Mahashivratri 2025: ತುಮಕೂರಿನ 2 ದೇಗುಲಗಳಲ್ಲಿ ಶಿವಲಿಂಗ ಸ್ಪರ್ಶಿಸುವ ಸೂರ್ಯರಶ್ಮಿ; ಕೌತುಕ ನೋಡಲು ಭಕ್ತರ ಕಾತರ
Mahashivratri 2025: ಶಿವರಾತ್ರಿಯಂದು ತುಮಕೂರು ನಗರದ ಚಿಕ್ಕಪೇಟೆಯ 1 ಸಾವಿರಕ್ಕೂ ಹೆಚ್ಚು ವರ್ಷಗಳ ಪುರಾತನ ಪಾರ್ವತಿ ಸಮೇತ ಶ್ರೀ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಹಿರೇತೊಟ್ಲುಕೆರೆಯ 350 ವರ್ಷ ಪುರಾತನವಾದ ನೊಳಂಬ ಅರಸರು ಪ್ರತಿಷ್ಠಾಪಿಸಿರುವ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಸೂರ್ಯನ ಕಿರಣ ಲಿಂಗವನ್ನು ಸ್ಪರ್ಶಿಸುತ್ತದೆ. ಈ ವಿಸ್ಮಯ ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.


ತುಮಕೂರು: ನಗರದ ಚಿಕ್ಕಪೇಟೆಯ 1 ಸಾವಿರಕ್ಕೂ ಹೆಚ್ಚು ವರ್ಷಗಳ ಪುರಾತನ ಪಾರ್ವತಿ ಸಮೇತ ಶ್ರೀ ಪ್ರಸನ್ನ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿಯಂದು ಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಲಿದೆ. ಈ ಕೌತುಕ ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಪ್ರತಿ ವರ್ಷ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಸೋಮೇಶ್ವರ ದೇವಾಲಯದಲ್ಲಿ ವಿಸ್ಮಯ
ಶಿವರಾತ್ರಿಯ ಮಾರನೇ ದಿನ ತಾಲೂಕಿನ ಹಿರೇತೊಟ್ಲುಕೆರೆಯ 350 ವರ್ಷ ಪುರಾತನವಾದ ನೊಳಂಬ ಅರಸರು ಪ್ರತಿಷ್ಠಾಪಿಸಿರುವ ಶ್ರೀ ಸೋಮೇಶ್ವರ ದೇವಾಲಯದಲ್ಲೂ ಸೂರ್ಯನ ಕಿರಣ ಲಿಂಗವನ್ನು ಸ್ಪರ್ಶಿಸುತ್ತದೆ. ಭಕ್ತರು ತಮ್ಮಇಷ್ಟಾರ್ಥ ನೆರವೇರಲು ಈ ದಿನದಂದು ದೇವರಲ್ಲಿ ಪ್ರಾರ್ಥಿಸುವ ಮೂಲಕ ಸೂರ್ಯನ ಕಿರಣ ಲಿಂಗವನ್ನು ಸ್ಪರ್ಶಿಸುವುದನ್ನು ಕಂಡು ಕಣ್ತುಂಬಿಕೊಳ್ಳಲಿದ್ದಾರೆ. ವರ್ಷಕ್ಕೊಮ್ಮೆ ಈ ವಿಸ್ಮಯ ಜರುಗುತ್ತದೆ. ಸೂರ್ಯರಶ್ಮಿ ಸ್ಪರ್ಶಿಸುವ ಸುಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಗುತ್ತದೆ.
![]()
ಶಿವರಾತ್ರಿ ಮರುದಿನ ಶ್ರೀ ಸೋಮೇಶ್ವರನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸುವ ವಿಸ್ಮಯ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿ ಪುನೀತರಾಗುತ್ತಾರೆ. ಪ್ರತಿ ವರ್ಷ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಚಂದ್ರಶೇಖರ್ ಆರಾಧ್ಯ, ಅರ್ಚಕರು, ಶ್ರೀ ಸೋಮೇಶ್ವರ ದೇವಸ್ಥಾನ
(ವರದಿ: ರಂಗನಾಥ ಕೆ. ಹೊನ್ನಮರಡಿ)
ಕಾರದೇಶ್ವರ ಮಠದ ಕರ್ತೃ ಗದ್ದುಗೆ ಲೋಕಾರ್ಪಣೆ

ತುಮಕೂರು: ತಾಲೂಕಿನ ಬೆಳ್ಳಾವಿಯ ಕಾರದೇಶ್ವರ ಮಠದ ಕಾರದ ಶಿವಯೋಗಿಗಿಗಳ ಕರ್ತೃ ಗದ್ದುಗೆ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶನಿವಾರ ಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಈ ವೇಳೆ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ, ಶಾಸಕ ಬಿ.ಸುರೇಶ್‌ಗೌಡ, ಮಾಜಿ ಸಂಸದ ಜಿ.ಎಸ್.ಬಸವರಾಜು ಮತ್ತಿತರ ಗಣ್ಯರು ಹಾಜರಿದ್ದರು.
