Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು
ತುಮಕೂರು ಜಿಲ್ಲೆಯ ತಿಪಟೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳ್ಳತನ ನಡೆದಿದ್ದು, ಬೀಗ ಮುರಿದು 3,635 ಕೆಜಿ ಕೊಬ್ಬರಿಯನ್ನು ಕಳವು ಮಾಡಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ತಿಪಟೂರು ಎಪಿಎಂಸಿಯಲ್ಲಿ ನಡೆದ ಕಳವು ಪ್ರಕರಣದ ತನಿಖೆ.

ತುಮಕೂರು: ತುಮಕೂರು ಜಿಲ್ಲೆಯ ತಿಪಟೂರು ನಗರದ ಎಪಿಎಂಸಿ (Tiptur APMC) ಮಾರುಕಟ್ಟೆಯಲ್ಲಿ ಕಳ್ಳತನ ನಡೆದಿದೆ. ಸೋಮವಾರ (ಜ. 28) ರಾತ್ರಿ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಕೊಬ್ಬರಿ ಹೊತ್ತೊಯ್ದಿದ್ದಾರೆ (Robbery). ಎಪಿಎಂಸಿ ಮಾರುಕಟ್ಟೆಯ ಮುಖ್ಯ ದ್ವಾರದ ಬೀಗ, ಗಂಗಾ ಟ್ರೇಡರ್‌ನ ಕಂಪೌಂಡಿನ ಬೀಗ ಮತ್ತು ಬಾಗಿಲು ಬೀಗ ಮುರಿದು 3,635 ಕೆಜಿ ಕೊಬ್ಬರಿಯನ್ನು ಕಳವು ಮಾಡಲಾಗಿದೆ.
ಕದಿಯಲು ಬಂದ ಕಳ್ಳರು ಚಾಕು ಹಾಗೂ ಖಾರದ ಪುಡಿಯನ್ನು ತಂದಿದ್ದು, ಸಾಕ್ಷ್ಯ ನಾಶ ಮಾಡಲು ಅದನ್ನು ಅಲ್ಲೇ ಚೆಲ್ಲಿ ಹೋಗಿದ್ದಾರೆ. ಕಳ್ಳತನ ಪ್ರಕರಣವು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಟಿಜಿಎಂಸಿ ಬ್ಯಾಂಕ್‌ನಲ್ಲಿ 200 ಕೋಟಿ ರೂ. ಅವ್ಯವಹಾರ ಆರೋಪ
ತುಮಕೂರು ನಗರದ ಟಿ.ಜಿ.ಎಂ.ಸಿ. ಬ್ಯಾಂಕ್‌ನಲ್ಲಿ 20 ಖಾತೆಗಳಿಂದ ಸುಮಾರು 200 ಕೋಟಿ ರೂ. ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಕೋರಿ ಜಿ.ಎಸ್.ಬಸವರಾಜು ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ 8 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಬ್ಯಾಂಕ್‌ನ ದಿವ್ಯಾನಂದಮೂರ್ತಿ ಎಚ್., ಉಪಾಧ್ಯಕ್ಷ ನಟರಾಜು ಸಿ.ಆರ್., ನಿರ್ದೇಶಕರಾದ ಪ್ರಭು ಎಸ್.ಬಿ., ಮಹೇಶ್ ಎಂ, ಸುರೇಶ್ ಕುಮಾರ್, ಬಲರಾಮಶೆಟ್ಟಿ, ಸಿಇಒ ಸುರೇಶ್ ಜೆ., ಮೂರ್ತಿ ಎಚ್. ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Kidnap case: ಬಳ್ಳಾರಿಯಲ್ಲಿ ಖ್ಯಾತ ಮಕ್ಕಳ ವೈದ್ಯನ ಕಿಡ್ನ್ಯಾಪ್; 6 ಕೋಟಿ ಹಣಕ್ಕೆ ಡಿಮ್ಯಾಂಡ್!
ಟಿ.ಜಿ.ಎಂ.ಸಿ ಬ್ಯಾಂಕ್‌ನ 20 ಖಾತೆಗಳಲ್ಲಿ 200 ಕೋಟಿ ರೂ. ಅವ್ಯವವಹಾರ ನಡೆದಿರುವ ಬಗ್ಗೆ ಹಲವಾರು ದೂರುಗಳು ಸಹಕಾರ ಇಲಾಖೆಗೆ ನೀಡಲಾಗಿದೆ. ಸಹಕಾರ ಸಂಘಗಳ ನಿಬಂಧಕರು ಆರ್.ಸಿ.ಎಸ್/ಯು.ಬಿ.ಸಿ-1/ ಸೆಕ್ಷನ್ 64/2022-23 ದಿನಾಂಕ 02/05/2023ರ ಆದೇಶದಲ್ಲಿ ತನಿಖೆ ಮತ್ತು ವರದಿ ಮಾಡಲು ಸಹಕಾರ ಸಂಘಗಳ ಉಪ ರಿಜಿಸ್ಟ್ರಾರ್ ಅವರಿಗೆ ಆದೇಶಿಸಿದ್ದಾರೆ. ಈ ಸಂಬಂಧ ಟಿ.ಜಿ.ಎಂ.ಸಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸಿಇಒ, ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಇತರರು ಸಂಚು ರೂಪಿಸಿ ದಾಖಲೆ ಫೋರ್ಜರಿ ಮಾಡಿಸಿ ವಿಚಾರಣೆಗೆ ಹಾಜರುಪಡಿಸುವ ದಾಖಲೆಯನ್ನು ಹಿಂದಿನ ದಿನಾಂಕ ನಮೂದಿಸಿ ಪೋರ್ಜರಿ ಮಾಡಿ ಆರೋಪಿತರನ್ನು ರಕ್ಷಿಸಿ, ಕಾನೂನು ದಂಡನೆಯಿಂದ ತಪ್ಪಿಸಲು ಸುಳ್ಳು ಸಾಕ್ಷಿ ರಚಿಸಿ ಬ್ಯಾಂಕಿನಲ್ಲಿ ನಡೆದಿರುವ ಸುಮಾರು 200 ಕೋಟಿ ರೂ. ಹಣ ವಂಚನೆ ಬಗ್ಗೆ ಮುಚ್ಚಿಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.