ಗುಬ್ಬಿ: ತಾಲ್ಲೂಕಿನಲ್ಲಿ ಹೊಸ ಹಾಲಿನ ಡೈರಿ ನಿರ್ಮಾಣಕ್ಕೆ ಕಾನೂನುಬಾಹಿರ ಕ್ರಮ ಕೈಗೊಂಡು ಕಾಂಗ್ರೆಸ್ ಕಾರ್ಯಕರ್ತರ ಡೈರಿಯಾಗಿ ಮಾರ್ಪಾಡು ಮಾಡಲು ಗುಬ್ಬಿ ತಾಲ್ಲೂಕಿನಿಂದ ಆಯ್ಕೆ ಯಾದ ಹಾಲು ಒಕ್ಕೂಟದ ನಿರ್ದೇಶಕರಾದ ಭಾರತಿ ಶ್ರೀನಿವಾಸ್ ಅವರು ತಮಗೆ ಮತ ಹಾಕದ ಡೈರಿ ಮುಚ್ಚಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಎನ್ ಡಿ ಎ ಮುಖಂಡರು ಸುದ್ದಿಗೋಷ್ಠಿಯಲ್ಲಿ ನೇರ ಆರೋಪ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಡೈರಿಯಿಂದ ಪ್ರತಿ ವರ್ಷ ಒಂದು ಲಕ್ಷ ವಸೂಲಿ ಮಾಡಲು ತಯಾರಿ ನಡೆದಿದೆ. ಕಾರ್ಯದರ್ಶಿಗಳನ್ನು ಬೆದರಿ ಖಾಸಗಿ ಆಡಿಟ್ ನಡೆಸಿ ಉಳಿದ ಹಣವನ್ನು ಕಾರ್ಯದರ್ಶಿ ಜೊತೆ ಹಂಚಿಕೆ ಮಾಡಿಕೊಂಡು ಗುಳುಂ ಮಾಡುವ ತಂತ್ರ ಸಹ ನಡೆದಿದೆ ಎಂದು ದೂರಿದರು.
ಇದನ್ನೂ ಓದಿ: Gubbi News: ರಜತ ಮಹೋತ್ಸವ ಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುವ ಗುಬ್ಬಿಯ ಸಿಐಟಿ ಕಾಲೇಜು
ಬಡ ರೈತರು ಹಾಲು ಕರೆದು ಡೈರಿಗೆ ಹಾಕಿದರೆ ಗುಬ್ಬಿ ನಿರ್ದೇಶಕರು ಡೈರಿಯಿಂದಲೇ ಹಾಲು ಕರೆಯುತ್ತಿದ್ದಾರೆ. ಹೊಸ ಸೊಸೈಟಿ ಮಾಡಲು ಬೈಲಾ ಕಾನೂನು ಪ್ರಕಾರ ಎರಡು ಕಿಮೀ ಅಂತರ ಇರಬೇಕು. ಗ್ರಾಮಸಭೆ ನಡೆಸಬೇಕು. ಒಕ್ಕೂಟಕ್ಕೆ ಪತ್ರ ಬರೆಯಬೇಕು ಆದರೆ ಇಲ್ಲಿ ಯಾವುದೂ ಮಾಡದೆ ಕಾನೂನು ಗಾಳಿಗೆ ತೂರಿ ಹೊಸ ಡೈರಿ ತಮ್ಮ ಚೇಲಾಗಳಿಗೆ ಮಾಡಿಕೊಟ್ಟಿದ್ದಾರೆ.
ತಾಲ್ಲೂಕಿನ 140 ಡೈರಿ ಮೂಲಕ ತಲಾ ಒಂದು ಲಕ್ಷ ಹಣ ವಸೂಲಿ ಮಾಡಲು ಅಧಿಕಾರಿಗಳನ್ನು ಇವರಿಗೆ ಬೇಕಾದವರನ್ನು ನೇಮಿಸಿದ್ದಾರೆ. ಇಡೀ ಹಾಲು ಸಹಕಾರ ಕ್ಷೇತ್ರವನ್ನು ರಾಜಕೀಯ ಬೆರೆಸಿ ಕಾಂಗ್ರೆಸ್ ಪಕ್ಷವಾಗಿ ಮಾಡಲು ಮುಂದಾಗಿದ್ದಾರೆ. ಹೀಗೆ ಮುಂದುವರೆದರೆ ರೈತರು ದಂಗೆ ಏಳುತ್ತಾರೆ. ಕಚೇರಿಗೆ ಮುತ್ತಿಗೆ ಹಾಕುತ್ತಾರೆ. ಈ ಜೊತೆಗೆ ನಿರ್ದೇಶಕರ ಆಯ್ಕೆಯೇ ಕಾನೂನುಬಾಹಿರ.
