ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಸಿದ್ಧತೆಗೆ ಪೂರ್ವಭಾವಿ ಸಭೆ
ಪೂರ್ವಭಾವಿ ಸಭೆಯಲ್ಲಿ ಮಾರ್ಚ್ 5 ರಂದು ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸಕ್ಕೆ ಚಾಲನೆ ನೀಡಿ ಮಾರ್ಚ್ 9 ರಂದು ರಥೋತ್ಸವ ಹಾಗೂ ಮಾರ್ಚ್ 14 ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಪ್ರಮುಖ ದಿನಗಳಲ್ಲಿ ಸುವ್ಯವಸ್ಥೆ ಮಾಡುವ ಬಗ್ಗೆ ಹತ್ತು ಹಲವು ವಿಚಾರ ಚರ್ಚೆ ಮಾಡಿದರು


ಗುಬ್ಬಿ: ಐತಿಹಾಸಿಕ ಪ್ರಸಿದ್ಧ ಗುಬ್ಬಿಯ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಸಕಲ ಸಿದ್ಧತೆಗೆ ತಾಲ್ಲೂಕು ಆಡಳಿತ ಹಾಗೂ ವ್ಯವಸ್ಥಾಪನಾ ಸಮಿತಿ ಕರೆದಿದ್ದ ಪೂರ್ವ ಭಾವಿ ಸಭೆಯಲ್ಲಿ ಹದಿನೆಂಟು ಕೋಮಿನ ಮುಖಂಡರು ತಮ್ಮ ಸಲಹೆ ಸೂಚನೆ ನೀಡಿ ಅದ್ದೂರಿ ಜಾತ್ರೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ದಾಸೋಹ ನಿಲಯದಲ್ಲಿ ಉಪ ವಿಭಾಗಾ ಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾರ್ಚ್ 5 ರಂದು ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸಕ್ಕೆ ಚಾಲನೆ ನೀಡಿ ಮಾರ್ಚ್ 9 ರಂದು ರಥೋತ್ಸವ ಹಾಗೂ ಮಾರ್ಚ್ 14 ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಪ್ರಮುಖ ದಿನಗಳಲ್ಲಿ ಸುವ್ಯವಸ್ಥೆ ಮಾಡುವ ಬಗ್ಗೆ ಹತ್ತು ಹಲವು ವಿಚಾರ ಚರ್ಚೆ ಮಾಡಿದರು.
ಜಾತ್ರೆಯಲ್ಲಿ ಮಾರ್ಚ್ 20 ರಂದು ನಾಟಕರತ್ನ ಗುಬ್ಬಿ ವೀರಣ್ಣ ಅವರ ಕುಟುಂಬದವರಿಂದ ವಿಚಿತ್ರ ಮಂಟಪ ಉತ್ಸವ, ಮಾರ್ಚ್ 20 ರಂದು ತೆಪ್ಪೋತ್ಸವ ನಡೆದು ಮಾರ್ಚ್ 23 ರ ಭಾನುವಾರ ಸ್ವಾಮಿ ಯ ಚನ್ನಶೆಟ್ಟಿಹಳ್ಳಿ ಗದ್ದುಗೆ ಮಠ ತೆರಳಿ ರಾತ್ರಿ ಮರಳಿ ದೇವಾಲಯಕ್ಕೆ ಬರುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿರುವ ಎಲ್ಲಾ ಧಾರ್ಮಿಕ ವಿಧಿ ವಿಧಾನ ಚರ್ಚಿಸಿ ನಂತರ ಜಾತ್ರೆಗೆ ಅಗತ್ಯ ಮೂಲಸೌಕರ್ಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರತಿ ಬಾರಿ 12 ಲಕ್ಷಕ್ಕೂ ಅಧಿಕ ಹಣ ವ್ಯಯ ಆಗಲಿದೆ. ಈ ಬಾರಿ ಮತ್ತಷ್ಟು ಆರ್ಥಿಕ ಸಹಾಯ ದೇಣಿಗೆ ಮೂಲಕ ತರುವ ವಿಚಾರ ಪ್ರಸ್ತಾಪಿಸಿ ನಿರಂತರ ದಾಸೋಹ ವ್ಯವಸ್ಥೆ ಮಾಡಲು ಹಲವು ಸಿದ್ಧತೆ ಅಗತ್ಯ ಬಗ್ಗೆ ಕೂಡ ಚರ್ಚೆ ನಡೆಸಲಾ ಯಿತು.
ಸಾವಿರಾರು ಭಕ್ತಾದಿಗಳು ಹರಿದು ಬರುವ ಈ ದೊಡ್ಡ ಜಾತ್ರೆಗೆ ಮೊದಲು ವಸತಿ ಹಾಗೂ ಊಟದ ವ್ಯವಸ್ಥೆ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ರಥೋತ್ಸವ ಹಾಗೂ ಬೆಳ್ಳಿಪಲ್ಲಕ್ಕಿ ಉತ್ಸವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡುವುದು, ಬೆಸ್ಕಾಂ ಇಲಾಖೆ ಕರೆಂಟ್ ವ್ಯತ್ಯಯ ಆಗದಂತೆ ನಿರ್ವಹಿಸುವುದು, ಲೋಕೋಪಯೋಗಿ ಇಲಾಖೆ ರಥೋತ್ಸವ ವ್ಯವಸ್ಥೆ ಗಮನಿಸುವುದು, ಅಗ್ನಿಶಾಮಕದಳ ಮುನ್ನೆಚ್ಚರಿಕೆ ಕ್ರಮ, ಸಾರಿಗೆ ಇಲಾಖೆ ಮೂಲಕ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಹಾಗೂ ಆರೋಗ್ಯ ಇಲಾಖೆ ಸಂಚಾರಿ ಚಿಕಿತ್ಸಾಲಯ ತೆರೆಯುವುದು ಕಡ್ಡಾಯ ಮಾಡುವಂತೆ ಸೂಚನೆ ನೀಡಲಾಯಿತು.
ಈ ಸಭೆಯಲ್ಲಿ ತಹಶೀಲ್ದಾರ್ ಬಿ.ಆರತಿ, ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಮುಖ್ಯಾಧಿಕಾರಿ ಮಂಜುಳಾದೇವಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಯ್ಯ, ದಾಸೋಹ ಸಮಿತಿ ಅಧ್ಯಕ್ಷ ಕಾಯಿ ಸುರೇಶ್, ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ, ಯಜಮಾನ್ ಕುಮಾರಯ್ಯ, ಪಣಗಾರ್ ನಿಜಲಿಂಗಪ್ಪ, ಪಪಂ ಸದಸ್ಯ ರೇಣುಕಾ ಪ್ರಸಾದ್, ಪೇಶಗಾರ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ ಇತರರು ಇದ್ದರು.