ಗುಬ್ಬಿ: ಲವಲವಿಕೆಯಿಂದ ಆಟವಾಡುತ್ತಾ ಇದ್ದ ಯೋಗಿತಾ ಎಂಬ ಮುದ್ದು ಬಾಲಕಿಗೆ ಏಕಾಏಕಿ ಮೆದುಳು ನರವ್ಯೂಹಕ್ಕೆ ತಗುಲಿದ ಕ್ಯಾನ್ಸರ್ ಎಂಬ ಹೆಮ್ಮಾರಿ ನಾಲ್ಕನೇ ಹಂತ ತಲುಪಿ ನೋಡ ನೋಡುತ್ತಲೇ ಕಳೆದ ಅಕ್ಟೋಬರ್ ಮಾಹೆಯಲ್ಲಿ ಬಲಗೈ ಬಲ ಕಾಲು ಸ್ವಾಧೀನ ಕಳೆದುಕೊಂಡು ಚಿಕಿತ್ಸೆಗೆ ಪರದಾಡಿದ್ದ ಬಾಲಕಿಯ ಕುಟುಂಬಕ್ಕೆ ನೆರವಿನ ವಾಗ್ದಾನ ಮಾಡಿದ್ದ ತಾಲ್ಲೂಕು ಆಡಳಿತ ಸೋಮವಾರ ತಾಲ್ಲೂಕು ಕಛೇರಿ ಮತ್ತು ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳಿಂದ 3.30 ಲಕ್ಷ ರೂಗಳನ್ನು ಶಾಸಕ ಎಸ್.ಆರ್.ಶ್ರೀನಿವಾಸ್(MLA S R Srinivas) ಅವರ ಮೂಲಕ ಹಸ್ತಾಂತರಿಸ ಲಾಯಿತು.
ಪಟ್ಟಣದ ಸಮೀಪದ ಜಿ.ಹರಿವೇಸಂದ್ರ ಗ್ರಾಮದ ಮಂಜುನಾಥ್ ನೇತ್ರಾವತಿ ದಂಪತಿಯ ಮಗಳು ಯೋಗಿತಾ ಹತ್ತು ವರ್ಷ ವಯಸ್ಸಿನಲ್ಲೇ ಮೆದುಳು ಕ್ಯಾನ್ಸರ್ ಪೀಡಿತರಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಆಧಾರ್ ಕಾರ್ಡ್ ನಲ್ಲಿ ತಾಂತ್ರಿಕ ದೋಷ ಹಿನ್ನಲೆ ಕುಟುಂಬ ಅಲೆದಾಡಿ ಬೇಸತ್ತಿತ್ತು. ಈ ಮಾಹಿತಿ ತಿಳಿದ ಮಾಧ್ಯಮ ಕೂಡಲೇ ಮಗುವಿನ ನೆರವಿಗೆ ಜಿಲ್ಲಾಡಳಿತವನ್ನು ಎಚ್ಚರಿಸಿತು.
ಇದನ್ನೂ ಓದಿ: MLA S R Srinivas: ಬಿಡದಿ ರೈತರ ಸಂಕಷ್ಟಕ್ಕೆ ಕುಮಾರಸ್ವಾಮಿ ಕಾರಣ : ಶಾಸಕ ವಾಸಣ್ಣ
ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಯೋಗೀತಾಳ ಮನೆಗೆ ತಲುಪಿ ಸ್ಥಳ ದಲ್ಲೇ ಆಧಾರ್ ಕಾರ್ಡ್ ತಿದ್ದುಪಡಿ ಮತ್ತು ಪಡಿತರ ಚೀಟಿ ಹೆಸರು ಸೇರ್ಪಡೆ ಮಾಡಿಸಿ ಬಾಲಕಿಯ ಚಿಕಿತ್ಸೆಗೆ ಸ್ಪಂದಸಿದ್ದರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಸೂಚನೆ ಮೇರೆಗೆ ತಾಲ್ಲೂಕು ಆಡಳಿತ ಆರ್ಥಿಕ ನೆರವು ನೀಡಲು ಭರವಸೆ ನೀಡಿತು.
ನುಡಿದಂತೆ ತಾಲ್ಲೂಕು ಕಚೇರಿ ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ತಮ್ಮ ಸಹಾಯ ಹಸ್ತ ಚಾಚಿ ತಾಲ್ಲೂಕು ಕಛೇರಿಯಿಂದ ಎರಡು ಲಕ್ಷ ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳಿಂದ 1.30 ಲಕ್ಷ ರೂಗಳನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿದರು. ಸಂಗ್ರಹವಾದ ಹಣವನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮೂಲಕ ಬಾಲಕಿಯ ಕುಟುಂಬಕ್ಕೆ ಸೋಮವಾರ ಹಸ್ತಾಂತರ ಮಾಡಲಾಯಿತು.
ಮಗುವಿನ ಜೊತೆ ಮಾತನಾಡಿ ಸುದ್ದಿಗಾರರ ಜೊತೆ ಮಾತನಾಡಿ, ಶಾಸಕ ಎಸ್.ಆರ್.ಶ್ರೀನಿವಾಸ್, ಬಾಲಕಿಯ ಆರೋಗ್ಯ ಸುಧಾರಣೆ ಕಾಣುತ್ತಿದೆ. ಚಿಕಿತ್ಸೆ ಫಲಕಾರಿಯಾಗಿ ನಡೆದಿದೆ. ಮಗು ಯೋಗಿತಾ ಆರೋಗ್ಯ ಸುಧಾರಣೆಗೆ ಮುಖ್ಯಮಂತ್ರಿಗಳ ನಿಧಿಯಿಂದ ಚಿಕಿತ್ಸೆ ವೆಚ್ಚ ಭರಿಸುವ ಕೆಲಸ ಮಾಡು ತ್ತೇನೆ. ಈ ಜೊತೆ ಮಗುವಿಗೆ ಸಹಾಯ ಮಾಡುವವರ ಸಂಪರ್ಕಿಸಿ ಚಿಕಿತ್ಸೆಗೆ ಮತ್ತಷ್ಟು ಆರ್ಥಿಕ ನೆರವು ವ್ಯವಸ್ಥೆ ಮಾಡುತ್ತೇನೆ. ಈ ಜೊತೆಗೆ ಆರೋಗ್ಯ ಸುಧಾರಿಸಿದ ನಂತರ ಮಗುವಿನ ಶಿಕ್ಷಣ ವೆಚ್ಚ ನಾನು ವೈಯಕ್ತಿಕವಾಗಿ ಭರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಆರತಿ.ಬಿ., ತಾಪಂ ಇಓ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಉಪ ತಹಶೀಲ್ದಾರ್ ನಾಗಭೂಷಣ್, ಕಂದಾಯ ನಿರೀಕ್ಷಕ ಗುರುಪ್ರಸಾದ್ ಇತರರು ಇದ್ದರು.