ಆರು ತಿಂಗಳ ಪ್ರಕ್ರಿಯೆ ಒಂದೇ ತಿಂಗಳಲ್ಲಿ ಮುಗಿಸಿ ಡೈರಿಯಲ್ಲಿ ಸದಸ್ಯರಾಗಿ ನಿರ್ದೇಶಕರಾಗಿ ಸರ್ಕಾರದ ಪ್ರೋತ್ಸಾಹ ಧನ ಪಡೆದಿರುವುದು ಎಲ್ಲವೂ ಕಾನೂನುಬಾಹಿರ. ಈ ಬಗ್ಗೆ ಕಾನೂನು ಹೋರಾಟ ನಡೆದಿದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ರೈತರು ಉಗ್ರ ಪ್ರತಿಭಟನೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ ಹೊಸ ಡೈರಿಯನ್ನು ಅವರ ಬೆಂಬಲಿಗರನ್ನು ಬಳಸಿಕೊಂಡು ಸಭೆ ನಡೆಸಿದಂತೆ, ಹೊಸ ಡೈರಿಗೆ ಅವಶ್ಯಕತೆ ಇದೆ ಎಂದು ಕಾರ್ಯದರ್ಶಿಗಳನ್ನು ಬೆದರಿಸಿ ಪತ್ರ ಬರೆದು ನಿಯಮಬಾಹಿರಾಗಿ ಡೈರಿ ತೆರೆದು ಅವರ ಬೆಂಬಲಿಗರೇ ಸೊಸೈಟಿ ನಡೆಸುವ ರೀತಿ ಸೃಷ್ಟಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದಿತ್ತು. ಗುಬ್ಬಿಯ ನಿರ್ದೇಶಕರ ಕಾಟದ ಬಗ್ಗೆ ಅಲ್ಲಿಯ ಅಧಿಕಾರಿಯೊಬ್ಬರು ನೊಂದು ಹೇಳುತ್ತಾರೆ.
ಏನಾದರೂ ಹೆಚ್ಚುಕಮ್ಮಿ ಮಾಡಿಕೊಳ್ಳುವ ಮನಸ್ಥಿತಿ ಬಂದಿದೆ ಎಂದು ಬೇಸರವಾಗಿ ಹೇಳುತ್ತಾರೆ. ಇವೆಲ್ಲಾ ಗಮನಿಸಿದರೆ ಅನಾಹುತ ಗ್ಯಾರಂಟಿ ಎಂದ ಅವರು 2028 ಕ್ಕೆ ಈಗಲೇ ರಾಜಕೀಯ ಮಾಡುವ ಅಗತ್ಯವಿಲ್ಲ. ಹೈನುಗಾರಿಕೆ ಮಾಡುವ ರೈತರನ್ನು ಬಿಟ್ಟು ಹೇಮಾವತಿ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ರದ್ದು ಮಾಡಿಸಿ ನಿಮಗೆ ರೈತರು ಖಂಡಿತಾ ಮತ್ತೊಮ್ಮೆ ಗೆಲ್ಲಿಸುತ್ತಾರೆ. ಈ ಹೊಲಸು ರಾಜಕೀಯ ಬೇಡ ಎಂದರು.
ಕೆಎಂಎಫ್ ಮಾಜಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ಬೈಲಾ ಕಾನೂನು ಬಳಸದೆ ಹೊಸ ಡೈರಿಯನ್ನು ತೆರೆಯುವ ಉದ್ದೇಶ ಮೂಲ ಡೈರಿ ನಿರ್ಮೂಲನೆ ಮಾಡಲು ಎಂಬುದು ಎಲ್ಲರಿಗೂ ತಿಳಿದಿದೆ. ಅವರಿಗೆ ಮತ ನೀಡದ ಡೈರಿ ವಿರುದ್ಧ ಮಸಲತ್ತು ಮಾಡಿ ಅಚ್ಚುಕಟ್ಟಾಗಿ ನಡೆದ ಡೈರಿ ಮುಚ್ಚಿಸಿ ಹೊಸ ಡೈರಿ ತಮ್ಮ ಬೆಂಬಲಿಗರಿಗೆ ಮಾಡಿಸಿದ್ದಾರೆ. ತಾಲ್ಲೂಕಿನಲ್ಲಿ 28 ಡೈರಿಗಳ ಚುನಾವಣೆ ಮಾಡಲು ಬಿಡದ ಭಾರತಿ ಶ್ರೀನಿವಾಸ್ ಅವರು ಖಾಸಗಿ ಆಡಿಟ್ ಮಾಡಿಸಿ ಡೈರಿಯಿಂದ ವಸೂಲಿಗೆ ಮುಂದಾಗಿದ್ದಾರೆ.
