ಚಿಕ್ಕನಾಯಕನಹಳ್ಳಿ : ಸಿದ್ದನಕಟ್ಟೆ ಗ್ರಾಮದಲ್ಲಿ ತೆಂಗು ಅಭಿವೃದ್ದಿ ಮಂಡಳಿ ಹಾಗು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ತೋಟಗಾರಿಕೆ ಇಲಾಖೆಯು ಆಯೋಜಿಸಿದ್ದ ಪ್ರಾತ್ಯಕ್ಷಿಕೆ ತಾಕುಗಳ ನಿರ್ವಹಣೆಯ ಪರಿಕರಗಳ ವಿತರಣೆ ಹಾಗು ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶಬಾಬು ಅವರು ರೈತರು ಆಧುನಿಕ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ತೆಂಗು ಉತ್ಪಾದನೆ ಯನ್ನು ಹೆಚ್ಚಿಸಲು ಅಗತ್ಯ ಸಲಹೆ, ಕೀಟಗಳ ನಿಯಂತ್ರಣದ ಜೊತೆಗೆ ಔಷಧಿ ಹಾಗು ಯೋಜನೆಯ ಅನುಸಾರ ಸವಲತ್ತುಗಳನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು. ಇಲಾಖೆಯ ಈ ಸವಲತ್ತುಗಳಿಂದ ರೈತರಿಗೆ ಕೃಷಿ ವೆಚ್ಚ ಕಡಿಮೆಯಾಗಿ ಅಧಿಕ ಇಳುವರಿ ಪಡೆಯಲು ಸಹಾಯಕವಾಗಲಿದೆ. ರೈತರು ಇಲಾಖೆಯ ಸೌಲಭ್ಯವನ್ನು ಸದುಪ ಯೋಗಪಡಿಸಿಕೊಂಡು ವೈಜ್ಞಾನಿಕ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕರು ಕರೆ ನೀಡಿದರು.
ಇದನ್ನೂ ಓದಿ: Chikkanayakanahalli News: ತಹಸೀಲ್ದಾರ್ ಕಚೇರಿಗೆ ಕಳಂಕ ! ನೂರಾರು ನಕಲಿ ಸಾಗುವಳಿ ಚೀಟಿ ವಿತರಣೆ ಜನರಲ್ಲಿ ಆತಂಕ
ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜಪ್ಪ ಮಾತನಾಡಿ ತೆಂಗು ಉತ್ಪಾದನೆಯನ್ನು ಹೆಚ್ಚಿಸಲು ತೆಂಗು ಅಭಿವೃದ್ದಿ ಮಂಡಳಿ ವಿಶೇಷ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಡಿ ರಾಮನಹಳ್ಳಿ ಮತ್ತು ಸಿದ್ದನಕಟ್ಟೆ ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು ಯೋಜನೆಯ ಅನುಸಾರ ರೈತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸ ಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ, ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗ ಲಕ್ಷಣಗಳು ಮತ್ತು ಅವುಗಳ ನಿವಾರಣೆ ಕುರಿತು ರೈತರಿಗೆ ಸುಧೀರ್ಘವಾಗಿ ಸಲಹೆ ಹಾಗು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ರೈತರಿಗೆ ತೆಂಗಿನ ಕೀಟ ಭಾದೆಯಿಂದ ರಕ್ಷಣೆ ನೀಡಲು ಔಷಧಿಗಳು, ಹೆಚ್ಚಿನ ಇಳುವರಿಗಾಗಿ ಬೇವಿನ ಹಿಂಡಿ, ಉತ್ತಮ ಫಲವತ್ತತೆಗಾಗಿ ಜೈವಿಕಗೊಬ್ಬರ, ಮತ್ತು ಇತರೆ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಸಹಾಯಕ ನಿರ್ದೇಶಕ ಚಿತ್ತೇಶ್, ಎಹೆಚ್‌ಓ ರಂಗಯ್ಯ, ರೈತರುಗಳಾದ ಶ್ರೀಧರ್, ಕೃಷ್ಣಮೂರ್ತಿ, ಚಂದ್ರಯ್ಯ ಸೇರಿದಂತೆ ಅನೇಕ ರೈತರು ಮತ್ತು ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ತೆಂಗು ಬೆಳೆಗಾರರಿಗೆ ಹೊಸ ಭರವಸೆ ಮೂಡಿಸಿತು.