ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ಮಯೋಗ ಸಿದ್ಧಾಂತದಿಂದ ಬದುಕಿನಲ್ಲಿ ಯಶಸ್ಸು ಗಳಿಸಬಹುದು: ಡಾ. ವಿಜಯಲಕ್ಷ್ಮಿ ದೇಶಮಾನೆ

Tumkur News: ತುಮಕೂರು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ 33ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆಯೋಜಿಸಲಾಗಿದ್ದ ಜೀವಂತ ದುರ್ಗಾಪೂಜಾ ಕಾರ್ಯಕ್ರಮವನ್ನು ಪದ್ಮಶ್ರೀ ಪುರಸ್ಕೃತೆ, ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಉದ್ಘಾಟಿಸಿ, ಮಾತನಾಡಿದ್ದಾರೆ.

ಕರ್ಮಯೋಗ ಸಿದ್ಧಾಂತದಿಂದ ಬದುಕಿನಲ್ಲಿ ಯಶಸ್ಸು: ವಿಜಯಲಕ್ಷ್ಮಿ ದೇಶಮಾನೆ

ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಜೀವಂತ ದುರ್ಗಾಪೂಜಾ ಕಾರ್ಯಕ್ರಮ. -

Profile
Siddalinga Swamy Jan 10, 2026 6:56 PM

ತುಮಕೂರು, ಜ.10: ಕರ್ಮಯೋಗದ ಸಿದ್ಧಾಂತವನ್ನು ಶ್ರೀಕೃಷ್ಣ ಪರಮಾತ್ಮನಿಂದ ಕಲಿತರೆ ಬದುಕಿನ ಪಯಣದಲ್ಲಿ ಯಶಸ್ಸು ಗಳಿಸಬಹುದು ಎಂದು ಪದ್ಮಶ್ರೀ ಪುರಸ್ಕೃತೆ, ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ತಿಳಿಸಿದರು. ನಗರದ (Tumkur News) ರಾಮಕೃಷ್ಣ ವಿವೇಕಾನಂದ ಆಶ್ರಮದ 33ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಜೀವಂತ ದುರ್ಗಾಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾತಾಪಿತೃಗಳು ಅನಕ್ಷರಾದರೂ ಮಕ್ಕಳನ್ನು ಜೀವನವನ್ನು ಸಮರ್ಥವಾಗಿ ಎದುರಿಸುವ ಧೈರ್ಯವನ್ನು ಕಲಿಸಿಕೊಟ್ಟರು. ಇಂತಹ ಸ್ವಾಭಿಮಾನದ ಛಲವೇ ಬಾಲ್ಯದಲ್ಲಿ ಬೇಡುತ್ತಾ ಬೆಳೆದ ನನಗೆ ತದನಂತರದಲ್ಲಿ ನನಗೆಲ್ಲವನ್ನೂ ಕೊಟ್ಟು ಪೋಷಿಸಿದ ಸಮಾಜಕ್ಕೆ ಕೃತಜ್ಞತೆಯಿಂದ ಮರುಪಾವತಿಸುವ ವಿವೇಚನೆಯನ್ನು ಜಾಗೃತಗೊಳಿಸಿತು. ಕೊಳೆಗೇರಿಯಲ್ಲಿ ಬೀದಿಬದಿಯಲ್ಲಿ ಹಣ್ಣು ಮಾರುವ ತಂದೆ-ತಾಯಿಗಳಿಗೆ ಜನಿಸಿದ ನಾನು ಏಕಾಗ್ರತೆಯಿಂದ ಪರಿಶ್ರಮವಹಿಸಿದ್ದರಿಂದ ಕ್ಯಾನ್ಸರ್‌ತಜ್ಞೆಯಾಗಿ ಯಶಸ್ಸು ಪಡೆಯಲು ಸಾಧ್ಯವಾಯಿತು ಎಂದರು.

