Koratagere News: ಕೊರಟಗೆರೆಯ 13 ಪೌರ ಕಾರ್ಮಿಕರಿಗೆ ಮನೆ ಹಸ್ತಾಂತರಿಸಿದ ಗೃಹ ಸಚಿವ ಪರಮೇಶ್ವರ್
ಕೊರಟಗೆರೆ ಪಟ್ಟಣದ ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸಮೀಪ ನಿರ್ಮಿಸಲಾಗಿರುವ 13 ನೂತನ ಮನೆಗಳನ್ನು ಗೃಹ ಸಚಿವ ಜಿ.ಪರಮೇಶ್ವರ್ ಅವರು ಉದ್ಘಾಟಿಸಿ, ಪೌರಕಾರ್ಮಿಕರಿಗೆ ಹಸ್ತಾಂತರಿಸಿದರು. ಪ್ರತಿ ಮನೆಯನ್ನು 7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಕೊರಟಗೆರೆಯಲ್ಲಿ ಪೌರಕಾರ್ಮಿಕರಿಗೆ ಮನೆಯನ್ನು ಸಚಿವ ಪರಮೇಶ್ವರ್ ಹಸ್ತಾಂತರಿಸಿದರು. -
ಕೊರಟಗೆರೆ, ಡಿ.14: ಪಟ್ಟಣ ಪಂಚಾಯಿತಿಯ 13 ಪೌರ ಕಾರ್ಮಿಕರಿಗೆ ಗೃಹ ಭಾಗ್ಯ ಲಭಿಸಿದೆ. ಪಟ್ಟಣದ (Koratagere News) ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಸಮೀಪ ಪಟ್ಟಣ ಪಂಚಾಯಿತಿ ವತಿಯಿಂದ ಗೃಹ ಭಾಗ್ಯ ಯೋಜನೆಯಡಿ ನಿರ್ಮಿಸಿರುವ 13 ನೂತನ ಮನೆಗಳನ್ನು ಗೃಹ ಸಚಿವ ಜಿ.ಪರಮೇಶ್ವರ್ ಉದ್ಘಾಟಿಸಿ, ಪೌರಕಾರ್ಮಿಕರಿಗೆ ಮನೆಯ ಕೀ ನೀಡಿ ಶುಭ ಹಾರೈಸಿದರು.
ಪ್ರತಿ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 6 ಲಕ್ಷ ಹಾಗೂ ಪಟ್ಟಣ ಪಂಚಾಯಿತಿಯಿಂದ 1 ಲಕ್ಷ ರೂ. ಸೇರಿ ಒಟ್ಟು 91 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ 13 ಮನೆಗಳನ್ನು ಗೃಹ ಸಚಿವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಕೊರಟಗೆರೆ ಸಾರ್ವಜನಿಕರಿಗೆ ಬಹಳಷ್ಟು ದಿನಗಳಿಂದ ಒಂದು ಮಾತನ್ನು ಹೇಳುತ್ತಿದ್ದೆ, ಅದು ಈಗ ನೆರವೇರಿದೆ. ಇನ್ನು ಮುಂದೆ ಕೊರಟಗೆರೆ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಬದಲಾವಣೆ ಆಗಲಿದ್ದು. ಬರುವ 2026 ಏಪ್ರಿಲ್‌ನಲ್ಲಿ ಪುರಸಭೆ ಚುನಾವಣೆಗೆ ಸಿದ್ಧತೆ ಆಗಬಹುದು. ಕೊರಟಗೆರೆ ಕ್ಷೇತ್ರ ಇನ್ನೂ ಬಹಳಷ್ಟು ಅಭಿವೃದ್ಧಿ ಹೊಂದಲಿದೆ ಎಂದ ಅವರು, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.

ತುಮಕೂರಿಗೆ ಮೆಟ್ರೋ ವಿಸ್ತರಣೆಯಿಂದ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಆಗಲಿದೆ: ಪರಮೇಶ್ವರ್
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು. ಜಿ, ತಹಸೀಲ್ದಾರ್ ಮಂಜುನಾಥ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಲತಾ, ಸದಸ್ಯರಾದ ಎ.ಡಿ. ಬಲರಾಮಯ್ಯ, ಲಕ್ಷ್ಮೀನಾರಾಯಣ್, ಓಬಳರಾಜು, ನಂದೀಶ್, ಭಾರತಿ ಸಿದ್ದಮಲ್ಲಪ್ಪ, ಭಾಗ್ಯಮ್ಮ ಗಣೇಶ್ ಹಾಗೂ ಪೌರಕಾರ್ಮಿಕರು ಇದ್ದರು.