ಉಳಿದ ಹಣವನ್ನು ಕಾರ್ಯದರ್ಶಿ ಜೊತೆ ಹಂಚಿಕೆ ಮಾಡಿಕೊಳ್ಳುವುದು ಸಹ ನಡೆದಿದೆ. ಹೊಸ ಡೈರಿಗೆ ನೂರು ಲೀಟರ್ ಹಾಲು ಬರುವ ಜಾಗದಲ್ಲಿ 250 ಬರುತ್ತಿದೆ ಎಂದು ಕ್ರಿಯೇಟ್ ಮಾಡುವುದು ನಡೆದಿದೆ. ಚಿಕ್ಕನಾಯಕನಹಳ್ಳಿ ತಾಲ್ಲೂಕು ಗುಡಿಸಿದ ಅಧಿಕಾರಿಗಳನ್ನು ಇಲ್ಲಿ ಬಳಸಿ ಒಂದು ಕೋಟಿ ಇರುವ ಡೈರಿಯಲ್ಲಿ ಲೂಟಿ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ ಅವರು ಸಾವಿರ ಹಸುಗಳನ್ನು ಕೊಡಿಸಿ ರೈತರು ಓಟು ನೀಡುತ್ತಾರೆ. ಈ ಭ್ರಷ್ಟಾಚಾರ ನಡೆ ಬಿಡದಿದ್ದರೆ ರೈತರು ಡಿಆರ್ ಕಚೇರಿ ಮುಂದೆ ಉಗ್ರ ಪ್ರತಿಭಟನೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಕಾನೂನುಬಾಹಿರ ಆಯ್ಕೆಯಾದ ನಿರ್ದೇಶಕರು ಹೈನುಗಾರಿಕೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ತಮಗೆ ಮತ ನೀಡದ ಹಾಗೂ ಬಿಜೆಪಿ ಜೆಡಿಎಸ್ ಬೆಂಬಲಿಗರ ಡೈರಿಯನ್ನು ನಿರ್ಮೂಲನೆ ಮಾಡಲು ಹೊಸ ಡೈರಿ ತೆರೆದು ಕಾಂಗ್ರೆಸ್ ಕಾರ್ಯಕರ್ತರನ್ನು ಅಧಿಕಾರಕ್ಕೆ ತರುತ್ತಿದ್ದಾರೆ.
ಡೈರಿ ಸವಲತ್ತು ಹಾಲು ಹಾಕದ ಬೆಂಬಲಿಗನಿಗೆ ನೀಡುತ್ತಿದ್ದಾರೆ. ಕಣ್ಣಿಗೆ ಕಾಣುವ ರೀತಿ ನಡೆದ ಅನ್ಯಾಯ ರೈತರಿಗೆ ತಿಳಿಯುತ್ತಿದೆ. ದ್ವೇಷ ರಾಜಕೀಯ ಹಾಲಿನ ವಿಚಾರದಲ್ಲಿ ಬರಬಾರದಿತ್ತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರು ದಂಗೆ ಏಳುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಚ್.ಟಿ.ಭೈರಪ್ಪ, ತಾಪಂ ಮಾಜಿ ಅಧ್ಯಕ್ಷ ಕರಿಗಡ್ಡಿ ಶಿವಣ್ಣ, ಮಾಜಿ ಉಪಾಧ್ಯಕ್ಷ ತಿಮ್ಮಣ್ಣ, ಮೈತ್ರಿ ಮುಖಂಡರಾದ ಶಿವಾನಂದ, ಚೇತನ್ ನಾಯಕ್, ವಿದ್ಯಾಸಾಗರ್, ಲೋಕೇಶ್, ರೇಣುಕಾ ಪ್ರಸಾದ್ ಇತರರು ಇದ್ದರು.