Bengaluru–Tumakuru Metro: ತುಮಕೂರಿಗೆ ಮೆಟ್ರೋ ವಿಸ್ತರಣೆಯಿಂದ ಬೆಂಗಳೂರು ಮೇಲಿನ ಒತ್ತಡ ಕಡಿಮೆ ಆಗಲಿದೆ: ಸಚಿವ ಪರಮೇಶ್ವರ್
Home Minister Dr G Parameshwara: ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಅನೇಕ ವಿಚಾರಗಳು ಸಂಸದ ತೇಜಸ್ವಿಸೂರ್ಯ ಅವರ ಗಮನದಲ್ಲಿಲ್ಲ. ಇದೇ ಕಾರಣದಿಂದ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಮತ್ತು ಸಂಸದ ತೇಜಸ್ವಿ ಸೂರ್ಯ -
ಬೆಂಗಳೂರು, ನ.18: ಬೆಂಗಳೂರಿನಿಂದ ತುಮಕೂರಿಗೆ ನಮ್ಮ ಮೆಟ್ರೋ ರೈಲು ಯೋಜನೆಗೆ (Bengaluru–Tumakuru Metro) ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಈ ಯೋಜನೆಗೆ ಬಿಎಂಆರ್‌ಸಿಎಲ್ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಲು ಟೆಂಡರ್ ಆಹ್ವಾನಿಸಿದ್ದು, ನಮ್ಮ ಮೆಟ್ರೋ ವಿಸ್ತರಣೆಯಿಂದ ತುಮಕೂರು ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ (Dr G Parameshwara) ಪ್ರತಿಕ್ರಿಯಿಸಿದ್ದು, ಯೋಜನೆಗೆ ಅಪಸ್ವರ ತೆಗೆದಿರುವ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್ ಅವರು, ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯ ಅನೇಕ ವಿಚಾರಗಳು ಸಂಸದ ತೇಜಸ್ವಿಸೂರ್ಯ ಅವರ ಗಮನದಲ್ಲಿಲ್ಲ. ಇದೇ ಕಾರಣದಿಂದ ಯೋಜನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರತಿನಿತ್ಯ ತುಮಕೂರಿನಿಂದ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ನೆಲಮಂಗಲ, ದಾಬಸ್‌ಪೇಟೆ, ಕ್ಯಾತ್ಸಂದ್ರ ಭಾಗ ವೇಗವಾಗಿ ಬೆಳೆಯುತ್ತಿವೆ. ಕೈಗಾರಿಕೆ ಉದ್ದೇಶದಿಂದ ಜನರ ಜೀವನ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಒತ್ತಡ ಜಾಸ್ತಿ ಇದೆ. ನೀರಿಗೆ ಕಷ್ಟ, ಓಡಾಡೋಕೆ ಟ್ರಾಫಿಕ್ ಸಮಸ್ಯೆ ಇದೆಲ್ಲ ನೋಡಿಕೊಂಡು ಆ ಕಡೆ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಿದೆ
ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಿಸಲಾಗಿದೆ. ಈಗಾಗಲೇ 200 ಕೈಗಾರಿಕೆಗಳು ಬಂದಿವೆ. ಫುಡ್‌ಪಾರ್ಕ್, ಟೈಮೆಕ್ ಜಪಾನೀಸ್ ಫ್ಯಾಕ್ಟರಿ, ಜಪಾನೀಸ್ ಟೌನ್‌ಶಿಪ್‌ಗೆ ಜಾಗ ಕೊಟ್ಟಿದ್ದೇವೆ. ಇಷ್ಟು ವೇಗವಾಗಿ ಬೆಳೆಯುತ್ತಿರುವಾಗ ಸಂಪರ್ಕ (ಕನೆಕ್ಟಿವಿಟಿ) ವ್ಯವಸ್ಥೆ ಬೇಕಲ್ಲವೇ ಎಂದು ಪ್ರಶ್ನಿಸಿದ ಅವರು, ರಸ್ತೆ, ಮೆಟ್ರೋ, ರೈಲು ಸಂಪರ್ಕ ಇದ್ದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂಬುದು ಉದ್ದೇಶ. ರಾಮನಗರ, ಕೋಲಾರ, ತುಮಕೂರು ನಗರಗಳನ್ನು ಬೆಳೆಸಿದರೆ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಎರಡು ವರ್ಷದ ಹಿಂದೆಯೇ ತುಮಕೂರಿಗೆ ಮೆಟ್ರೋ ಯೋಜನೆ ತೆಗೆದುಕೊಂಡು ಹೋಗಬೇಕು ಎಂದು ಪ್ರಸ್ತಾಪ ಮಾಡಿದ್ದೆ. ಮುಖ್ಯಮಂತ್ರಿಗಳು ಫಿಸಿಬಲಿಟಿ ಸ್ಟಡಿ ಮಾಡುವುದಾಗಿ 2024ರ ಬಜೆಟ್‌ನಲ್ಲಿ ಘೋಷಿಸಿದ್ದರು. ಫಿಸಿಬಲಿಟಿ ವರದಿಯಲ್ಲಿ ತುಮಕೂರು ಮೆಟ್ರೋ ಯೋಜನೆ ಬಗ್ಗೆ ಪಾಸಿಟಿವ್ ಆಗಿ ಕೊಟ್ಟಿದ್ದಾರೆ. ಎಲ್ಲರೊಂದಿಗೆ ಚರ್ಚೆ ಮಾಡಿ ಡಿಪಿಆರ್ ಮಾಡಲು ಅನುಮತಿ ಕೊಟ್ಟಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.
ಎರಡು-ಮೂರು ಕಂಪನಿಗಳು ಪಿಪಿಪಿ ಮಾದರಿಯಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿವೆ. ಹೂಡಿಕೆ ಮಾಡಲು ಸಿದ್ಧರಿದ್ದೇವೆ ಎಂಬುದಾಗಿ ಕತಾರ್ ಮೂಲದ ಕಂಪನಿಯವರು ಮುಖ್ಯಮಂತ್ರಿಯವರಿಗೆ ಅಧಿಕೃತವಾಗಿ ಪತ್ರ ನೀಡಿದ್ದಾರೆ. ಇಷ್ಟೆಲ್ಲ ಆಗಿರುವಾಗ, ಸಂಸದ ತೇಜಸ್ವಿ ಸೂರ್ಯ ಏನು ಅರಿಯದೆ, ಯಾವ ಉದ್ದೇಶಕ್ಕಾಗಿ ಆ ರೀತಿಯಾಗಿ ಮಾತನಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ನಾನು ಅವರೊಂದಿಗೆ ಮಾತಾಡುತ್ತೇನೆ. ಇದು ಸಂಘರ್ಷದ ಪ್ರಶ್ನೆಯಲ್ಲ. ‘ನಮಗೆ ಬೇಕು, ನಿಮಗೆ ಬೇಡ. ನಮಗೆ ಬೇಡ, ನಿಮಗೆ ಬೇಕು’ ಎಂಬ ಪ್ರಶ್ನೆಯೂ ಅಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಪ್ರಗತಿಯ ರಾಜ್ಯ
ನಾವು ಅಧಿಕಾರದಲ್ಲಿದ್ದಾಗ ಒಂದು ಹೇಳಬಹುದು. ಮತ್ತೊಬ್ಬರು ಅಧಿಕಾರದಲ್ಲಿದ್ದಾಗ ಮತ್ತೊಂದು ಹೇಳಬಹುದು. ಆ ರೀತಿ ಆದರೆ ರಾಜ್ಯ ಬೆಳೆಯುವುದಿಲ್ಲ. ಕರ್ನಾಟಕ ಪ್ರಗತಿಯ ರಾಜ್ಯ. ಎಲ್ಲರೂ ನಮ್ಮ ರಾಜ್ಯದ ಕಡೆ ನೋಡುತ್ತಿದ್ದಾರೆ. ನಾನು ಅನೇಕ ದೇಶಗಳಿಗೆ ಹೋಗಿದ್ದೇನೆ. ಟೋಕಿಯೋದಲ್ಲಿ ನರೀಟ ಏರ್‌ಪೋರ್ಟ್ 70 ಕಿ.ಮೀ. ದೂರದಲ್ಲಿದೆ. ಮಲೇಷ್ಯಾದಲ್ಲಿ ಕೌಲಲಾಂಪುರಗೆ 20 ನಿಮಿಷದಲ್ಲಿ ಹೋಗುತ್ತಾರೆ. ಆ ರೀತಿ ಪಾಸಿಟಿವ್ ಆಗಿ ಯೋಚಿಸಬೇಕು. ನೆಗಿಟಿವ್ ಆಗಿ ಯೋಚಿಸಬೇಕಿಲ್ಲ ಎಂದಿದ್ದಾರೆ.
