ಗುಬ್ಬಿ: ತಾಲ್ಲೂಕಿನ ಸುರಿಗೇನಹಳ್ಳಿ ಗ್ರಾಮದ ಶ್ರೀ ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಶನಿವಾರದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಮಹಾದಾಸೋಹ ವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಶ್ರಾವಣ ಶನಿವಾರದ ಅಂಗವಾಗಿ ಬೆಳಗ್ಗೆಯಿಂದಲೇ ಶ್ರೀ ರಂಗನಾಥ ಸ್ವಾಮಿಯವರಿಗೆ ಅಭಿಷೇಕಾದಿ ಯಾಗಿ, ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ದೇವಸ್ಥಾನವನ್ನು ವಿಶಿಷ್ಟವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆ 11 ಗಂಟೆ ನಂತರ ಅಕ್ಕ ಪಕ್ಕದ ಗ್ರಾಮಸ್ಥರಿಂದ ಶ್ರೀ ಸ್ವಾಮಿಯವರಿಗೆ ವಿಶೇಷ ಆರತಿ ಸೇವೆ ಸಲ್ಲಿಸಲಾಯಿತು.
ಇದನ್ನೂ ಓದಿ: Gubbi News: ಅಭಿನಂದನಾ ಸಮಾರಂಭಕ್ಕೆ ದಲಿತ ಪರ ಸಂಘಟನೆಗಳಿಗೆ ಆಹ್ವಾನ: ಗುಬ್ಬಿ ಬಸವರಾಜ್
ಮಹಿಳೆಯರು ಮೆರವಣಿಗೆಯಲ್ಲಿ ಆರತಿ ಹೊತ್ತು ಬಂದು ಶ್ರೀ ಸ್ವಾಮಿಯವರಿಗೆ ತಮ್ಮ ಭಕ್ತಿ ಸಮರ್ಪಿಸಿದರು. ನಂತರ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ನಂತರ ಸುರಿಗೇನ ಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರದಲ್ಲಿ ಭಕ್ತಾದಿಗಳಿಗೆ ಮಹಾದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಸ್ವಾಮಿಯವರ ದರ್ಶನ ಪಡೆದು ದಾಸೋಹವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಪ್ರಧಾನ ಅರ್ಚಕರು, ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.