MLC Rajendra Rajanna: ಹನಿ ಟ್ರ್ಯಾಪ್ ಇಲ್ಲ, ಕೊಲೆ ಯತ್ನ ನಡೆದಿದೆ: ಎಂಎಲ್‌ಸಿ ರಾಜೇಂದ್ರ ರಾಜಣ್ಣ
MLC Rajendra Rajanna: ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ಆದರೆ ಕೊಲೆಗೆ ಯತ್ನ ನಡೆದಿದೆ. ಕಳೆದ ನವೆಂಬರ್ 16 ರಂದು ಕ್ಯಾತ್ಸಂದ್ರದ ರಜತಾದ್ರಿ ಮನೆಯಲ್ಲಿ ನನ್ನ ಮಗಳ ಹುಟ್ಟುಹಬ್ಬ ಇತ್ತು. ಆ ಕಾರ್ಯಕ್ರಮದ ಹಿಂದಿನ ನ.15 ರಂದು ನಮ್ಮ ಮನೆಗೆ ಶಾಮಿಯಾನ ಹಾಕುವ ನೆಪದಲ್ಲಿ ಬಂದು ನನ್ನ ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ ಆರೋಪಿಸಿದ್ದಾರೆ.


ತುಮಕೂರು: 2024 ನವೆಂಬರ್ ತಿಂಗಳಿನಲ್ಲಿ ನನ್ನ ಕೊಲೆಗೆ ಸುಪಾರಿ ನೀಡಲಾಗಿತ್ತು. ನಾಲ್ಕು ತಿಂಗಳ ಹಿಂದೆ 5 ಲಕ್ಷಕ್ಕೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದೇನೆ, ಘಟನೆ ತುಮಕೂರಿನಲ್ಲಿ ನಡೆದಿರುವುದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ ಎಂದು ಎಂಎಲ್‌ಸಿ ರಾಜೇಂದ್ರ ರಾಜಣ್ಣ (MLC Rajendra Rajanna) ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿರುವ ಅವರು, ತಮ್ಮ ಮೇಲೆ ಕೊಲೆಯತ್ನ ನಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಎಸ್‌ಪಿ ಅಶೋಕ್ ಅವರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ಮೇಲೆ ಹನಿಟ್ರ್ಯಾಪ್ ನಡೆದಿಲ್ಲ. ಆದರೆ ಕೊಲೆಗೆ ಯತ್ನ ನಡೆದಿದೆ. ಕಳೆದ ನವೆಂಬರ್ 16 ರಂದು ಕ್ಯಾತ್ಸಂದ್ರದ ರಜತಾದ್ರಿ ಮನೆಯಲ್ಲಿ ನನ್ನ ಮಗಳ ಹುಟ್ಟುಹಬ್ಬ ಇತ್ತು. ಆ ಕಾರ್ಯಕ್ರಮದ ಹಿಂದಿನ ನ.15 ರಂದು ನಮ್ಮ ಮನೆಗೆ ಶಾಮಿಯಾನ ಹಾಕುವ ನೆಪದಲ್ಲಿ ಬಂದು ನನ್ನ ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದರು. ಈ ಕೊಲೆ ಯತ್ನದ ಸಂಗತಿ ನನಗೆ ಜನವರಿಯಲ್ಲಿ ಗೊತ್ತಾಯಿತು. ಆಗ ನನಗೆ ಬಾತ್ಮಿದಾರರ ಮೂಲಕ ಒಂದು ವಾಯ್ಸ್ ರೆಕಾರ್ಡ್ ಸಿಕ್ಕಿತು. ಆ ಆಡಿಯೊದಲ್ಲಿ ತುಮಕೂರಿನ ಮೂವರ ಹೆಸರುಗಳು ಉಲ್ಲೇಖವಾಗಿವೆ ಎಂದು ಹೇಳಿದರು.
ಮೂವರ ಪೈಕಿ ಒಬ್ಬಾತನ ಖಾತೆಗೆ 5 ಲಕ್ಷ ಹಣ ವರ್ಗಾವಣೆಯಾಗಿದೆ. ನನ್ನ ಹತ್ಯೆಗೆ ನೀಡಿದ ಹಣ ಇದಾಗಿದೆ. ಈ ಕೊಲೆ ಯತ್ನದ ಬಗ್ಗೆ ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ತಿಳಿಸಿದಾಗ ಮುಖ್ಯಮಂತ್ರಿಗಳು ಸೂಕ್ತ ದಾಖಲೆಗಳೊಂದಿಗೆ ಡಿಜಿಪಿಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು. ಅಂತೆಯೇ ಡಿಜಿಪಿ ಅವರನ್ನು ಭೇಟಿಯಾಗಿ ದೂರು ನೀಡಿದೆ. ಆದರೆ ತುಮಕೂರಿನಲ್ಲಿ ಕೃತ್ಯ ನಡೆದಿರುವುದರಿಂದ ಎಸ್ಪಿಯವರಿಗೆ ದೂರು ಕೊಡುವಂತೆ ಡಿಜಿಪಿ ಸೂಚಿಸಿದ್ದರು. ಹಾಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದರು.
ಈ ಸುದ್ದಿಯನ್ನೂ ಓದಿ | KN Rajanna: ಬ್ಲೂ ಜೀನ್ಸ್ ಹುಡುಗಿ ಹನಿ ಟ್ರ್ಯಾಪ್ ಮಾಡಲು ಬಂದಿದ್ದಳು: ಸಚಿವ ಕೆ.ಎನ್.ರಾಜಣ್ಣ
ರಾಜ್ಯಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ಸದ್ದು
ನವದೆಹಲಿ: ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಗ್ರಹಿಸಿದ್ದಾರೆ. ರಾಜ್ಯಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, 48 ಮಂದಿಯನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಎಂದು ಸಹಕಾರ ಸಚಿವರೇ ವಿಧಾನಸಭೆಯಲ್ಲಿ ಅಲವತ್ತುಕೊಂಡಿದ್ದಾರೆ. ಇದೊಂದು ಆಘಾತಕಾರಿ ಬೆಳವಣಿಗೆ. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು' ಎಂದು ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ವ್ಯಾಪಕ ಚಿನ್ನ ಕಳ್ಳಸಾಗಣೆ ನಡೆಯುತ್ತಿದ್ದು, ಇದರಲ್ಲಿ ಹಲವು ಸಚಿವರು ಭಾಗಿಯಾಗಿದ್ದಾರೆ ಎಂಬ ಆರೋಪ ಇದೆ. ಇದರ ಬಗ್ಗೆಯೂ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
'ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಲು ಬೆಳಗಾವಿ, ಮೈಸೂರು ಮತ್ತು ಕಲಬುರಗಿಯಲ್ಲಿ 6 ತಿಂಗಳೊಳಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಆದರೆ, ನ್ಯಾಯಾಲಯ ಸ್ಥಾಪನೆಗೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ' ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ, ಹಂಪಿಯಲ್ಲಿ ವಿದೇಶಿ ಪ್ರವಾಸಿಗರ ಹತ್ಯೆ, ಮೈಸೂರಿನ ಉದಯಗಿರಿ ಠಾಣೆಯ ಮೇಲೆ ದಾಳಿ ನಡೆಯಲು ಸರ್ಕಾರದ ವೈಫಲ್ಯವೇ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ದೂರಿದ್ದಾರೆ.