ನಾನು ಏಕಾಏಕಿಯಾಗಿ ಬಿಜೆಪಿಯವರು ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಹೇಳಲು ಹೋಗುವುದಿಲ್ಲ. ಅವರ ನಡೆದುಕೊಳ್ಳುವ ರೀತಿಯ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಕರ್ನಾಟಕ ಅಭಿವೃದ್ಧಿಯಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್, ಮೆಡಿಕಲ್ ಓದಲು ಕರ್ನಾಟಕಕ್ಕೆ ಬರುತ್ತಾರೆ? ಬೇರೆಬೇರೆ ರಾಜ್ಯಗಳಲ್ಲಿ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜುಗಳಿವೆ. ಅಲ್ಲಿಗೆ ಯಾಕೆ ಓದಲು ಹೋಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ಶಿಕ್ಷಣ ಸಿಗುತ್ತಿದೆ ಎಂದು ಬರುತ್ತಿದ್ದಾರೆ. ಕರ್ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾವು ನೋಡಬೇಕೆ ಹೊರತು, ಬೇರೆ ವಿಚಾರಗಳಿಂದಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ಪುನಾರಚನೆ ಆಗುತ್ತಾ?
ಸಂಪುಟ ಪುನರ್ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಇನ್ನು ಮುಖ್ಯಮಂತ್ರಿಗಳ ಜತೆ ಮಾತನಾಡಿಲ್ಲ. ದೆಹಲಿ ಭೇಟಿ ವೇಳೆ ಏನು ಮಾಡಿಕೊಂಡು ಬಂದ್ದಿದ್ದಾರೆ ಎಂದು ತಿಳಿದುಕೊಂಡು ನಿಮಗೆ ಹೇಳುತ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Namma Metro: ನಮ್ಮ ಮೆಟ್ರೋ ತುಮಕೂರಿಗೂ ವಿಸ್ತರಣೆ: ಬಿಎಂಆರ್‌ಸಿಎಲ್‌ನಿಂದ ಡಿಪಿಆರ್ ಆಹ್ವಾನ
ಇನ್ನು ಮಹಿಳೆಯ ಡಿಜಿಟಲ್ ಅರೆಸ್ಟ್ ಪ್ರಕರಣಕ್ಕೆ ಸಂಬಂಧಿಸಿ, ಸುಮಾರು 187 ಬಾರಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಇಷ್ಟೆಲ್ಲ ವಂಚನೆಯಾದ ಬಳಿಕ ಎಚ್ಚೆತ್ತುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ ಎಂದರೆ, ಸೈಬರ್ ವಂಚಕರು ಎಷ್ಟರ ಮಟ್ಟಿಗೆ ಹೆದರಿಸಬಹುದು. ಈ ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ ಇದೇ ಮೊದಲು. ಬೆಂಗಳೂರಿನಲ್ಲಿದ್ದುಕೊಂಡು ಅಮೆರಿಕದಲ್ಲಿದ್ದವರಿಗೆ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ ಮಾಡಿರುವ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ. ಈ ಪ್ರಕರಣವನ್ನು ಪತ್ತೆಹಚ್ಚುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.