ಹಣಕಾಸು ತಜ್ಞ ಹಾಗೂ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಮಾತನಾಡಿ, “ಸ್ತೀ ಶಿಕ್ಷಣ, ಸುರಕ್ಷೆ ಮತ್ತು ಅವರ ಪರಿಶ್ರಮಕ್ಕೆ ತಕ್ಕ ಗೌರವವನ್ನು ನೀಡುವುದು ಸಮಾಜದ ಮಾನವೀಯ ದೃಷ್ಟಿಕೋನವಾಗಬೇಕಿದೆ. ಮಕ್ಕಳಲ್ಲಿ ಅರಿವು ಮೂಡುವುದಕ್ಕೆ ಮೊದಲೇ ಧನಾತ್ಮಕ ಚಿಂತನೆಯನ್ನು ಬಿತ್ತಬೇಕು. ಸಮಾಜವನ್ನು ತೆರೆದ ಹೃದಯದಿಂದ ವೀಕ್ಷಿಸಿದಾಗ ನಾವು ಅರಿಯಬಹುದಾದ ಸತ್ಯವೇನೆಂದರೆ, ಅಧಿಕಾರಿಯ ಮಗುವು ಅಧಿಕಾರಿಯಾಗುವುದಕ್ಕಿಂತ ಆಟೋಚಾಲಕನ ಮಗು ಅಧಿಕಾರಿಯಾದದ್ದು ನೈಜ ಸತ್ಯ ಎಂದರು.

ತುಮಕೂರು ನಗರದ ಕೊಳೆಗೇರಿಗಳಲ್ಲಿ ವಾಸಿಸುವ ಹಾಗೂ ರಸ್ತೆಗಳಲ್ಲಿ ಭಿಕ್ಷೆ ಬೇಡುವ ಸುಮಾರು 225 ದೀನ ದಲಿತ ತಾಯಂದಿರನ್ನು ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಿ ಆಶ್ರಮಕ್ಕೆ ಆಹ್ವಾನಿಸಿ ಅವರನ್ನು `ಸಾಕ್ಷಾತ್ ಶ್ರೀ ಶಾರದಾದೇವಿʼ ಎಂದೇ ವೇದೋಕ್ತವಾಗಿ ಪೂಜಿಸಿ, ಶ್ರೀ ಲಲಿತಾಸಹಸ್ರನಾಮ ಪಾರಾಯಣದೊಂದಿಗೆ ವಸ್ತ್ರದಾನ , ಅನ್ನದಾನ ಮತ್ತು ಧಾನ್ಯದಾನಗಳೊಂದಿಗೆ ಸತ್ಕರಿಸಲಾಯಿತು. ಇಂತಹ ಅರ್ಥಗರ್ಭಿತ ಕಾರ್ಯಕ್ರಮವನ್ನು ಕಳೆದ 26 ವರ್ಷಗಳಿಂದ ಆಶ್ರಮವು ನೆರವೇರಿಸುತ್ತಾ ಬಂದಿದ್ದು, ಇಲ್ಲಿಯವರೆಗೂ ಸುಮಾರು 8000 ಅಶಕ್ತ ತಾಯಂದಿರು ಈ ಸತ್ಕಾರಕ್ಕೆ ಪಾತ್ರರಾಗಿದ್ದಾರೆಂಬುದು ಗಮನಾರ್ಹ.

ಸಮಾಜ ಸೇವಕ ವೀರಭದ್ರ ಬ್ಯಾಡಗಿ, ಶಿಲ್ಪಾ ಬ್ಯಾಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಆಶ್ರಮದ ಸೇವಾಕಾರ್ಯಗಳನ್ನು ಶ್ಲಾಘಿಸಿದರು.‌

Tumkur News: ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನೀಡಿ: ರಾಜ್ಯಾಧ್ಯಕ್ಷ ಸುಧಾಕರ್ ಆಗ್ರಹ

ಕಾರ್ಯಕ್ರಮದಲ್ಲಿ ಶ್ರೀಹರಿಶಾಸ್ತ್ರಿ ಮತ್ತು ವಿವೇಕಾನಂದ ಯುವಕ ಸಂಘದ ಶ್ರೀನಿಧಿ ವೇದಘೋಷ ನೆರವೇರಿಸಿದರು. ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದಜೀ, ಸ್ವಾಮಿ ಧೀರಾನಂದಜೀ, ಸ್ವಾಮಿ ಪರಮಾನಂದಜೀ ಹಾಗೂ ಚಿತ್ರದುರ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಬ್ರಹ್ಮನಿಷ್ಠಾನಂದಜೀ ಭಗವನ್ನಾಮ ಸಂಕೀರ್ತನೆಯನ್ನು ನೆರವೇರಿಸಿಕೊಟ್ಟರು.