಂಕಟ್ ಆದೇಶದ ಮೇಲೆ ತುಮಕೂರು ಸಿಬಿ ಬ್ರಾಂಚ್ ಸಿಪಿಐ ಅವಿನಾಶ್, ಸಿರಾ ಗ್ರಾಮಾಂತರ ಸಿಪಿಐ ರಾಘವೇಂದ್ರ, ಕೊರಟಗೆರೆ ಪಿಎಸ್‌ಐ ಚೇತನ್‌ಗೌಡ, ಕ್ರೈಂ ಸಿಬ್ಬಂದಿಗಳಾದ ದೊಡ್ಡಲಿಂಗಪ್ಪ, ಸಿದ್ದರಾಮ ನೇತೃತ್ವದ 5 ಪೊಲೀಸರ ತಂಡ 15 ಪ್ರಕರಣಗಳ ಆರೋಪಿ ಮೋಹಿತ್ ನರಸಿಂಹಮೂರ್ತಿಯನ್ನು ಉತ್ತರಾಖಂಡ್‌ನ ರುದ್ರಪ್ರಯಾಗ ಜಿಲ್ಲೆ ಚಮೋಲಿ ತಾಲೂಕಿನ ಉಕ್ಕಿಮಠದ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ.
ತುಮಕೂರು ಎಸ್ಪಿ ಅಶೋಕ್‌ವೆಂಕಟ್, ಎಎಸ್ಪಿ ಮರಿಯಪ್ಪ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಕೊರಟಗೆರೆಗೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ. ಕೊರಟಗೆರೆ ಸಿಪಿಐ ಅನಿಲ್, ಪಿಎಸ್‌ಐ ಚೇತನ್‌ಗೌಡ ನೇತೃತ್ವದ ತಂಡ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಆರೋಪಿ ಮೋಹಿತ್ ನರಸಿಂಹಮೂರ್ತಿ ವಿರುದ್ದ ಪ್ರಕರಣ ದಾಖಲಾಗಿದೆ.
ಸಿಎಂ, ಡಿಸಿಎಂ, ಗೃಹ ಸಚಿವರು ಸೇರಿ 15ಕ್ಕೂ ಅಧಿಕ ಸಚಿವರ ಬಗ್ಗೆ ಮೊಹೀತ್ ನರಸಿಂಹಮುರ್ತಿ ಎಂಬಾತ ವೈಯಕ್ತಿಕ ತೇಜೋವಧೆಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಉತ್ತರಾಖಂಡ್‌ಗೆ ಪರಾರಿ ಆಗಿದ್ದ. ಸರ್ಕಾರದ ಘನತೆಗೆ ಧಕ್ಕೆ ಮತ್ತು ಅವಾಚ್ಯ ಶಬ್ದ ಬಳಕೆ ಮಾಡಿದ್ದರಿಂದ ನಾನು ದೂರು ನೀಡಿದ ತಕ್ಷಣವೇ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.| ಅರಕೆರೆ ಶಂಕರ್, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ, ಕೊರಟಗೆರೆ
ಈ ಸುದ್ದಿಯನ್ನೂ ಓದಿ | CM Siddaramaiah: ಲೋಕಾಯುಕ್ತಕ್ಕೆ ಇಡಿ ಪತ್ರದ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದ ಸಿಎಂ