ಶನಿವಾರ ಕಾರದ ವೀರಬಸವ ಸ್ವಾಮೀಜಿಗಳ ಸಮ್ಮುಖದಲ್ಲಿ ವಿವಿಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಕಾರದ ಶೀವಯೋಗಿಗಳು ಲಿಂಗೈಕ್ಯರಾಗಿ 116 ವರ್ಷಗಳು ಕಳೆದಿದ್ದು ಮಠದ ಆವರಣದಲ್ಲಿ ನಿರ್ಮಾಣ ಮಾಡಿರುವ ಅವರ ಗದ್ದುಗೆಯ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶನಿವಾರ ಬೆಳಗ್ಗೆ 6 ಗಂಟೆಯಿಂದ ಕಳಸಾರಾಧನೆ, ನೂತನ ವಿಮಾನಗೋಪುರಕ್ಕೆ ಕಳಸಕ್ಕೆ ಹಾಗೂ 108 ಶಿವಲಿಂಗಗಳಿಗೆ ಸಂಸ್ಕಾರಾದಿ ಕಾರ್ಯಗಳು, ಕರ್ತೃ ಗದ್ದುಗೆಗೆ ಧನಾದಿವಾಸ, ಪುಷ್ಪಾದಿವಾಸ, ಕರ್ತೃ ಗದ್ದುಗೆಗೆ ಮಹಾನ್ಯಾಸಪೂರ್ವಕ ರುದ್ರಾಭಿಷೇಕ, ಕ್ಷೀರಾಭಿಷೇಕ, ಮಹಾಭಿಷೇಕ ಮಹಾ ಮಂಗಳಾರತಿ ನೆರವೇರಿತು.
ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಕುಂಚಿಟಿಗರ ಸಂಸ್ಥಾನದ ಡಾ. ಹನುಮಂತನಾಥ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಬಿಂದುಶೇಖರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಸಿದ್ಧರಬೆಟ್ಟ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮಹಾ ತಪಸ್ವಿಗಳು, ಸಿದ್ಧಿಪುರುಷರು ಆದ ಕಾರದ ಶಿವಯೋಗಿಗಳ ಗದ್ದುಗೆಯನ್ನು ಅವರು ಲಿಂಗೈಕ್ಯರಾದ 116 ವರ್ಷಗಳ ನಂತರ ಇಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಕಾರದ ವೀರಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಭಕ್ತರ ಸಹಕಾರದಲ್ಲಿಸ ಈ ಮಠದ ಅಭಿವೃದ್ಧಿಯಾಗುತ್ತಿದೆ. ಶಿವಯೋಗಿಗಳು ನಡೆದಾಡಿದ ಪುಣ್ಯಭೂಮಿಯಲ್ಲಿ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಗದ್ದುಗೆ ನಿರ್ಮಾಣ ಮಾಡಿ ಶಾಸ್ತೊçÃಕ್ತವಾಗಿ ಪೂಜೆ, ಧಾರ್ಮಿಕ ಕಾರ್ಯಗಳೊಂದಿಗೆ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.
ಈ ವೇಳೆ ಕಾರದ ಶಿವಯೋಗಿಗಳ ಸೇವಾ ಸಮಿತಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಉಪಾಧ್ಯಕ್ಷ ಷಣ್ಮುಖಪ್ಪ, ಕಾರ್ಯದರ್ಶಿ ಎಂ.ಎಸ್.ಉಮೇಶ್, ಖಜಾಂಚಿ ಟಿ.ಡಿ.ರಮೇಶ್, ನಿರ್ದೇಶಕರಾದ ಟಿ.ಆರ್.ಸದಾಶಿವಯ್ಯ, ಟಿ.ಎಸ್.ಗಟ್ಟಿ, ಟಿ.ಸಿ.ಕಿಶೋರ್, ಮೃತ್ಯುಂಜಯಪ್ಪ, ನಂಜುಂಡಸ್ವಾಮಿ, ಶಿವಶಂಕರ್, ಸಿ.ಎ.ಬಸವರಾಜು, ಚನ್ನಬಸವಣ್ಣ, ಮುಖಂಡರಾದ ದಿಲೀಪ್‌ಕುಮಾರ್, ಚಂದ್ರಶೇಖರಬಾಬು, ಬಿ.ಬಿ.ಮಹದೇವಯ್ಯ, ಗೂಳೂರು ಶಿವಕುಮಾರ್, ರಘು ಹೆಬ್ಬಾಕ, ಅಂಬರೀಶ್, ನವೀನ್‌ಕುಮಾರ್, ಹರೀಶ್ ಸೇರಿ ವಿವಿಧ ಗಣ್ಯರು ಭಾಗವಹಿಸಿದ್ದರು.